ಪಕ್ಷಾಂತರಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ: ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ

Update: 2019-09-26 12:37 GMT

ಹರಿಜನ ಕಾಲೋನಿಯಲ್ಲಿ ಕಾಂಗ್ರೆಸ್ ಗಾಂಧಿ ಜಯಂತಿ

ತುಮಕೂರು,ಸೆ.26: ಪಕ್ಷಾಂತರ ಮಾಡುವ ಮೂಲಕ ಸರ್ಕಾರ ಪತನಗೊಳ್ಳಲು ಕಾರಣವಾಗಿರುವ ಪಕ್ಷಾಂತರಿಗಳಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆ ಬಗ್ಗೆ ಪ್ರಧಾನಿ ಬಳಿ ಹೋಗಿ ಮಾತನಾಡುವ ಧೈರ್ಯ ತೋರದ ಬಿಎಸ್‍ವೈ, ಪಕ್ಷಾಂತರಿಗೆ ಟಿಕೆಟ್ ಕೊಡುವುದಾಗಿ ಹೇಳಿ ಸರ್ಕಾರ ಪತನಗೊಳಿಸಿ ಈಗ ಪಕ್ಷದ ಮುಖಂಡರಿಗೆ ಕೈಗೊಡುವ ಮೂಲಕ ಗೋಸುಂಬೆತನ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಮುಖಂಡರಿಗೆ ಸ್ವಾಭಿಮಾನ ಇದ್ದರೆ, ಪಕ್ಷಾಂತರಿಗಳಿಗೆ ತಕ್ಕಪಾಠ ಕಲಿಸಬೇಕು ಎಂದ ಅವರು, ಜಿಲ್ಲಾ ಕಾಂಗ್ರೆಸ್ ವತಿಯಿಂದ ಅ.2ರಂದು ತುಮಕೂರು ನಗರದ ಹರಿಜನ ಕಾಲೋನಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಚರಿಸುವ ಮೂಲಕ ಗಾಂಧಿ ಜಯಂತಿ ಆಚರಿಸಲಾಗುವುದು. ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವುದಕ್ಕಾಗಿ ತಾಲೂಕು ಮುಖಂಡರೊಂದಿಗೆ ಸಭೆಯನ್ನು ನಡೆಸಿ, ಅಗತ್ಯವಿರುವ ಕಡೆ ಬ್ಲಾಕ್ ಕಾಂಗ್ರೆಸ್ ಪುನರ್‍ರಚನೆ ಮಾಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ, ರಾಜ್ಯದ 22 ಜಿಲ್ಲೆ 103 ತಾಲೂಕುಗಳು ನೆರೆಗೆ ತುತ್ತಾಗಿವೆ. ಕೇಂದ್ರ ಸಮಿತಿ ಬರಲಿಕ್ಕೆ 20 ದಿನ ತೆಗದುಕೊಂಡರು. ಆದರೆ ನಮ್ಮ ಪ್ರಧಾನಿ ಅಮೇರಿಕಾಕ್ಕೆ ಹೋಗಿ ಅಲ್ಲಿನ ಪ್ರವಾಹ ಪೀಡಿತರಿಗೆ ಸಂತಾಪ ಸೂಚಿಸುತ್ತಾರೆ. ನಮ್ಮ ರಾಜ್ಯದ ನೆರೆ ಸಂತ್ರಸ್ತರ ಬಗ್ಗೆ ಕನಿಷ್ಠ ಟ್ವೀಟ್ ಮಾಡುವ ಕಾಳಜಿಯನ್ನು ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರನ್ನು ಭೇಟಿ ಚರ್ಚಿಸಲು ಆಗದ ಶಕ್ತಿ ಹೀನ ಮುಖ್ಯಮಂತ್ರಿ ರಾಜ್ಯದಲ್ಲಿದ್ದಾರೆ, ಕೇಂದ್ರ ಸಮಿತಿ ನೀಡಿರುವ ವರದಿ ಬಗ್ಗೆ ಪಿಎಂ ಅವರೊಂದಿಗೆ ಮಾತನಾಡಲು ಸಿಎಂಗೆ ಸಮಯ ಕೊಡುತ್ತಿಲ್ಲ. ಕೇಂದ್ರ ಈ ಧೋರಣೆ ಬಗ್ಗೆ ಎಲ್ಲ ತಾಲೂಕುಗಳಲ್ಲಿ ಮುಖಂಡರೊಂದಿಗೆ ಚರ್ಚಿಸಿ, ಆಂದೋಲನ ರೂಪಿಸಲಾಗುವುದು ಎಂದು ಹೇಳಿದರು.

ಅವಿಶ್ವಾಸ ನಿರ್ಣಯದ ವೇಳೆ ಮೇಲಿಂದ ಮೇಲೆ ಪತ್ರ ಬರೆದ ರಾಜ್ಯಪಾಲರು, ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರಿಸ್ಥಿತಿ ಬಗ್ಗೆ ಒಂದು ಪತ್ರ ಬರೆಯಲು ಆಗುತ್ತಿಲ್ಲ. ರಾಜ್ಯದ ನೆರೆ ವೇಳೆ ಗೃಹ ಸಚಿವ ಅಮಿತ್‍ಶಾ ಕಾಟಾಚಾರದ ಭೇಟಿ ನೀಡಿದರು. ರಾಜ್ಯದ ಪಾಲಿನ ಎಸ್‍ಟಿಆರ್‍ಎಸ್, ಎನ್‍ಡಿಆರ್‍ಎಫ್ ಹಣವನ್ನಾದರೂ ಬಿಡುಗಡೆ ಮಾಡಿ ಎಂದರೆ, ಮೋದಿ 312 ಕೋಟಿ ನೀಡಿದ್ದಾರೆ ಎಂದರು.

ರಾಜ್ಯಕ್ಕೆ 312 ಕೋಟಿ ನೀಡಿರುವ ಮೋದಿ ಗುಜರಾತ್‍ಗೆ 4 ಸಾವಿರ ಕೋಟಿ, ಮಹಾರಾಷ್ಟ್ರಕ್ಕೆ 5 ಸಾವಿರ ಕೋಟಿ ಹಾಗೂ ಒಡಿಶ್ಶಾಗೆ 4 ಸಾವಿರ ಕೋಟಿ ಅನುದಾನವನ್ನು ನೀಡಿದ್ದಾರೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುವ ಮೋದಿ ಅವರು ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸಲಿ, ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ರೈತರ ಹೆಸರಿನಲ್ಲಿ ಎರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್‍ವೈ ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುವಾಗ ರೈತರನ್ನು ಮರೆತರು, ನೆರೆ-ಬರದಿಂದ ರೈತರು ಸಂಕಷ್ಟದಲ್ಲಿದ್ದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉದ್ದಿಮೆಗಳಿಗೆ ನೆರವಾಗುವಂತೆ ತೆರಿಗೆ ಸಬ್ಸಿಡಿಯನ್ನು ನೀಡಿದೆ. ಆದರೆ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಆಗುತ್ತಿಲ್ಲ ಎಂದು ದೂರಿದರು.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೆರೆ ಪರಿಹಾರಕ್ಕಾಗಿ ಹಣ ನೀಡಿಲಿಲ್ಲ ಎನ್ನುವ ಕಾರಣಕ್ಕೆ ವರ್ಗಾವಣೆ ಮಾಡಲಾಯಿತು. ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ಬಳಸಲು ಯತ್ನಿಸಿದಾಗ ಸಂಘಟನೆಗಳು ವಿರೋಧ ಪಡಿಸಿದವು ಆದರೂ ಕೇಂದ್ರ ಸರ್ಕಾರದಿಂದ ಬಿಡಿಗಾಸು ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿಲ್ಲ. ಬದಲಾಗಿ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸುತ್ತೇವೆ, ಕೇಂದ್ರದ ಹಣ ಬೇಕಿಲ್ಲ. 10 ಸಾವಿರ ಕೊಟ್ಟಿದ್ದೆ ಹೆಚ್ಚು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತರುಣೇಶ್, ರೇವಣಸಿದ್ದಯ್ಯ, ಆಟೋರಾಜು, ಮುಸ್ತಾಕ್ ಅಹ್ಮದ್, ಚಂದ್ರಶೇಖರ್ ಗೌಡ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News