ವಿಕ್ರಮ್ ಲ್ಯಾಂಡರ್ ಎಲ್ಲಿದೆಯೆಂದು ಇನ್ನೂ ಪತ್ತೆಯಾಗಿಲ್ಲ: ಇಸ್ರೋ

Update: 2019-09-27 04:13 GMT
ಫೋಟೊ: NASA

ಹೊಸದಿಲ್ಲಿ : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಮಿಷನ್ ಭಾಗವಾದ ವಿಕ್ರಮ್ ಲ್ಯಾಂಡರ್ ತಲುಪಬೇಕಾದ ಸ್ಥಾನದ ಬಳಿ ಹಾದು ಹೋಗುವ ಸಂದರ್ಭ ನಾಸಾದ ಲೂನಾರ್ ರಿಕೊನ್ಸೈಸಾನ್ಸ್ ಆರ್ಬಿಟರ್ ಕ್ಯಾಮರಾ (ಎಲ್‍ಆರ್ ಒಸಿ) ಸೆರೆ ಹಿಡಿದಿರುವ ಹೈ-ರೆಸೊಲ್ಯೂಶನ್ ಚಿತ್ರಗಳನ್ನು ನಾಸಾ ಬಿಡುಗಡೆಗೊಳಿಸಿದೆ. 

''ವಿಕ್ರಮ್ ಹಾರ್ಡ್ ಲ್ಯಾಂಡ್ ಆಗಿದೆ ಹಾಗೂ  ಚಂದ್ರನ ಮೇಲ್ಮೈ ಪದರದಲ್ಲಿ ಅದರ ನಿಖರ ಸ್ಥಳವನ್ನು ಇನ್ನಷ್ಟೇ ಗುರುತಿಸಬೇಕಿದೆ,'' ಎಂದು ಇಸ್ರೋ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆ ತಿಳಿಸಿದೆ.

ಚಂದ್ರನ ಮೇಲ್ಮೈ ಪದರದಲ್ಲಿ ಸೆ. 7ರಂದು ವಿಕ್ರಮ್ ಸಾಫ್ಟ್ ಲ್ಯಾಂಡ್ ಆಗಬೇಕಿತ್ತಾದರೂ ಹಾಗಾಗದೆ ಅದರ ಸಂಪರ್ಕ ಕಡಿದು ಹೋಗಿತ್ತು.

ನಾಸಾದ  ಕ್ಯಾಮರಾ ವಿಕ್ರಮ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಮೇಲೆ ಸೆ. 17ರಂದು ಹಾದು ಹೋಗುವಾಗ ಆ ಪ್ರದೇಶದ ಚಿತ್ರಗಳನ್ನು  ಸೆರೆ ಹಿಡಿದಿದ್ದು ಇಲ್ಲಿಯ ತನಕ ಈ ಕ್ಯಾಮರಾ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಹಾಗೂ ಅದರ ಚಿತ್ರವೂ ದೊರಕಿಲ್ಲ.

ಬೆಳಕಿನ ಸ್ಥಿತಿ ಉತ್ತಮವಾಗಿರುವಾಗ ಅ.14ರಂದು  ಎಲ್‍ಆರ್ ಒ ಮತ್ತೆ ವಿಕ್ರಮ್ ಲ್ಯಾಂಡಿಂಗ್ ಸ್ಥಳದ ಮೇಲೆ ಹಾದು ಹೋಗಲಿದೆ ಎಂದು  ಲೂನಾರ್ ರಿಕೊನ್ನೈಸಾನ್ಸ್ ಆರ್ಬಿಟರ್ ಮಿಷನ್, ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಇದರ ಡೆಪ್ಯುಟಿ ಪ್ರಾಜೆಕ್ಟ್ ವಿಜ್ಞಾನಿ ಜಾನ್ ಕೆಲ್ಲರ್ ತಿಳಿಸಿದ್ದಾರೆ.

''ವಿಕ್ರಮ್ ಲ್ಯಾಂಡ್ ಆದ ಸ್ಥಳದ ಚಿತ್ರ ತೆಗೆಯುವಾಗ ಸಂಜೆಯಾಗಿತ್ತು ಹಾಗೂ ಆ ಸ್ಥಳದಲ್ಲಿ ಬಹಳಷ್ಟು ನೆರಳಿತ್ತು, ನೆರಳಿನಡಿಯಲ್ಲಿ ವಿಕ್ರಮ್ ಲ್ಯಾಂಡರ್ ಅಡಗಿರುವ ಸಾಧ್ಯತೆಯೂ ಇದೆ. ಅಕ್ಟೋಬರ್ ನಲ್ಲಿ ಮತ್ತೆ ಎಲ್‍ಆರ್ ಒ ಆ ಸ್ಥಳದ ಮೇಲೆ ಹಾದು ಹೋಗುವಾಗ ಬೆಳಕಿನ ಸ್ಥಿತಿ ಉತ್ತಮವಾಗಲಿದೆ. ಈ ಸಂದರ್ಭ ಮತ್ತೊಮ್ಮೆ ಲ್ಯಾಂಡರ್ ಪತ್ತೆ ಹಚ್ಚಿ ಅದರ ಚಿತ್ರ ತೆಗೆಯುವ ಯತ್ನ ನಡೆಸಲಾಗುವುದು'' ಎಂದು ನಾಸಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News