ರೆಸಾರ್ಟ್‌ನಲ್ಲಿ ಐಟಿ ಎಂಜಿನಿಯರ್, ಪತ್ನಿ, ಮಕ್ಕಳ ಮೃತದೇಹ ಪತ್ತೆ

Update: 2019-09-27 04:22 GMT

ಭೋಪಾಲ್: ಐಟಿ ಎಂಜಿನಿಯರ್, ಆತನ ಪತ್ನಿ ಹಾಗೂ ಅವರ ಅವಳಿ ಮಕ್ಕಳ ಮೃತದೇಹ ಇಂಧೋರ್ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.

ಮೃತರನ್ನು ಅಭಿಷೇಕ್ ಸಕ್ಸೇನಾ (45), ಪತ್ನಿ ಪ್ರೀತಿ ಸಕ್ಸೇನಾ (42), ಅದ್ವಿತ್ (14) ಮತ್ತು ಅನನ್ಯ (14) ಎಂದು ಗುರುತಿಸಲಾಗಿದೆ. ಮೃತರ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದ್ದರಿಂದ ಹಾಗೂ ಬಾಯಲ್ಲಿ ನೊರೆ ಕಂಡುಬಂದ ಹಿನ್ನೆಲೆಯಲ್ಲಿ ಜತೆಗೆ ಕೊಠಡಿಯಲ್ಲಿ ರಾಸಾಯನಿಕದ ಬಾಟಲಿ ಪತ್ತೆಯಾಗಿದ್ದು, ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕ ನಿಜವಾದ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ರೆಸಾರ್ಟ್‌ಗೆ ಬಂದಿದ್ದ ಕುಟುಂಬ, ಗುರುವಾರ ಸಂಜೆವರೆಗೂ ಕೊಠಡಿಯಿಂದ ಹೊರಬಾರದ್ದನ್ನು ಕಂಡು ಸಂಶಯಗೊಂಡ ಸಿಬ್ಬಂದಿ, ಮಾಸ್ಟರ್‌ಕೀ ಸಹಾಯದಿಂದ ಕೊಠಡಿ ತೆರೆದು ನೋಡಿದಾಗ ನಾಲ್ಕು ಮೃತದೇಹಗಳು ಪತ್ತೆಯಾದವು.

ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಭಿಷೇಕ್ ತಾಯಿಗೆ ವಿಷಯ ತಿಳಿಸಲಾಗಿದ್ದು, ಅವರ ಸಂಬಂಧಿಕರು ದೆಹಲಿಯಲ್ಲಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ತಿಳಿಯಲಿದೆ. ಕೊಠಡಿಯಲ್ಲಿ ಪತ್ತೆಯಾದ ರಾಸಾಯನಿಕವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಧರ್ಮರಾಜ್ ಮೀನಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News