ದಾವಣಗೆರೆ: ನಿವೇಶನ ನೀಡುವಂತೆ ಒತ್ತಾಯಿಸಿ ಜಿ.ಪಂ. ಕಚೇರಿ ಎದುರು ಧರಣಿ

Update: 2019-09-27 18:32 GMT

ದಾವಣಗೆರೆ, ಸೆ.27: ಬಡ, ದಲಿತ, ಹಿಂದುಳಿದ ಕುಟುಂಬಗಳಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪಾಮೇನಹಳ್ಳಿ ಗ್ರಾಮಸ್ಥರು ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪ ನೇತೃತ್ವದಲ್ಲಿ ಇಲ್ಲಿನ ಜಿಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದ ಘಟನೆ ನಡೆಯಿತು. 

ಇಲ್ಲಿನ ಜಿಪಂ ಕಚೇರಿ ಎದುರು ನೇತೃತ್ವದಲ್ಲಿ, ತೋಳಹುಣಸೆ ಗ್ರಾಪಂ ವ್ಯಾಪ್ತಿಯ ಪಾಮೇನಹಳ್ಳಿ ಗ್ರಾಮದ 5.35 ಎಕರೆ ಜಮೀನನ್ನು ಗ್ರಾಮದ ಬಡ ಕುಟುಂಬಗಳಿಗೆ ಸೂರು ಕಲ್ಪಿಸಲು, ನಿವೇಶನ ನೀಡಲು ಬಳಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. 

ಇದೇ ವೇಳೆ ಕೆ.ಎಸ್.ಬಸವಂತಪ್ಪ ಮಾತನಾಡಿ, ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದ ಸ.ನಂ.43, 42ರಲ್ಲಿ 10.35 ಎಕರೆ ಜಮೀನಿನಲ್ಲಿ 5.35 ಗುಂಟೆ ಜಮೀನನ್ನು ತೋಳಹುಣಸೆ ಗ್ರಾಪಂಗೆ ನೀಡಿ, 5 ಎಕರೆಯನ್ನು ದಾವಣಗೆರೆ ಪಾಲಿಕೆ ಪಡೆದಿತ್ತು. ಗ್ರಾಮಸ್ಥರು ಹೈಕೋರ್ಟ್‍ನಲ್ಲಿ ಹೋರಾಟ ಮಾಡಿ, ಜಾಗವನ್ನು ಗ್ರಾಪಂ ಉಳಿಸಿತ್ತು. ನ್ಯಾಯಾಲಯವೂ ಗ್ರಾಮದ ಬಡ ಕುಟುಂಬಗಳಿಗೆ ಸೂರು ಕಲ್ಪಿಸಲು ಬಳಸುವಂತೆ ಆದೇಶಿಸಿತ್ತು ಎಂದರು. 

ಪಾಲಿಕೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳೂ ಗ್ರಾಪಂಗೆ ಜಾಗವನ್ನು ವಾಪಾಸ್ ನೀಡುವುದಾಗಿ ದಾವಣಗೆರೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ತಾಪಂ ಇಓ ಮಾತ್ರ ಭೂಮಿಯನ್ನು ವಾಪಾಸ್ ಪಡೆದು, ಪಾಮೇನಹಳ್ಳಿ ಗ್ರಾಮಸ್ಥರಿಗೆ ನಿವೇಶನ ನೀಡಲು ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.

ಪಾಮೇನಹಳ್ಳಿಯ ಒಟ್ಟು 10.35 ಎಕರೆ ಜಮೀನಿನ ಪೈಕಿ 5 ಎಕರೆಯಲ್ಲಿ 176 ನಿವೇಶನಗಳನ್ನು ವಿತರಿಸಲಾಗಿದೆ. ಇನ್ನೂ 180 ಕಡು ಬಡವರು ನಿವೇಶನ, ಸೂರು ಸಹ ಇಲ್ಲದೇ ವಂಚಿತರಾಗಿದ್ದಾರೆ. ಅಂತಹವರಿಗೆ ಈಗ ಪಾಲಿಕೆ ವಾಪಾಸ್ ನೀಡುವ ಭೂಮಿಯನ್ನು ಗ್ರಾಪಂ ಹೆಸರಿಗೆ ಮಾಡಿ, ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯಲ್ಲಿರುವ ಜನರಿಗೆ ಹಂಚಿಕೆ ಮಾಡಿ, ನಿವೇಶನಗಳನ್ನಾಗಿ ಪರಿವರ್ತಿಸಬೇಕು. ಆದರೆ, ತಾಪಂ ಇಓ ನಿರ್ಲಕ್ಷ್ಯದಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು. 

ಹೈಕೋರ್ಟ್ ಆದೇಶದಂತೆ 375 ನಿವೇಶಗಳನ್ನು ಹಂಚಬೇಕಿತ್ತು. ಆದರೆ, 176 ನಿವೇಶಗಳನ್ನು ಮಾತ್ರ ನೀಡಲಾಗಿದೆ. 180 ವಸತಿ ರಹಿತ ಕೂಲಿ ಕಾರ್ಮಿಕರು, ಹಿಂದುಳಿದವರು, ಪರಿಶಿಷ್ಟರು, ಕಡು ಬಡ ಕುಟುಂಬಗಳಿಗೆ ನಿವೇಶನ ನೀಡಲು ಸ್ವತಃ ತಾಪಂ ಅಧಿಕಾರಿಗಳೇ ಅಸಡ್ಡೆ ತೋರುತ್ತಿರುವುದು ಸರಿಯಲ್ಲ. ಗ್ರಾಮಸ್ಥರ ಮನವಿ ಮೇರೆಗೆ ಹಿಂದೆ ಸ್ವತಃ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಂತೆ ಪಾಲಿಕೆ ಜಾಗ ವಾಪಾಸ್ ನೀಡುತ್ತಿದೆ. ಆದರೆ, ತಾಪಂ ಇಓ ಕಚೇರಿಯಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿರುವುದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  

ಪಾಮೇನಹಳ್ಳಿ ಗ್ರಾಮಸ್ಥರಾದ ಗ್ರಾಪಂ ಸದಸ್ಯ ನಾಗಾರಜ, ಎನ್.ಶೇಖರಪ್ಪ, ನಾಗರಾಜ, ಪಿ.ಎಚ್.ಶಿವಮೂರ್ತಿ, ಪಿ.ಓ.ಶಿವರಾಂ, ತಿಪ್ಪೇಸ್ವಾಮಿ, ರುದ್ರಪ್ಪ, ಪಿ.ಟಿ. ಮಂಜಪ್ಪ, ನಾಗರಾಜ, ವೆಂಕಟೇಶ, ಮರುಳಪ್ಪ ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು. ಮನವಿ ಸ್ವೀಕರಿಸಿದ ಜಿಪಂ ಸಿಇಓ ಪದ್ಮಾ ಬಸವಂತಪ್ಪ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News