ತಮಿಳುನಾಡಿನಲ್ಲಿ ಬಯಲಾಯ್ತು 'ಮುನ್ನಾಭಾಯ್ ಎಂಬಿಬಿಎಸ್' ಗಳ ಬಣ್ಣ

Update: 2019-09-28 07:45 GMT

ಚೆನ್ನೈ: ತಮಿಳುನಾಡು ಪೊಲೀಸ್ ಇಲಾಖೆಯ ಸಿಐಡಿ ವಿಭಾಗ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ರಾಜ್ಯದಲ್ಲಿ ನಡೆದ ದೊಡ್ಡ ಅವ್ಯವಹಾರವನ್ನು ಬಯಲಿಗೆಳೆದಿದೆ. ವೈದ್ಯಕೀಯ ಪ್ರವೇಶಕ್ಕೆ ಆಕಾಂಕ್ಷಿ ವಿದ್ಯಾರ್ಥಿಗಳ ಬದಲಾಗಿ ಬೇರೆಯವರು ಇತರ ಕೇಂದ್ರಗಳಲ್ಲಿ ಅದೇ ಹೆಸರಿನಲ್ಲಿ ಪರೀಕ್ಷೆ ಬರೆದು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಗಿಟ್ಟಿಸಿಕೊಟ್ಟಿರುವ ಹಗರಣ ಇದಾಗಿದೆ.

ಥೇಣಿ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಉದಿತ್ ಸೂರ್ಯ (21) ಹಾಗೂ ಆತನ ತಂದೆ ಡಾ.ವೆಂಕಟೇಶನ್ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಪೊಲೀಸರು ಎಸ್‍ ಆರ್ ಎಂ ಕಾಲೇಜಿನ ಪ್ರವೀಣ್, ಬಾಲಾಜಿ ವೈದ್ಯಕೀಯ ಶಿಕ್ಷಣ ಕಾಲೇಜಿನ ರಾಹುಲ್ ಮತ್ತು ಸಾಯಿ ಸತ್ಯ ಮೆಡಿಕಲ್ ಕಾಲೇಜಿನ ಅಬಿರಾಮಿ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಈ ಹಗರಣ ಬೆಳಕಿಗೆ ಬಂದಿದೆ. ಈ ಅಭ್ಯರ್ಥಿಗಳ ಪರವಾಗಿ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಬೇರೆಯವರು ಪರೀಕ್ಷೆ ಬರೆದು ಗಳಿಸಿದ ಅಂಕಗಳ ಆಧಾರದಲ್ಲಿ ಇವರು ಪ್ರವೇಶ ಗಿಟ್ಟಿಸಿಕೊಂಡಿರುವುದು ಸಾಬೀತಾಗಿದೆ.

ತಮ್ಮ ಪರವಾಗಿ ಪರೀಕ್ಷೆ ಬರೆದವರಿಗೆ ಈ ವಿದ್ಯಾರ್ಥಿಗಳು ತಲಾ 20 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಭಾವಚಿತ್ರ ಹೊರತುಪಡಿಸಿ ಹೆಸರು, ವಯಸ್ಸು, ಅಂಕ ಪಟ್ಟಿ, ವಿಳಾಸ ಮತ್ತು ಅರ್ಜಿಯಲ್ಲಿನ ಇತರ ವಿವರಗಳು ನಕಲಿ ವಿದ್ಯಾರ್ಥಿಗಳ ವಿವರಗಳಿಗೆ ತಾಳೆಯಾಗುತ್ತಿವೆ ಎಂದು ಮೂಲಗಳು ಹೇಳಿವೆ.

ಭಾವಚಿತ್ರ ಪರಿಶೀಲಿಸಿಲ್ಲ:
ಅಭ್ಯರ್ಥಿಗಳ ಭಾವಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರೆ, ಹಗರಣ ಮೊದಲೇ ಬೆಳಕಿಗೆ ಬರುತ್ತಿತ್ತು. ಈ ವಿದ್ಯಾರ್ಥಿಗಳ ಪರವಾಗಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಲ್ಲ ವೈದ್ಯರು ಅಥವಾ ಬೋಧಕರು ಪರೀಕ್ಷೆಗೆ ಹಾಜರಾಗಿರುವ ಸಾಧ್ಯತೆ ಇದೆ. ಇತರ ಅಕ್ರಮ ಮಾರ್ಗಗಳ ಮೂಲಕವೂ ಇಂಥ ಪ್ರವೇಶ ಪಡೆದಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿದ್ಯಾರ್ಥಿಗಳ ಬಯೋಮೆಟ್ರಿಕ್ ವಿವರಗಳು ನೀಟ್ ಶಿಷ್ಟಾಚಾರದಲ್ಲಿ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿ ಹಾಗೂ ಲಕ್ನೋ ಪೊಲೀಸರ ಜತೆ ತನಿಖಾ ತಂಡ ಸಂಪರ್ಕ ಸಾಧಿಸಿದೆ. ಶಂಕಿತ ವಿದ್ಯಾರ್ಥಿಗಳ ಪರವಾಗಿ ಪರೀಕ್ಷೆ ಬರೆದವರ ಪತ್ತೆಗೆ ಜಾಲ ಬೀಸಲಾಗಿದೆ. ಸೂರ್ಯ ನೀಡಿದ ಮಾಹಿತಿಯನ್ನಾಧರಿಸಿ ತೀವ್ರ ತನಿಖೆ ನಡೆಸಿದಾಗ ಸೂರ್ಯನ ಐದಾರು ಮಂದಿ ಸ್ನೇಹಿತರು ಅಕ್ರಮ ಮಾರ್ಗಗಳ ಮೂಲಕ ಪ್ರವೇಶ ಪಡೆದಿರುವುದು ಪತ್ತೆಯಾಗಿದೆ. ಇನ್ನಷ್ಟು ಮಂದಿಯನ್ನು ಪ್ರಕರಣದ ಸಂಬಂಧ ಬಂಧಿಸುವ ಸಾಧ್ಯತೆ ಇದೆ.

'ಮಧ್ಯವರ್ತಿಗಳೂ ಶಾಮೀಲು':
ತಮಿಳುನಾಡಿನ ವಿದ್ಯಾರ್ಥಿಗಳು ಬೇರೆ ರಾಜ್ಯದ ಜತೆ ಸಂಪರ್ಕ ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆಗೆ, "ಇದರಲ್ಲಿ ಕೆಲ ಮಧ್ಯವರ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ. ಇತರ ರಾಜ್ಯಗಳಲ್ಲೂ ಇಂಥ ಅಕ್ರಮಗಳು ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ" ಎಂದು ಉತ್ತರಿಸಿದರು.

"ವಸೂಲ್ ರಾಜಾ ಎಂಬಿಬಿಎಸ್ ಚಿತ್ರದ ದೃಶ್ಯಕ್ಕೆ ಈ ಪ್ರಕರಣ ಅನುರೂಪವಾಗಿದ್ದು, ಚಿತ್ರದಲ್ಲಿ ಕಂಡುಬರುವಂತೆ ವಿದ್ಯಾರ್ಥಿಗಳ ಪರವಾಗಿ ಶಿಕ್ಷಕರು ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಈ ಜಾಲದಲ್ಲಿ ಶಾಮೀಲಾಗಿರುವ ಮಧ್ಯವರ್ತಿಗಳು ಅಭ್ಯರ್ಥಿಗಳಿಂದ 20 ಲಕ್ಷಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ" ಎಂದು ವಿವರಿಸಿದ್ದಾರೆ. ಎಸ್ಪಿ ವಿಜಯ್‍ಕುಮಾರ್ ನೇತೃತ್ವದ ತನಿಖಾ ತಂಡದ ಕಾರ್ಯಾಚರಣೆಯನ್ನು ಡಿಜಿಪಿ ಎಂ.ಎಸ್.ಜಾಫರ್ ಸೇಠ್ ಪರಿಶೀಲಿಸಿದ್ದಾರೆ.

ಒಂದು ಟ್ಯೂಷನ್ ಕೇಂದ್ರದ ಐದು ಮಂದಿ ವಿದ್ಯಾರ್ಥಿಗಳು ಇದರಿಂದ ಲಾಭ ಪಡೆದಿರುವ ಶಂಕೆ ಇದೆ. ಈ ಹಗರಣದ ರೂವಾರಿ ಕೇರಳದಲ್ಲಿದ್ದಾನೆ ಎನ್ನಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಕೇರಳಕ್ಕೆ ತೆರಳಿದ್ದಾರೆ. ವಾಸ್ತವವಾಗಿ ಪ್ರವೇಶ ಪಡೆದ ಅಭ್ಯರ್ಥಿಗಳು ಗಳಿಸಿದ ಅಂಕ, ನಕಲಿ ಅಭ್ಯರ್ಥಿಗಳು ಗಳಿಸಿದ ಅಂಕಕ್ಕಿಂತ ತೀರಾ ಕಡಿಮೆ ಇದೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News