ಫೋನ್ ಕದ್ದಾಲಿಕೆ ದೊಡ್ಡ ಅಪರಾಧ: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-09-28 16:53 GMT

ವಿಜಯಪುರ, ಸೆ.28: ಫೋನ್ ಕದ್ದಾಲಿಕೆ ಮಾಡುವುದು ತಪ್ಪು. ಅದರಲ್ಲಿಯೂ ಹಿರಿಯರಾದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡುವುದು ದೊಡ್ಡ ಅಪರಾಧ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಪ್ರಜೆ, ಪತ್ರಕರ್ತ ಸೇರಿದಂತೆ ಯಾರದ್ದೇ ಆಗಿರಲಿ ಫೋನ್ ಕದ್ದಾಲಿಕೆ ಮಾಡುವುದು ಅಪರಾಧವೇ ಎಂದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಫೋನ್ ಕದ್ದಾಲಿಕೆ ಪ್ರಕರಣದಲ್ಲಿಯೇ ಅಧಿಕಾರ ಕಳೆದುಕೊಂಡಿದ್ದರು. ಈಗ ಕೇಳಿ ಬರುತ್ತಿರುವ ಫೋನ್ ಕದ್ದಾಲಿಕೆಯ ಆರೋಪ ಎಷ್ಟು ಸತ್ಯ, ಎಷ್ಟು ಸುಳ್ಳು ಎನ್ನುವುದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾದು ನೋಡಬೇಕು ಎಂದು ಅವರು ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ ಮಹಾ ಮೇಧಾವಿ, ಅವರು ನೀಡುವ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯಿಸುವಷ್ಟು ನಾನು ದೊಡ್ಡವನಲ್ಲ. ಈಶ್ವರಪ್ಪ ಹೊರತುಪಡಿಸಿ ಬೇರೆ ಯಾರಾದರೂ ಹೇಳಿಕೆ ಕೊಟ್ಟರೆ, ಅದರ ಬಗ್ಗೆ ಅಗತ್ಯವಿದ್ದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪಾತ್ರ ಏನು ಇಲ್ಲ. ಆರೋಪ ಪಟ್ಟಿಯಲ್ಲಿಯೂ ವಿನಯ ಕುಲಕರ್ಣಿ ಹೆಸರು ಇಲ್ಲ. ಆದರೂ, ಮಾಧ್ಯಮಗಳ ವರದಿಗಳಲ್ಲಿ ಅನಗತ್ಯವಾಗಿ ಅವರ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಮಾದರಿಯಲ್ಲಿ ವಿಜಯನಗರ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸುವ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಹಿರಿಯ ಮುಖಂಡರ ಅಭಿಪ್ರಾಯವನ್ನು ರಾಜ್ಯ ಸರಕಾರ ಕ್ರೋಡೀಕರಿಸಬೇಕು. ಆನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News