ಸಾರಿಗೇತರ ವಾಹನಗಳಿಗೆ ಗ್ರೇಸ್ ಅವಧಿ ಮುಗಿದರೂ ಶುಲ್ಕ ವಿಧಿಸುವಂತಿಲ್ಲ: ಹೈಕೋರ್ಟ್

Update: 2019-09-29 17:12 GMT

ಬೆಂಗಳೂರು, ಸೆ.29: ಸಾರಿಗೇತರ(ಸ್ವಂತ ಉಪಯೋಗಕ್ಕೆ ಬಳಸುವ ವಾಹನಗಳು) ವಾಹನಗಳಿಗೆ ನಿಗದಿತ ರಿಯಾಯಿತಿ(ಗ್ರೇಸ್) ಅವಧಿ ಮುಗಿದ ಮೇಲೆ ಚಾಲನಾ ಪರವಾನಗಿ(ಡಿಎಲ್) ಹಾಗೂ ನೋಂದಣಿ ನವೀಕರಣಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ಸಂಬಂಧ 2016ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. 

ಡಿಎಲ್ ಹಾಗೂ ನೋಂದಣಿ ನವೀಕರಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವ ಸಂಬಂಧ ಕೇಂದ್ರ ಮೋಟರ್ ವಾಹನ ಅಧಿನಿಯಗಳು-1989ರ(ಸಿಎಂವಿ) ನಿಯಮ 32 ಹಾಗೂ 81ಕ್ಕೆ ತಂದಿರುವ ತಿದ್ದುಪಡಿಯನ್ನು ಕಾನೂನುಬಾಹಿರ ಎಂದು ಘೋಷಿಸಿರುವ ಹೈಕೋರ್ಟ್, ಈ ಸಂಬಂಧ 2016ರ ಡಿ.29ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದೆ. ಇದರಿಂದ, ರಾಜ್ಯದ ಲಕ್ಷಾಂತರ ವಾಹನ ಮಾಲಕರಿಗೆ ಉಂಟಾಗುತ್ತಿದ್ದ ಹೆಚ್ಚುವರಿ ಆರ್ಥಿಕ ಹೊರೆ ತಗ್ಗಿದಂತಾಗಿದೆ. ಹೆಚ್ಚುವರಿ ಶುಲ್ಕ ವಿಧಿಸಲು ಕೇಂದ್ರ ಸರಕಾರಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಈ ತೀರ್ಪು, ಸಿಎಂವಿ ನಿಯಮ ತಿದ್ದುಪಡಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮೇಲ್ಮನವಿ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ಪೀಠ, ಇದೇ ವೇಳೆ ಸ್ಪಷ್ಟಪಡಿಸಿದೆ. 

ಗ್ರೇಸ್ ಅವಧಿ ಮುಗಿದ ಕಾರಣ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚಿಸಿದ್ದನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಕೊಳ್ಳೇಗಾಲದ ಶಿವಣ್ಣ ಸೇರಿ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಏನಿದು ಹೆಚ್ಚುವರಿ ಶುಲ್ಕ: ಸಾರಿಗೇತರ ವಾಹನಗಳ ಡಿಎಲ್ ಹಾಗೂ ಆರ್‌ಸಿ ಅವಧಿ ಮುಕ್ತಾಯಗೊಂಡರೆ ಅವುಗಳ ನವೀಕರಣಕ್ಕಾಗಿ 30 ದಿನಗಳ ಗ್ರೇಸ್ ಅವಧಿ ಇರುತ್ತದೆ. ಸಿಎಂವಿ ನಿಯಮಗಳಿಗೆ ಕೇಂದ್ರ ಸರಕಾರ ತಂದಿದ್ದ ತಿದ್ದುಪಡಿ ಪ್ರಕಾರ, ಗ್ರೇಸ್ ಅವಧಿ ಮುಗಿದ ದ್ವಿಚಕ್ರ ವಾಹನಗಳ ನೋಂದಣಿ ನವೀಕರಣಕ್ಕೆ ತಿಂಗಳಿಗೆ 300 ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ತಿಂಗಳಿಗೆ 500 ರೂ.ಹೆಚ್ಚುವರಿ ಹಣವನ್ನು ವಾಹನ ಮಾಲಕರು ಪಾವತಿಸಬೇಕಿತ್ತು. ಡಿಎಲ್ ನವೀಕರಣಕ್ಕೆ ವರ್ಷಕ್ಕೆ 1 ಸಾವಿರ ರೂ.ಹೆಚ್ಚುವರಿ ಹಣ ಶುಲ್ಕ ಪಾವತಿಸಬೇಕಿತ್ತು. ಹೈಕೋರ್ಟ್ ಆದೇಶದಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ರಾಜ್ಯದ ಎಲ್ಲ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News