ಲಕ್ಷ್ಮಣ ರೇಖೆಯನ್ನು ದಾಟಿದ ಸಂಗಾತಿ....

Update: 2019-09-29 18:31 GMT

ಚಳವಳಿಯನ್ನೇ ಬದುಕಿನ ಉಸಿರಾಗಿಸಿಕೊಂಡ ಕವಿ, ಲೇಖಕ ಲಕ್ಷ್ಮಣ್ ಅವರು ಒಂದೂವರೆ ವರ್ಷಗಳ ಹಿಂದೆ ನಿಧನರಾದರು. ಹೋರಾಟದ ಒಂದು ಕೊಂಡಿಯೇ ಕಳಚಿಹೋದಂತೆ ರಾಜ್ಯದ ದಲಿತ ಚಳವಳಿ ಮಂಕಾಯಿತು. ಅಳಿದುಳಿದ ಹೋರಾಟಕ್ಕೆ ಚೈತನ್ಯ ತುಂಬುತ್ತಾ, ಅದನ್ನು ಜೀವಂತವಾಗಿರಿಸಲು ಹಗಲಿರುಳು ಶ್ರಮಿಸುತ್ತಿದ್ದವರು ಲಕ್ಷ್ಮಣ್. ಅವರ ನೆನಪುಗಳನ್ನು ಉಳಿಸುವ ಭಾಗವಾಗಿ, ಜೈ ಭೀಮ್ ಲಕ್ಷ್ಮಣ್ ಜಿ ಅವರು ‘ಜನತೆಯ ಸಂಗಾತಿ ಲಕ್ಷ್ಮಣ್ ಜಿ’ ಕೃತಿಯನ್ನು ಸಂಪಾದಿಸಿದ್ದಾರೆ.

1992ರಲ್ಲಿ ನೆಲ, ಜಲ, ಸಂಪತ್ತು, ಸಂಸ್ಕೃತಿ, ಭಾಷೆಯ ಹೆಸರಿನಲ್ಲಿ ಆರಂಭವಾದ ಕರ್ನಾಟಕ ವಿಮೋಚನಾ ರಂಗದ ಸಂಸ್ಥಾಪಕ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದ ಲಕ್ಷ್ಮಣ್‌ಜಿ, ಬಿಡದಿ ಸಾತನೂರು ಟೌನ್‌ಶಿಪ್ ವಿರುದ್ಧ ಹೋರಾಟ, ಬಿಎಂಐಸಿ ವಿರುದ್ಧದ ಹೋರಾಟ, ಕೆಜಿಎಫ್ ಚಿನ್ನದ ಗಣಿ ಸ್ಥಗಿತದ ವಿರುದ್ಧ ಹೋರಾಟ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಹೋರಾಟ, ಹಿಂದಿ ಹೇರಿಕೆ ವಿರುದ್ಧ ಹೋರಾಟ ಹೀಗೆ ಚಳವಳಿಯನ್ನೇ ಅವರು ಬದುಕನ್ನಾಗಿಸಿಕೊಂಡರು. ತಮ್ಮ ‘ಜಾತಿ ವಿನಾಶ ವೇದಿಕೆ’ ಮೂಲಕ ಪ್ರತಿ ವರ್ಷ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿಯನ್ನು ಮಾಡುತ್ತಾ ಬರುತ್ತಿದ್ದವರು. ಹಲವು ಅಂತರ್ ಜಾತಿ, ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಸಿದರು. ‘ದಲಿತರು ನಿಜಕ್ಕೂ ಹಿಂದೂಗಳೇ ಎಂದು ಒಪ್ಪಿಕೊಳ್ಳುವುದಾದರೆ ತಮ್ಮ ಮನೆಗೆ ಬಂದು ಊಟ ಮಾಡಿ’ ಎಂದು ಪೇಜಾವರಶ್ರೀಗಳಿಗೆ ಆಹ್ವಾನ ನೀಡಿದರು. ಆದರೆ ಪೇಜಾವರ ಶ್ರೀಗಳು ಇದನ್ನು ನಿರಾಕರಿಸಿದರು. ‘ನಮ್ಮನ್ನು ನೀವು ಹಿಂದೂಗಳು ಅಲ್ಲವೆಂದು ಒಪ್ಪಿಕೊಂಡಿರಿ’ ಎಂಬ ಲಕ್ಷ್ಮಣ್ ಅವರ ಖಾರ ಪ್ರತಿಕ್ರಿಯೆ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇಂತಹ ನಿಷ್ಠುರ ವ್ಯಕ್ತಿತ್ವದ ಕುರಿತಂತೆ ಈ ಕೃತಿಯಲ್ಲಿ ವಿವಿಧ ಪತ್ರಕರ್ತರು, ಚಿಂತಕರು, ಹೋರಾಟಗಾರರು ಬರೆದಿದ್ದಾರೆ.

ಲಕ್ಷ್ಮಣ್ ಜಿ ಅವರ ಬದ್ಧತೆಯ ಕುರಿತಂತೆ ಅಗ್ನಿ ಶ್ರೀಧರ್, ಚಿಂತನೆಗೆ ಹಚ್ಚಿದ ಒಡನಾಟದ ಬಗ್ಗೆ ಆಲುವಳ್ಳಿ ಆರ್. ಅಣ್ಣಪ್ಪ, ಲಕ್ಷ್ಮಣ ರೇಖೆಯನ್ನು ದಾಟಿದ ನೆನಪವನ್ನು ಉಲ್ಲೇಖಿಸಿ ಬಿ. ಆರ್. ಮಂಜುನಾಥ್, ಅವರ ಸರಳತೆಯ ಕುರಿತಂತೆ ಜಗದೀಶ್ ಚಂದ್ರ, ಜೀವಕಾರುಣ್ಯದ ಬಗ್ಗೆ ಹುಲಿಕುಂಟೆ ಮೂರ್ತಿ, ದಲಿತ-ಮುಸ್ಲಿಮ್ ಏಕತೆಯ ನಿಲುವಿನ ಕುರಿತು ಝಿಯಾವುಲ್ಲಾ, ವಿಶಾಲ ದೃಷ್ಟಿಕೋನದ ಬಗ್ಗೆ ಗೌರಿ-ಕುಮಾರು ಸಮತಳ, ಜನಪರ ತುಡಿತದ ಕುರಿತು ಮಂಜುನಾಥ ಅದ್ದೆ, ಕವಿಮನಸ್ಸನ್ನು ಉಲ್ಲೇಖಿಸಿ ನಂದಕುಮಾರ್ ಕೆ. ಎನ್., ಬುದ್ಧನ ನೆನಪುಗಳೊಂದಿಗೆ ಸಮೀಕರಿಸಿ ಪರಶುರಾಮ್ ಬರೆದಿದ್ದಾರೆ. ಡಾ. ಬೈರಮಂಗಲ ರಾಮೇಗೌಡ, ಡಾ. ಸಿ.ಎಸ್. ದ್ವಾರಕಾನಾಥ್, ಇರೈಯಡಿಯನ್ ಎನ್. ದಾಸ್, ಪ್ರವೀಣ್ ಜಗಾಟ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಕೋಟಿಗಾನ ಹಳ್ಳಿ ರಾಮಯ್ಯ, ನಗರಗೆರೆ ರಮೇಶ್, ಪ್ರೊ. ನಗರಿ ಬಾಬಯ್ಯ, ಪಾರ್ಥಸಾರಥಿ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ಶಿವಾನಂದ ಕೆಳಗಿನ ಮನಿ, ಸಿರಿಮನೆ ನಾಗರಾಜ್, ವಿ. ಎಸ್. ಶ್ರೀಧರ, ಯೋಗೇಶ್ ಮಾಸ್ಟರ್ ಸಹಿತ ಹಲವು ಚಿಂತಕರು ಲಕ್ಷ್ಮಣ್ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

 ಸಂಬೋಳಿ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 292 ಪುಟಗಳ ಈ ಕೃತಿಯ ಮುಖಬೆಲೆ 170 ರೂಪಾಯಿ. ಆಸಕ್ತರು 99802 32900 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News