ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ಖಚಿತ: ಸಿಎಂ ಯಡಿಯೂರಪ್ಪ

Update: 2019-09-30 12:25 GMT

ಶಿವಮೊಗ್ಗ, ಸೆ. 30: ರಾಜೀನಾಮೆ ನೀಡಿದ ಶಾಸಕರು ಭಯಪಡುವ ಅಗತ್ಯವಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು. ಪಕ್ಷದ ವರಿಷ್ಠ ಅಮಿತ್ ಶಾ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

ಸೋಮವಾರ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಸ್ವಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಿನ್ನೆ ಉಮೇಶ್ ಕತ್ತಿಯವರು ಅನರ್ಹರು ಬಿಜೆಪಿಗೆ ಬರುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳೇ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ನಮ್ಮ ದಾರಿ ನಮಗೆ. ಅನರ್ಹ ಶಾಸಕರ ದಾರಿ ಅವರಿಗೆ ಬಿಟ್ಟಿದ್ದು ಎಂಬ ಹೇಳಿಕೆಗೆ ಬಿ.ಎಸ್.ವೈ. ಮೇಲಿನಂತೆ ಸ್ಪಷ್ಟಪಡಿಸಿದ್ದಾರೆ. 'ಈ ವಿಷಯದಲ್ಲಿ ಪಕ್ಷದ ಮುಖಂಡರು ತದ್ವಿರುದ್ದ ಹೇಳಿಕೆ ನೀಡಬಾರದು. ಈಗಾಗಲೇ ತಾವು ಕತ್ತಿಯವರ ಜೊತೆ ಮಾತನಾಡಿದ್ದೇನೆ' ಎಂದು ಹೇಳಿದರು. 

ಅಧ್ಯಕ್ಷ ಸ್ಥಾನ: ಹಿರೆಕೇರೂರಿನಲ್ಲಿ ಯುಬಿ ಬಣಕಾರ ಅಂತಹವರು ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಅಂತಹ ಸೋತ ಅಭ್ಯರ್ಥಿಗಳನ್ನೂ ಕಡೆಗಣಿಸುವ ಪ್ರಮೇಯವೇ ಇಲ್ಲ. ಅವರನ್ನ ನಿಗಮ ಮಂಡಳಿಗೆ ನೇಮಕ ಮಾಡಿ ನ್ಯಾಯ ಕೊಡಲಾಗುವುದು. ಅಂತಹವರು ಯಾವುದೇ ಮಾತುಗಳಿಗೆ ಕಿವಿ ಕೊಡದೇ ಪಕ್ಷದ ಅಭಿವೃದ್ಧಿಗೆ ಪಕ್ಷ ನಿಲ್ಲಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

ಅಪಾರ್ಥ ಬೇಡ: ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂಬ ಹೇಳಿಕೆ ಕುರಿತಂತೆ ಸ್ಪಷ್ಟೀಕರಣ ನೀಡಿದ ಬಿಎಸ್‍ವೈ, 'ರಂಭಾಪುರ ಶ್ರೀಗಳು ಅನುಭವ ಮಂಟಪ ಕಟ್ಟಲು ಹೆಚ್ಚಿನ ಅನುದಾನ ನೀಡುವಂತೆ ಕೇಳಿದ್ದರು. ಪ್ರಸ್ತುತ ಹೆಚ್ಚಿನ ಅನುದಾನ ಕೊಡುವ ಸ್ಥಿತಿಯಲ್ಲಿ ತಾವಿಲ್ಲ. ಇತರೆ ಸಮುದಾಯದವರು ಸಹ ಇದನ್ನೇ ಕೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆ ರೀತಿಯ ಹೇಳಿಕೆ ಕೊಟ್ಟಿದ್ದೆ. ಇದರಲ್ಲಿ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ' ಎಂದು ಹೇಳಿದರು. 

ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆ, ಆಣೆಕಟ್ಟೆಗಳು ತುಂಬಿಕೊಂಡಿವೆ. ಆದರೆ ಕೆಲವು ಕಡೆ ಅತಿವೃಷ್ಠಿ ಉಂಟಾಗಿದೆ. ಮಳೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ತತ್‍ಕ್ಷಣವೇ 10 ಸಾವಿರ ರೂ. ಕೊಡಲಾಗುತ್ತಿದೆ. ಉಳಿದಂತೆ ಹಾನಿಗೆ ಅನುಗುಣವಾಗಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು. 

'ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ'
ಉಪ ಚುನಾವಣೆಯಲ್ಲಿ ಇವಿಎಂ ಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ದೇಶಕ್ಕೆ ಒಂದು ಕಾನೂನು. ರಾಜ್ಯಕ್ಕೆ ಒಂದು ಕಾನೂನು ಮಾಡಲು ಸಾಧ್ಯವೇ? ಅವರಿಗೆ ಹಿನ್ನಡೆಯಾದ ತಕ್ಷಣ ಈ ರೀತಿಯ ಹೇಳಿಕೆ ನೀಡಬಾರದು. ಇದು ಮಾಜಿ ಸಿಎಂಗೆ ಶೋಭೆ ತರುವಂತದ್ದಲ್ಲ' ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News