ನೆರೆ, ಬರ ಪರಿಹಾರಕ್ಕೆ ಒತ್ತಾಯಿಸಿ ತಲಕಾವೇರಿಯಿಂದ ಬೆಂಗಳೂರಿಗೆ ಜಾಥಾ

Update: 2019-09-30 12:08 GMT

ಚಾಮರಾಜನಗರ, ಸೆ.30: ನೆರೆ ಹಾಗೂ ಬರ ನಿರ್ವಹಣೆಗೆ ನೆರವು ನೀಡಲು ನಿರ್ಲಕ್ಷ್ಯ ತಾಳಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅ.12 ರಿಂದ 14 ರವರೆಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

2 ದಿನಗಳ ಕಾಲ ತಲಕಾವೇರಿಯಿಂದ ಬೆಂಗಳೂರಿಗೆ ವಾಹನ ಜಾಥಾ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ ಸಂತ್ರಸ್ತರ ಬಹಿರಂಗ ಅಧಿವೇಶನವನ್ನು ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳ ಹಲವು ಗ್ರಾಮಗಳಲ್ಲಿ ನದಿ ಪ್ರವಾಹದಿಂದ ಸಾವು- ನೋವು ಉಂಟಾಗಿದೆ. ಲಕ್ಷಾಂತರ ಎಕರೆ ಜಮೀನಿನಲ್ಲಿ ಬೆಳೆದಿದ್ದ ಫಸಲು ನಾಶವಾಗಿದೆ. ಸಹಸ್ರಾರು ಮನೆಗಳು ಕುಸಿದು ಅಪಾರ ನಷ್ಟವಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ ಎಂದು ಹೇಳಿದರು.

ಮಳೆ ಕೊರತೆಯಿಂದ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಬರದಿಂದ ತತ್ತರಿಸಿವೆ. ತೆಂಗು ಮತ್ತು ಅಡಕೆ ಮರಗಳು ಒಣಗಿ ರೈತರು ನಷ್ಟ ಅನುಭವಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಬರುತ್ತಿಲ್ಲ. ಕೃಷ್ಣ, ಘಟಪ್ರಭಾ, ಮಲಪ್ರಭಾ, ತುಂಗಾ ನದಿಗಳು ತುಂಬಿ ಹರಿದರೂ ಆ ಭಾಗದ ಕೆರೆಗಳಿಗೆ ನೀರು ತುಂಬಿಸಿಲ್ಲ ಎಂದರು.

ನೆರೆ ಮತ್ತು ಬರದಿಂದ ಜನರು ತತ್ತರಿಸಿದ್ದರೂ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿಲ್ಲ. ಈ ಸಂಬಂಧ ರಾಜ್ಯದ 25 ಬಿಜೆಪಿ ಸಂಸದರು ಈ ಕುರಿತು ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಸಹ ತಮ್ಮದೆ ಪ್ರಧಾನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ನೆರೆ, ಬರದಿಂದ ಆಗಿರುವ ನಷ್ಟವನ್ನು ತುಂಬಿಕೊಡಬೇಕು. ಜನರ ಬದುಕು ಸುಧಾರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಕೃಷಿ ಸಾಲ ಮನ್ನಾ ಮಾಡಬೇಕು. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಹಕ್ಕೊತ್ತಾಯ ಮಂಡಿಸಲು ಈ ಹೋರಾಟ ನಡೆಸಲಾಗುತ್ತಿದೆ ಎಂದರು.

ಅ.12 ರಂದು ಬೆಳಗ್ಗೆ 8 ಗಂಟೆಗೆ ಕೊಡಗಿನ ತಲಕಾವೇರಿಯಿಂದ ಜಾಥಾ ಹೊರಟು 10 ಗಂಟೆಗೆ ಮಡಿಕೇರಿ, 11ಕ್ಕೆ ಮುರ್ನಾಡು, ಮಧ್ಯಾಹ್ನ 12.30 ಕ್ಕೆ ವಿರಾಜಪೇಟೆ, 2ಕ್ಕೆ ಗೋಣಿಕೊಪ್ಪ, ಸಂಜೆ 4ಕ್ಕೆ ತಿತಿಮತಿ, 5.30ಕ್ಕೆ ಪಿರಿಯಾಪಟ್ಟಣ, ಸಂಜೆ 6.30ಕ್ಕೆ ಹುಣಸೂರು, ರಾತ್ರಿ 7ಕ್ಕೆ ಬಿಳಿಕೆರೆ, 7.30ಕ್ಕೆ ಇಲವಾಲಕ್ಕೆ ಆಗಮಿಸಿ ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಾಗುವುದು ಎಂದರು.

ಅ.13 ರಂದು ಬೆಳಗ್ಗೆ 11ಕ್ಕೆ ಮೈಸೂರಿನ ಪುರಭವನದಲ್ಲಿ ಸಭೆ ನಡೆಯಲಿದೆ. ನಂತರ ಜಾಥಾ ಮಧ್ಯಾಹ್ನ 12.30ಕ್ಕೆ ಶ್ರೀರಂಗಪಟ್ಟಣ, 1.30ಕ್ಕೆ ಮಂಡ್ಯ, ಸಂಜೆ 4ಕ್ಕೆ ಗೆಜ್ಜಲಗೆರೆ, 4.30ಕ್ಕೆ ಮದ್ದೂರು, 5.30ಕ್ಕೆ ಶಿವಪುರ, 6 ಗಂಟೆಗೆ ಚನ್ನಪಟ್ಟಣಕ್ಕೆ ಆಗಮಿಸಲಿದೆ. ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಲಿದೆ ಎಂದರು.

ಅ.14 ರಂದು ಬೆಳಗ್ಗೆ 8.30 ಗಂಟೆಗೆ ಜಾಥಾ ಹೊರಟು 9.30ಕ್ಕೆ ರಾಮನಗರ, 10.30ಕ್ಕೆ ಬಿಡದಿ, 11.15ಕ್ಕೆ ಕೆಂಗೇರಿ ಮೂಲಕ ರೈಲು ನಿಲ್ದಾಣ ತಲುಪಲಾಗುವುದು. ನಂತರ ಮೆರವಣಿಗೆ ಹೊರಟು ಮಧ್ಯಾಹ್ನ 1 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಅಧಿವೇಶನ ನಡೆಸಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಸಂಘದ ಜಿಲ್ಲಾಧ್ಯಕ್ಷ ಶಿವರಾಂ, ಮುಖಂಡರಾದ ಎ.ಎಂ.ಮಹೇಶಪ್ರಭು, ಜ್ಯೋತಿಗೌಡನಪುರ ಸಿದ್ದರಾಜು, ಹೆಬ್ಬಸೂರು ಬಸವಣ್ಣ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News