ಬಿಬಿಎಂಪಿ ಮೇಯರ್-ಉಪಮೇಯರ್ ಆಯ್ಕೆಗೆ ನಾಳೆ ಚುನಾವಣೆ

Update: 2019-09-30 12:17 GMT

ಬೆಂಗಳೂರು, ಸೆ.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ನಾಳೆ(ಅ.1) ಚುನಾವಣೆ ನಡೆಯಲಿದೆ.

ನಾಳೆ ಬೆಳಗ್ಗೆ 8 ರಿಂದ 9.30 ರವರೆಗೆ ನಾಮಪತ್ರಗಳ ಸಲ್ಲಿಕೆ ನಡೆಯಲಿದ್ದು, 9.30 ರಿಂದ 11 ರವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅನಂತರ 11.30 ರಿಂದ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತೆರಿಗೆ ಮತ್ತು ಸ್ಥಾಯಿ ಸಮಿತಿ, ಆರೋಗ್ಯ, ಆರ್ಥಿಕ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ.

ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಆಯ್ಕೆಗೆ ಸಂಬಂಧಿಸಿದ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರಿಂದ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ನಿಯಮಾನುಸಾರವಾಗಿ ಏಕಕಾಲಕ್ಕೆ ಚುನಾವಣೆ ನಡೆಯಬೇಕು. ಹೀಗಾಗಿ, ನಾಳೆ ನಡೆಯಬೇಕಿದ್ದ ಚುನಾವಣೆ ಮುಂದೂಡುವಂತೆ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ಇದ್ಯಾವುದಕ್ಕೂ ಮನ್ನಣೆ ನೀಡದ ಪ್ರಾದೇಶಿಕ ಆಯುಕ್ತರು ನಾಳೆ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾದೇಶಿಕ ಆಯುಕ್ತರಾದ ಹರ್ಷಾಗುಪ್ತಾ, ಕಾನೂನು ಪ್ರಕಾರ ಚುನಾವಣೆ ನಡೆಸಬೇಕಾಗಿದೆ ಎಂದಿದ್ದಾರೆ.

'ಬಿಬಿಎಂಪಿಯ ಮೇಯರ್ ಅಧಿಕಾರದ ಅವಧಿ ಸೆ.27ಕ್ಕೆ ಅಂತ್ಯವಾಗಲಿದೆ. ಮುಂದಿನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಈ ನಡುವೆ ಸರಕಾರ ಬರೆದಿರುವ ಪತ್ರ ನೋಡಿದ್ದೇನೆ. ಅಲ್ಲದೆ, ಹೈಕೋರ್ಟ್ ಆದೇಶ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯ್ದೆ ಆಧರಿಸಿ ಚುನಾವಣೆ ನಡೆಸುವ ತೀರ್ಮಾನ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

ಅಂತಿಮವಾಗದ ಅಭ್ಯರ್ಥಿಗಳು: ನಗರದ ಮೂರು ವಿಧಾನಸಭೆಗಳಿಗೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸೆ.27ಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ಇದೀಗ ದಿಢೀರ್ ನಡೆದ ಬೆಳವಣಿಗೆಯೊಂದರಲ್ಲಿ ನಾಳೆಯೇ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಸ್ಪಷ್ಟಪಡಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ.

ಬಿಜೆಪಿಯಿಂದ ಮೇಯರ್ ಆಕಾಂಕ್ಷಿ ಪಟ್ಟಿಯಲ್ಲಿ ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಸದಸ್ಯರಾದ ಮಂಜುನಾಥ್ ರಾಜ್, ಎಲ್.ಶ್ರೀನಿವಾಸ್, ಗೌತಮ್, ಉಮೇಶ್ ಶೆಟ್ಟಿ, ಮುನೀಂದ್ರ ಕುಮಾರ್ ಇದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಶ್ರೀನಿವಾಸ್ ಪರ ನಿಂತರೆ, ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವಥ್ ನಾರಾಯಣ್ ಮಂಜುನಾಥ್ ರಾಜ್‌ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ನಾಳೆ ಅಂತಿಮವಾಗಿ ಮೇಯರ್ ಯಾರು ಎಂಬುದು ನೋಡಬೇಕಿದೆ.

ಕಾಂಗ್ರೆಸ್ ಸ್ಪರ್ಧೆ ಖಚಿತ: ಮೇಯರ್ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಹಾಕುತ್ತಿದ್ದೇವೆ. ಮೇಯರ್ ಪಟ್ಟವನ್ನೂ ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಕಾಂಗ್ರೆಸ್‌ನ ಶಾಸಕರು ಅನರ್ಹರಾಗಿದ್ದಾರೆ ಎಂಬ ಕಾರಣಕ್ಕೆ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ನಾವು ಮೇಯರ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸದ್ಯದಲ್ಲೇ ಅಭ್ಯರ್ಥಿ ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ವಿಪ್ ಜಾರಿ: ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ತಮ್ಮ ಸದಸ್ಯರು ಕಡ್ಡಾಯವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ ವಿಪ್ ಜಾರಿ ಮಾಡಿವೆ. 

ಮ್ಯಾಜಿಕ್ ನಂಬರ್: 129

ಸದಸ್ಯರ ವಿವರ:

ಲೋಕಸಭೆ

ಕಾಂಗ್ರೆಸ್:1, ಬಿಜೆಪಿ:4

ರಾಜ್ಯಸಭೆ: ಕಾಂಗ್ರೆಸ್:6, ಬಿಜೆಪಿ:2, ಜೆಡಿಎಸ್:1

ವಿಧಾನಸಭೆ: ಕಾಂಗ್ರೆಸ್:11, ಬಿಜೆಪಿ: 11, ಜೆಡಿಎಸ್:01

ವಿಧಾನಪರಿಷತ್ತು: ಕಾಂಗ್ರೆಸ್: 10, ಬಿಜೆಪಿ: 07, ಜೆಡಿಎಸ್:05

ಪಾಲಿಕೆ ಸದಸ್ಯರು: ಕಾಂಗ್ರೆಸ್:76, ಜೆಡಿಎಸ್:14, ಬಿಜೆಪಿ: 101, ಪಕ್ಷೇತರರು:07

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News