ಮತ್ತೆ ಮತ್ತೆ ಬಸವಣ್ಣ....

Update: 2019-09-30 18:29 GMT

12ನೇ ಶತಮಾನ ದೇಶದ ಪಾಲಿಗೆ ಸಂಕ್ರಮಣ ಕಾಲ. ವಚನ ಚಳವಳಿ ಈ ನೆಲದಲ್ಲಿ ಜಾತಿಯ ವಿರುದ್ಧ ಬಂಡಾಯವೆದ್ದಿತು. ಪೌರೋಹಿತ್ಯದಿಂದ ನರಳುತ್ತಿದ್ದ ಸಮಾಜವನ್ನು ಮತ್ತೆ ಕಾಯಕದೆಡೆಗೆ ಮರಳುವಂತೆ ಮಾಡಿದ ಕಾಲಘಟ್ಟ ಅದು. ವರ್ತಮಾನ ಮತ್ತೆ ಅದೇ ಪೌರೋಹಿತ್ಯದ ಹಿಡಿತಕ್ಕೆ ಸಿಲುಕಿ ನರಳ ತೊಡಗಿದೆ. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣ ವೈದಿಕ ಚಿಂತನೆಗಳಿಗೆ ಔಷಧಿ ರೂಪದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಅಂಬೇಡ್ಕರ್ ಮತ್ತು ಬಸವಣ್ಣ ಅವರು ಮತ್ತೆ ಮತ್ತೆ ಚರ್ಚೆಗೆ ಬರುತ್ತಿದ್ದಾರೆ. ಅವರ ಚಿಂತನೆಗಳು ಬೇರೆ ಬೇರೆ ರೂಪಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ಆಂದೋಲನ ಜಾಗೃತವಾದಂದಿನಿಂದ ವಚನಗಳನ್ನು ಬೇರೆ ಬೇರೆ ಲೇಖಕರು ಸಂಗ್ರಹಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅವುಗಳಿಗೆ ಸರಳ ವ್ಯಾಖ್ಯಾನಗಳನ್ನು ನೀಡಿ ಜನರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಪ್ರಯತ್ನಗಳಲ್ಲಿ ಒಂದು ಸಿ. ಪಿ. ನಾಗರಾಜ ಅವರ ‘ಬಸವಣ್ಣ-ವಚನಗಳ ಓದು’. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದ ಸಮಗ್ರ ವಚನ ಸಾಹಿತ್ಯ ಸಂಪುಟಗಳನ್ನು ಆಧರಿಸಿ ನಾಗರಾಜ ಅವರು ಅವುಗಳನ್ನು ಸರಳವಾಗಿ ಅನುವಾದಿಸಿದ್ದಾರೆ.

ಇಲ್ಲಿ ಒಟ್ಟು 39 ವಚನಗಳು ಮತ್ತು ಅದರ ತಿರುಳನ್ನು ಲೇಖಕರು ನೀಡಿದ್ದಾರೆ. ‘ಇನ್ನೇವೆನಿನ್ನೇವೆಯ್ಯಾ/ ಎನ್ನ ಮನವೆಂಬ ಮರ್ಕಟ ದಾಳಿ ಘನವಾಯಿತ್ತು...’ ‘ಉಳ್ಳವರು ಶಿವಾಲಯ ಮಾಡಿಹರು ನಾನೇನ ಮಾಡುವೆ ಬಡವನಯ್ಯಾ...’, ‘ಎನ್ನ ನಡೆಯೊಂದು ಪರಿ/ಎನ್ನ ನುಡಿಯೊಂದು ಪರಿ/ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯೊ....’ ‘ಏನು ಬಂದಿರಿ ಹದುಳವಿದ್ದಿರೆ ಎಂದಡೆ/ನಿಮ್ಮೈಸಿರಿ ಹಾರಿ ಹೋಹುದೆ...’... ಅತ್ಯಂತ ಜನಪ್ರಿಯ ಮತ್ತು ಕ್ರಾಂತಿಕಾರಿ ವಚನಗಳ ಸಾಲುಗಳನ್ನು ಸರಳವಾಗಿ ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ. ಮುಖ್ಯವಾಗಿ ಹಳೆಗನ್ನಡದ ಇತರ ತ್ರಿಪದಿಗಳನ್ನು, ವಚನಗಳನ್ನು ಅನುವಾದಿಸಿದಂತೆ ಶರಣರ ವಚನಗಳನ್ನು ಅನುವಾದಿಸುವ ಅಗತ್ಯವಿಲ್ಲ. ಯಾಕೆಂದರೆ ಸರಳ, ತಿರುಳುಗನ್ನಡವೇ ವಚನಗಳ ಹೆಗ್ಗಳಿಕೆ. ಬಸವಣ್ಣನವರ ವಚನಗಳಂತೂ ಎಲ್ಲರಿಗೂ ಅರ್ಥವಾಗುವ ಸರಳಗನ್ನಡದಲ್ಲಿವೆ. ಇಲ್ಲಿ ಲೇಖಕರು ಕೆಲವು ವಚನಗಳನ್ನು ವಿಂಗಡಿಸಿ ಅರ್ಥೈಸಲು ಮುಂದಾಗಿದ್ದಾರೆ. ಹಾಗೆಯೇ ವಚನಗಳ ಆಶಯಗಳ ಬಗ್ಗೆ ಲಘು ಲೇಖನಗಳನ್ನು ಬರೆದಿದ್ದಾರೆ. ವರ್ತಮಾನಕ್ಕೆ ಅನ್ವಯವಾಗುವಂತೆ ಅವುಗಳನ್ನು ವಿಶ್ಲೇಷಿಸಿದ್ದಾರೆ. ಈ ಕೃತಿ ವಿದ್ಯಾರ್ಥಿಗಳಿಗೆ ಮತ್ತು ವಚನಾಸಕ್ತರಿಗೆ ಉಪಯುಕ್ತವಾಗಿದೆ. ಈ ಕೃತಿಯ ಎರಡನೆಯ ಭಾಗದಲ್ಲಿ ‘ವಚನದಿಂದ ಆಯ್ದ ಸಾಲು’ಗಳನ್ನು ಹೆಕ್ಕಿ, ಅವುಗಳ ಆಶಯಗಳನ್ನು ವಿವರಿಸಿದ್ದಾರೆ.

 ನಾಗು ಸ್ಮಾರಕ ಪ್ರಕಾಶನ, ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 142. ಮುಖಬೆಲೆ 120 ರೂ. ಆಸಕ್ತರು 99863 47521 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News