ಮಾಜಿ ಶಾಸಕ ಕೆ.ಎನ್.ರಾಜಣ್ಣರಿಗೆ ಈಡಿ ನೋಟಿಸ್

Update: 2019-10-01 12:36 GMT

ತುಮಕೂರು, ಅ.1 :ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾಲಕತ್ವದ ಹರ್ಷ ಶುಗರ್ ಕಾರ್ಖಾನೆಗೆ ಡಿಸಿಸಿ ಬ್ಯಾಂಕ್‍ನಿಂದ ಸಾಲ ಮಂಜೂರು ಮಾಡಿರುವ ಸಂಬಂಧ ಮಧುಗಿರಿ ಮಾಜಿ ಶಾಸಕ, ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದೆ.

ಸೆ.24ರಂದು ನೊಟಿಸ್ ಜಾರಿ ಮಾಡಿರುವ ಈಡಿ, ಅಕ್ಟೋಬರ್ 9ರಂದು ವಿಚಾರಣೆಗೆ ಹಾಜರಾಗುವಂತೆ ಕೆ.ಎನ್.ರಾಜಣ್ಣ ಅವರಿಗೆ ಸೂಚಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು, ದೂರವಾಣಿ ಹಾಗೂ ಇ-ಮೇಲ್ ಮೂಲಕವೂ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದು, ಹರ್ಷ ಶುಗರ್ಸ್‍ಗೆ ಸಾಲ ನೀಡಿರುವ ವಿಚಾರವಾಗಿ ಕರೆದಿರಬಹುದು, ವಕೀಲರೊಂದಿಗೆ ತೆರಳಿ ವಿಚಾರಣೆ ಎದುರಿಸುವುದಾಗಿ ಹೇಳಿದರು.

ಹರ್ಷ ಶುಗರ್ಸ್‍ಗೆ ಸಾಲ ನೀಡುವಾಗ ಎಲ್ಲ ಸೆಕ್ಯೂರಿಟಿ ಪಡೆದೆ ಸಾಲ ನೀಡಲಾಗಿದೆ. ರಾಜ್ಯದ ವಿವಿಧ ಬ್ಯಾಂಕ್‍ಗಳಿಂದ 300 ಕೋಟಿವರೆಗೂ ಸಾಲ ನೀಡಲಾಗಿದೆ ಎನ್ನಲಾಗಿದ್ದು, ತುಮಕೂರು ಡಿಸಿಸಿ ಬ್ಯಾಂಕ್‍ನಿಂದ 25 ಕೋಟಿ ಸಾಲ ನೀಡಲಾಗಿದೆ. ಎಲ್ಲಾ ಬ್ಯಾಂಕಿನ ನಿಯಮನುಸಾರ ಸಾಲ ನೀಡಲಾಗಿದೆ. ನಾನು ಇಲ್ಲಿವರೆಗೂ ಕೊಟ್ಟಿರೋ ಎಲ್ಲಾ ಸಾಲದ ಫೈಲ್ ತೆಗೆದುಕೊಂಡು ಹೋಗಿ ವಿಚಾರಣೆಗೆ ಹಾಜರಾಗುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಅಧಿಕಾರವಿದ್ದಾಗ ಮಾಡಬಹುದಿತ್ತಲ್ಲ: ಮಧುಗಿರಿ ಜಿಲ್ಲೆಯನ್ನು ಮಾಡುವಂತೆ ಸಿ.ಎಂ.ಗೆ ಡಾ.ಜಿ.ಪರಮೇಶ್ವರ್ ಅವರು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರೇ ಜಿಲ್ಲಾ ಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದಾಗ ಈ ವಿಷಯವನ್ನು ಏಕೆ ಕೈಗೆತ್ತಿಕೊಳ್ಳಲಿಲ್ಲ, ಅಧಿಕಾರವಿದ್ದಾಗ ಮಾಡುವುದನ್ನು ಬಿಟ್ಟು ಅಧಿಕಾರ ಇಲ್ಲದೇ ಇರುವಾಗ ಈ ವಿಚಾರವನ್ನು ಏಕೆ ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ. ಮಧುಗಿರಿ ಜಿಲ್ಲೆ ಮಾಡಲು ಅವರು ಪತ್ರ ಬರೆದಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News