ಮಹಿಷ ದಸರಾ: ಪರ-ವಿರೋಧ ಮುಖಂಡರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಲು ಕಾಂಗ್ರೆಸ್ ಒತ್ತಾಯ

Update: 2019-10-01 07:41 GMT

ಮೈಸೂರು, ಅ.1: ಮಹಿಷ ದಸರಾಗೆ ಅಡ್ಡಿಪಡಿಸಿದ ವಿಚಾರದಲ್ಲಿ ಪರಿಸ್ಥಿತಿ ದಿನೇ ದಿನೇ ಗಂಭೀರ ಸ್ವರೂಪ ಪಡೆಯುತಿದ್ದು ಜಿಲ್ಲಾಧಿಕಾರಿ ಅ.2ರೊಳಗೆ  ಬಹಿರಂಗ ಚರ್ಚೆಗೆ ಉಭಯ ಮುಖಂಡರುಗಳನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ತನ್ನ ನಿಲುವನ್ನು ಪ್ರಕಟಿಸಲಿದೆ ಎಂದು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷ ದಸರ ಆಚರಣೆಗೆ ಅಡ್ಡಿಪಡಿಸಿದ ಸಂಸದ ಪ್ರತಾಪ್ ಸಿಂಹ ಮತ್ತು ಮಹಿಷ ದಸರ ಸಮಿತಿಯ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ತನ್ನ ನಿಲುವು ಏನೆಂದು ಪ್ರಕಟಿಸಲಿದೆ ಎಂದು ಹೇಳಿದರು.

ಶಾಂತ ರೀತಿಯಲ್ಲಿ ನಡೆಯುತ್ತಿದ್ದ  ಮೈಸೂರು ದಸರಾವನ್ನು ಕೋಮು ಗಲಭೆಯನ್ನಾಗಿ ಪರಿವರ್ತಿಸಿ ಬಿಜೆಪಿ ದಸರವನ್ನಾಗಿ ಸಂಸದ ಪ್ರತಾಪ್ ಸಿಂಹ ಮಾಡಿದ್ದಾರೆ. ಈ ದಸರಾಕ್ಕೆ ಸೌಜನ್ಯಕ್ಕಾದರು ಯಾವೊಬ್ಬ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಿಲ್ಲ ಮತ್ತು ದಸರ ಉಪ ಸಮಿತಿಗಳಿಗೆ ಸಂಘ ಸಂಸ್ಥೆಗಳ ಪ್ರಮುಖರನ್ನು ಸದಸ್ಯರನ್ನಾಗಿ ಮಾಡಿಕೊಳ್ಳದೆ ಬರೀ ಬಿಜೆಪಿ ದಸರವನ್ನಾಗಿ ಆಚರಿಸುತ್ತಿದ್ದಾರೆ ಎಂದು ಶಕ್ರೋಶ ವ್ಯಕ್ತಪಡಿಸಿದರು.

ಕಳೆದ ಏಳು ವರ್ಷಗಳಿಂದಲೂ ದಲಿತರು, ಪ್ರಗತಿಪರರು ಅವರ ಪಾಡಿಗೆ ಮಹಿಷ ದಸರಾ ಆಚರಸಿಕೊಂಡು ಬರುತ್ತಿದ್ದರು. ಯಾವುದೇ ಗಲಾಟೆಗಳು ಸಂಭವಿಸಿರಲಿಲ್ಲ, ಆದರೆ ಈ ಬಾರಿ ಸಂಸದ ಪ್ರತಾಪ್ ಸಿಂಹ ಮಹಿಷ ದಸರ ಆಚರಿಸದಂತೆ ಅಡ್ಡಿಪಡಿಸಿದ್ದು ಐಪಿಎಸ್ ರ್ಯಾಂಕಿನ ಇಬ್ಬರು ಪೊಲೀಸ್ ಅಧಿಕಾರಿಗಳಾದ ನಗರ ಪೊಲೀಸ್ ಆಯಕ್ತರು ಮತ್ತು ಡಿಸಿಪಿ ಯವರನ್ನು ಅಪಮಾನಿಸಿರುವುದು ಅತ್ಯಂತ ಖಂಡನೀಯ. ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಶಾಂತ ರೀತಿಯಿಂದ ನಡೆಯುತ್ತಿದ್ದ ಮೈಸೂರು ದಸರಾವನ್ನು ಕೋಮುಗಲಭೆಯಾಗಿ ಪರಿವರ್ತಿಸಿರುವ ಸಂಸದ ಪ್ರತಾಪ್ ಸಿಂಹ ಮತ್ತು ಮಹಿಷ ದಸರ ಸಮಿತಿಯವರನ್ನು ಕರೆಸಿ ಮಾತುಕತೆ ನಡೆಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News