"ನಿಮ್ಮ ‘ಪ್ರತಾಪ’ ಏನಿದ್ದರೂ ಪ್ರಧಾನಿ ಬಳಿ ತೋರಿಸಿ, ನೆರೆ ಪರಿಹಾರ ತೆಗೆದುಕೊಂಡು ಬನ್ನಿ"

Update: 2019-10-01 09:44 GMT

ಮೈಸೂರು, ಅ.1: ಭಾರತದ ಮೂಲ ನಿವಾಸಿಗಳ ಆಚರಣೆಗೆ ಅಡ್ಡಿಪಡಿಸುವುದು, ಪೊಲೀಸರನ್ನ ಅಪಮಾನಿಸುವುದಲ್ಲ, ನಿಮಗೆ ತಾಕತ್ತಿದ್ದರೆ ಪ್ರಧಾನಿ ಬಳಿ ತೆರಳಿ ರಾಜ್ಯದ ನೆರೆ ಪರಿಸ್ಥಿತಿ ವಿವರಿಸಿ ಪರಿಹಾರದ ಹಣ ತೆಗೆದುಕೊಂಡು ಬನ್ನಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್ ನಾಥ್ ವಾಗ್ದಾಳಿ ನಡೆಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅಸಂವಿಧಾನಿಕ ಪದ ಬಳಸಿ ಪೊಲೀಸರಿಗೆ ಅಪಮಾನ ಮಾಡಿದ್ದಾರೆ, ಜೊತೆಗೆ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸುವ ಮೂಲಕ ಮೂಲನಿವಾಸಿಗಳ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನಿಮ್ಮ ಪ್ರತಾಪ ಏನಿದ್ದರೂ ಪ್ರಧಾನಿ ಬಳಿ ತೋರಿಸಿ, ನಿಮ್ಮ ಯೋಗ್ಯತೆ, ಶಕ್ತಿ, ತಾಕತ್ತಿದ್ದರೆ ನೆರೆ ಪರಿಹಾರ ತೆಗೆದುಕೊಂಡು ಬನ್ನಿ. ಈ ರೀತಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಬೇಡಿ ಎಂದು ಡಾ.ಪುಷ್ಪಾ ಎಚ್ಚರಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಎಲ್ಲಾ ಧರ್ಮ ಜಾತಿಯವರಿಗೂ ಅವರದೇ ಆದ ಸ್ವಾತಂತ್ರ್ಯ ಇದೆ. ಹಾಗಾಗಿ ಭಾರತದ ಮೂಲನಿವಾಸಿಗಳಾದ ದಲಿತರು, ಹಿಂದುಳಿದವರು ಅಲ್ಪ ಸಂಖ್ಯಾತರು ಸೇರಿದಂತೆ ಶೂದ್ರರು ಮಹಿಷ ದಸರ ಆಚರಿಸುತ್ತಿದ್ದರು. ಇವರ ಆಚರಣೆಗೆ ಅಡ್ಡಿಪಡಿಸುವ ಮೂಲಕ ಸಂಸದ ಪ್ರತಾಪ್ ಸಿಂಹ ಕೋಮು ಗಲಭೆಯನ್ನು ಹುಟ್ಟುಹಾಕಿದ್ದಾರೆ ಎಂದು ಆರೋಪಿಸಿದರು.

ಎಲುಬಿಲ್ಲದ ನಾಲಿಗೆ ಎಂದು ಬಾಯಿಗರ ಬಂದಹಾಗೆ ಮಾತನಾಡುವುದಲ್ಲ, ಓರ್ವ ಜನಪ್ರತಿನಿಧಿಯಾಗಿ ಎಲ್ಲಾ ಸಮುದಾಯದ ಮತಗಳನ್ನು ಪಡೆದಿರುವ ನೀವು ಧಾರ್ಮಿಕ ಭಾವನೆಗೆ ಅಡ್ಡಿಯಾಗದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ಎಸ್.ಎಲ್.ಭೈರಪ್ಪ ಹೇಳಿಕೆಗೆ ಖಂಡನೆ: ಸಾಹಿತಿ ಎಸ್.ಎಲ್‌.ಭೈರಪ್ಪ ದಸರಾ ಉದ್ಘಾಟನೆ ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಬಗ್ಗೆ ಮಾತನಾಡಿದ್ದಾರೆ, ಚಾಮುಂಡೇಶ್ವರಿ ತಾಯಿಯೂ ಒಂದು ಹೆಣ್ಣು ಎಂದು ಭೈರಪ್ಪ ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರ ಕುರಿತ ಅವರ ಹೇಳಿಕೆ ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ ಸೇರಿದಂತೆ ಹವವು ಮಹಿಳೆಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News