ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಬೆಳವಣಿಗೆಗೆ ಆದ್ಯತೆ: ಸಚಿವ ಜಗದೀಶ್ ಶೆಟ್ಟರ್

Update: 2019-10-01 14:13 GMT

ಬೆಳಗಾವಿ, ಅ.1: ಮಾದರಿ ಕೈಗಾರಿಕಾ ನೀತಿ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ಬಳಿಕ ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ(ಬಿಸಿಸಿಐ)ಯ ಸಭಾಂಗಣದಲ್ಲಿ ನಡೆದ ವಾಣಿಜ್ಯೋದ್ಯಮಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉದ್ಯಮಬಾಗ ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ತಕ್ಷಣವೇ ರಸ್ತೆ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸುವ ತುರ್ತು ಅಗತ್ಯವಿರುವುದು ಕಂಡುಬಂದಿದೆ. ಕೈಗಾರಿಕೋದ್ಯಮಿಗಳೂ ಸ್ಥಳೀಯ ತೆರಿಗೆ ನೀಡುವುದರಿಂದ ಮಹಾನಗರ ಪಾಲಿಕೆ ವತಿಯಿಂದ ಕೂಡ ಸುಧಾರಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಿದ ಅವರು, ಈಗಾಗಲೇ 6 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.

ಆದಷ್ಟು ಬೇಗನೇ ಏಕಗವಾಕ್ಷಿ ಪದ್ಧತಿಯಡಿ ಕೈಗಾರಿಕೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೂ ತಿಳಿಸಲಾಗಿದ್ದು, ಕೇಂದ್ರ ಸರಕಾರ ಅನುಮೋದನೆ ನೀಡಬೇಕಿರುವ ಪ್ರಸ್ತಾವಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅದಕ್ಕೆ ಅನುಮೋದನೆ ಪಡೆಯಲು ಸಹಕರಿಸುವುದಾಗಿ ತಿಳಿಸಿದರು. ಬೆಳಗಾವಿ ವಾಣಿಜ್ಯೋದ್ಯಮಿಗಳ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಸರಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ರೈಲ್ವೆ ಸಚಿವ ಸುರೇಶ್ ಅಂಗಡಿ ಮಾತನಾಡಿ, ದೇಶದಲ್ಲಿ ಶೇ.75ರಷ್ಟು ತೆರಿಗೆ ಸಣ್ಣ ಉದ್ದಿಮೆದಾರರಿಂದ ಬರುತ್ತಿದ್ದು, ಆ ಕ್ಷೇತ್ರದ ಪ್ರಗತಿಗೆ ನೆರವು ನೀಡಲು ಸರಕಾರ ಸಿದ್ಧವಿದೆ. ಉದ್ಯಮಬಾಗ ಕೈಗಾರಿಕಾ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ಧಪಡಿಸಿದ ಬಳಿಕ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಅಭಯ್ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಅತೀ ಹೆಚ್ಚು ರಪ್ತು ಮಾಡುವಂತಹ ಕೈಗಾರಿಕಾ ಕೇಂದ್ರ ಬೆಳಗಾವಿ. ಹೀಗಾಗಿ, ಇಲ್ಲಿನ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು.

ಕೈಗಾರಿಕೋದ್ಯಮಿಗಳು ಕೈಗಾರಿಕಾ ಪ್ರದೇಶಕ್ಕೆ ಮೂಲಸೌಕರ್ಯಗಳನ್ನು ಒದಗಿಸುವುದರ ಜತೆಗೆ ಇತರೆ ಬೇಡಿಕೆ ಈಡೇರಿಸುವಂತೆ ಬಿಸಿಸಿಐ ವತಿಯಿಂದ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿಪತ್ರವನ್ನು ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News