ಕೇಂದ್ರ ಸರಕಾರ ಆರ್ಥಿಕ ತಜ್ಞರ ಸಲಹೆಗೆ ಮನ್ನಣೆ ಕೊಡುತ್ತಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-10-01 14:26 GMT

ರಾಯಚೂರು, ಅ.1: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಆರ್ಥಿಕ ಅಭಿವೃದ್ಧಿಗೆ ಪೂರಕವಾಗದೆ ಮಾರಕವಾಗಿದೆ ಎಂಬುದನ್ನು ಉದ್ಯಮಿಗಳು ಹೇಳುತ್ತಿದ್ದಾರೆ. ಕೇಂದ್ರದ ಬಿಜೆಪಿಯ ನಾಯಕರು ಆರ್ಥಿಕ ತಜ್ಞರ ಸಲಹೆಗೆ ಮನ್ನಣೆ ಕೊಡುತ್ತಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಎಪಿಎಂಸಿ ಗಂಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ’ಪ್ರಸ್ತುತ ತೆರಿಗೆ ಪದ್ಧತಿ ಹಾಗೂ ವ್ಯಾಪಾರಸ್ಥರ ಮುಂದಿರುವ ಸವಾಲುಗಳು’ ಕುರಿತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದ ಆರ್ಥಿಕ ಕುಸಿತ ಸರಿಪಡಿಸಲು ಕ್ರಮ ಕೈಗೊಳ್ಳುವ ಮುನ್ನ ಕೈಗಾರಿಕೋದ್ಯಮಿಗಳ, ವ್ಯಾಪಾರಿಗಳ ಅಭಿಪ್ರಾಯ ಪಡೆಯುವ ಕೆಲಸ ಸರಕಾರ ಮಾಡುತ್ತಿಲ್ಲ ಎಂದು ಟೀಕಿಸಿದರು.

ಜಿಎಸ್‌ಟಿ ಜಾರಿಗೆ ಆರಂಭದಲ್ಲಿ ಯೋಜಿಸುವಾಗ ಗರಿಷ್ಠ ತೆರಿಗೆ ಮಿತಿ ಶೇ.18 ಇರಬೇಕು ಎಂದಾಗಿತ್ತು. ಸದ್ಯ ಗರಿಷ್ಠ ತೆರಿಗೆ ಮಿತಿ ಶೇ.28 ರವರೆಗೂ ಏರಿಕೆ ಆಗಿದೆ. ಯಾವುದಕ್ಕೆ ತೆರಿಗೆ ಹಾಕಬೇಕು, ಯಾವುದಕ್ಕೆ ಹಾಕಬಾರದು ಎನ್ನುವ ಸಾಮಾನ್ಯಜ್ಞಾನ ಅನ್ವಯ ಮಾಡಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಅವೈಜ್ಞಾನಿಕ ನಿರ್ಧಾರ ಕೈಗೊಂಡಿದ್ದರಿಂದ ಹಣದುಬ್ಬರ ಹೆಚ್ಚಾಗುತ್ತಿದ್ದು, ಆರ್ಥಿಕ ಸ್ಥಿತಿ ಹದಗೆಡುತ್ತಿದೆ. ಈ ಕಾರಣದಿಂದ ಆರ್‌ಬಿಐ ಇಬ್ಬರು ಗವರ್ನರ್‌ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋಗಿದ್ದಾರೆ. ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ ಅಧೋಗತಿಗೆ ಹೋಗುತ್ತಿದೆ ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News