‘ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಒಪ್ಪದ ಮತದಾರರು’

Update: 2019-10-01 14:37 GMT
ಫೈಲ್ ಚಿತ್ರ

ಬೆಂಗಳೂರು, ಅ.1: ಈ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಬಿಜೆಪಿಯ ವಿಭಜನಕಾರಿ ತತ್ವವನ್ನು ವಿರೋಧಿಸಿ, ಅದನ್ನು ತಿರಸ್ಕರಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬಿಜೆಪಿಯನ್ನು ತಡೆಗಟ್ಟಲು ಕಾಂಗ್ರೆಸ್, ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಲಿಲ್ಲ ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮಂಗಳವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸತ್ಯ ಶೋಧನಾ ಸಮಿತಿಯ ಸದಸ್ಯರು ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ವರದಿಯನ್ನು ಹಸ್ತಾಂತರಿಸಿದರು. ಕಾಂಗ್ರೆಸ್, ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರ ಸಂಘಟಿತ ಹೋರಾಟದ ವೈಫಲ್ಯವು ಅತ್ಯಂತ ಅಪಾಯಕಾರಿ ಸಂಗತಿಯಾಗಿದ್ದು, ಪಕ್ಷವು ಇನ್ನಾದರೂ ಎಚ್ಚೆತ್ತುಕೊಂಡು ಸಂಘಟನೆಯನ್ನು ಬೇರುಮಟ್ಟದಿಂದ ಗಟ್ಟಿಗೊಳಿಸುವುದು ಅತೀ ಅವಶ್ಯಕವಾಗಿದೆ ಎಂದು ವರದಿಯಲ್ಲಿ ಪ್ರತಿಪಾದಿಸಲಾಗಿದೆ.

ಶಿವಮೊಗ್ಗ, ಹಾಸನ ಮತ್ತು ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಬೆಂಗಳೂರು ಗ್ರಾಮಾಂತರದ ಒಂದು ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ, ಇನ್ನುಳಿದ 22 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ನಡುವೆ ಪರಸ್ಪರ ಹೊಂದಾಣಿಕೆ ಕಂಡು ಬಂದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ನಡೆಯುತ್ತಿದ್ದ ಗೊಂದಲಗಳನ್ನು ಮತದಾರರು ಒಪ್ಪಿಕೊಳ್ಳಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಒಂದೇ ಕುಟುಂಬದ ಇಬ್ಬರು, ಮೂವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಮತ್ತು ನಿವೃತ್ತ ಸರಕಾರಿ ಅಧಿಕಾರಿಗಳನ್ನು ಏಕಾಏಕಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವುದರ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ಕ್ಷೇತ್ರಗಳನ್ನು ಮರಳಿ ಪಡೆಯಲು ಈ ಕೂಡಲೇ ಪಕ್ಷ ಸಂಘಟನೆ ಮಾಡುವುದು ಮತ್ತು ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು ಅತೀ ಅವಶ್ಯಕ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆನ್‌ಲೈನ್ ಮತ್ತು ಪುಸ್ತಕದ ಮುಖಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ನಾಯಕರ ರಿಪಬ್ಲಿಕ್ ಧೋರಣೆಯನ್ನು ಕಿತ್ತೊಗೆಯಬೇಕು. ಪಕ್ಷದ ಹಿತದೃಷ್ಟಿಯಿಂದ ಅಲ್ಪಾವಧಿ, ಮಧ್ಯಮ ಅವಧಿ ಹಾಗೂ ದೀರ್ಘಾವದಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಚುನಾವಣಾ ಸುಧಾರಣೆಗಳು: ಪಕ್ಷಾಂತರ ತಡೆ ಮಸೂದೆಯ ಪುನರ್ ಪರಿಶೀಲನೆ, ಚುನಾವಣೆ ನಿರ್ವಹಣೆಯಲ್ಲಿ ವೃತ್ತಿಪರತೆ, ಚುನಾವಣೆಯ ಅಪರಾಧೀಕರಣ ಮತ್ತು ವಾಣಿಜ್ಯೀಕರಣ, ಚುನಾವಣಾ ನಿಧಿ, ರಾಜಕೀಯ ಪಕ್ಷಗಳ ಲೆಕ್ಕ ಪತ್ರಗಳ ಪರಿಶೋಧನೆ, ರಾಜಕೀಯ ಪಕ್ಷಗಳ ನಿಯಂತ್ರಣ ಹಾಗೂ ಅವಧಿಪೂರ್ವ ರಾಜೀನಾಮೆ ನೀಡಿದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧ ವಿಧಿಸುವುದರ ಬಗ್ಗೆ ಪಕ್ಷದ ಕ್ರಮ ಕೈಗೊಳ್ಳಬೇಕು.

ಮೈತ್ರಿ ಒಪ್ಪಿಕೊಂಡಿಲ್ಲ: ಲೋಕಸಭಾ ಚುನಾವಣೆಯ ಮತದಾನದ ವಿವರ ನೋಡಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಮರ್ಪಕವಾಗಿಲ್ಲ, ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಈ ಮೈತ್ರಿಯನ್ನು ಒಪ್ಪಿಕೊಂಡಿಲ್ಲ ಎಂಬುದು ತಿಳಿಯುತ್ತದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಶೇ.38.14, ಜೆಡಿಎಸ್-ಶೇ.19 ಸೇರಿ ಕನಿಷ್ಠ ಲೋಕಸಭಾ ಚುನಾವಣೆಯಲ್ಲಿ ಶೇ.57ರಷ್ಟು ಮತಗಳು ಬರಬೇಕಾಗಿತ್ತು.

ಆದರೆ, ಕಾಂಗ್ರೆಸ್-ಶೇ.31.56, ಜೆಡಿಎಸ್-9.78 ಒಟ್ಟು ಶೇ.41ರಷ್ಟು ಮತಗಳು ಚಲಾವಣೆಯಾಗಿವೆ. 2018ರ ಚುನಾವಣೆಗೆ ಹೋಲಿಸಿದರೆ ಬಿಜೆಪಿಗೆ ಶೇ.16ರಷ್ಟು ಮತಗಳು ಹೆಚ್ಚಾಗಿದೆ. ಜೆಡಿಎಸ್ ಮತಗಳು ಕಾಂಗ್ರೆಸ್ ಪಕ್ಷಕ್ಕೆ ದೊರೆಯಲಿಲ್ಲವೆಂದು ಸಮಿತಿಯು ಗಮನಿಸಿದೆ.

ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಅಭಿಪ್ರಾಯದಂತೆ, ಮುಂದಿನ ಚುನಾವಣೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿಯನ್ನು ಮುಂದುವರಿಸಬಾರದು.

ದೇಣಿಗೆ ಸಂಗ್ರಹ: ಕಾಂಗ್ರೆಸ್ ಪಕ್ಷದ ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಸಮಿತಿಗಳು, ಪಕ್ಷದ ಕಚೇರಿಗಳು ಸಮರ್ಪಕ ಆಡಳಿತ ನಿರ್ವಹಣೆಗಾಗಿ ಸಂಯೋಜನೆ ಮತ್ತು ಸಂಘಟನೆ ಹಿತದೃಷ್ಟಿಯಿಂದ ಪಕ್ಷದ ಪ್ರತಿಯೊಬ್ಬ ಶಾಸಕರು ಮತ್ತು ಸಂಸದರು ಪ್ರತಿ ತಿಂಗಳು ಕಡ್ಡಾಯವಾಗಿ ಕೆಪಿಸಿಸಿಗೆ 5 ಸಾವಿರ ರೂ., ಜಿಲ್ಲಾ ಕಾಂಗ್ರೆಸ್‌ಗೆ 4 ಸಾವಿರ ರೂ., ಪ್ರತಿ ಬ್ಲಾಕ್‌ಗೆ 3 ಸಾವಿರ ರೂ.ಗಳನ್ನು ಪಕ್ಷದ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.

ಸರಕಾರದ ವಿವಿಧ ಹಂತಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ (ಚುನಾಯಿತಿ/ನೇಮಕಾತಿ) ಪಕ್ಷದ ನಾಯಕರು ಪ್ರತಿ ತಿಂಗಳು ಕೆಪಿಸಿಸಿಗೆ 3 ಸಾವಿರ ರೂ., ಜಿಲ್ಲಾ ಕಾಂಗ್ರೆಸ್‌ಗೆ 2 ಸಾವಿರ ರೂ., ಬ್ಲಾಕ್ ಕಾಂಗ್ರೆಸ್‌ಗೆ 1 ಸಾವಿರ ರೂ.ಗಳನ್ನು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

ವರದಿ ಸಲ್ಲಿಕೆ ವೇಳೆ ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್, ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News