ಅ.23 ರಿಂದ ಮೂರು ದಿನ ಕಿತ್ತೂರು ಉತ್ಸವ: ಸಚಿವ ಜಗದೀಶ್ ಶೆಟ್ಟರ್

Update: 2019-10-01 15:17 GMT

ಬೆಳಗಾವಿ, ಅ.1: ಕಿತ್ತೂರು ಉತ್ಸವವನ್ನು ಪ್ರತಿ ವರ್ಷದಂತೆ ಅ.23 ರಿಂದ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಿತ್ತೂರು ಇತಿಹಾಸ, ಚೆನ್ನಮ್ಮಳ ಶೌರ್ಯ-ಸಾಹಸ ಯುವಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ಉತ್ಸವ ಆಚರಿಸಲಾಗುತ್ತಿದೆ ಎಂದರು.

ಪ್ರವಾಹದಿಂದ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದರ ಜತೆಗೆ ಎಲ್ಲರ ಆಶಯದಂತೆ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23, 24 ಹಾಗೂ 25 ರಂದು ಆಚರಿಸಲು ನಿರ್ಧರಿಸಲಾಗಿದೆ. ಉತ್ಸವಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡಲು ಮುಖ್ಯಮಂತ್ರಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ಇನ್ನು ಒಂದು ಕೋಟಿ ರೂ.ಒದಗಿಸುವಂತೆ ಮತ್ತೊಮ್ಮೆ ಕೋರಲಾಗುವುದು ಎಂದು ಅವರು ಹೇಳಿದರು.

ಪ್ರಾಧಿಕಾರಕ್ಕೆ 200 ಕೋಟಿ ರೂ.ಪ್ರಸ್ತಾವ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ರೂ.ಪ್ರಸ್ತಾವವಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಈ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಪ್ರವಾಹದಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಇದೇ ಮೊದಲ ಬಾರಿಗೆ ಹೆಚ್ಚಿನ ಪರಿಹಾರವನ್ನು ಘೋಷಿಸಲಾಗಿದೆ. ಆದಷ್ಟು ಬೇಗನೆ ಎಲ್ಲ ಕುಟುಂಬಗಳಿಗೆ ಪರಿಹಾರ ತಲುಪಿಸಲಾಗುವುದು ಎಂದು ಅವರು ತಿಳಿಸಿದರು.

ಅನೇಕ ಜನರು ಹಿಂದೇಟು ಹಾಕುತ್ತಿದ್ದರೂ ಮುಖ್ಯಮಂತ್ರಿಯಾಗಿ ಕೂಡ ಕಿತ್ತೂರು ಉತ್ಸವವನ್ನು ಉದ್ಘಾಟಿಸಿದ್ದೇನೆ. ಕಿತ್ತೂರು ಅನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತಾಲೂಕು ಎಂದು ಘೋಷಣೆ ಮಾಡಿದ್ದೇ ಎಂದು ಜಗದೀಶ್ ಶೆಟ್ಟರ್ ಸ್ಮರಿಸಿಕೊಂಡರು.

ಕಿತ್ತೂರು ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಬೇಕು ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಹಿರಿಯ ನಾಗರಿಕರು ಮನವಿ ಮಾಡಿಕೊಂಡರು.

ಸಭೆಯಲ್ಲಿ ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ್, ಮುಖಂಡರಾದ ಚಂದ್ರಗೌಡ ಪಾಟೀಲ್, ಯ.ರು.ಪಾಟೀಲ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News