ಕ್ರೀಡಾಪಟುಗಳಿಗೆ ಪಿ.ವಿ.ಸಿಂಧು ಯಶಸ್ಸು ಸ್ಫೂರ್ತಿಯಾಗಲಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-01 18:29 GMT

ಮೈಸೂರು,ಅ.1: ನಾಡಿನ ಕ್ರೀಡಾಪಟುಗಳು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರಂತೆ ಪರಿಶ್ರಮದಿಂದ ಯಶಸ್ಸು ಗಳಿಸುವಂತಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಆಶಿಸಿದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ದಸರಾ ಕ್ರೀಡಾ ಉಪಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ದಸರಾ ಕ್ರೀಡಾಕೂಟ ಹಾಗೂ ಮುಖ್ಯಮಂತ್ರಿ ಕಪ್ - 2019 ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಕ್ರೀಡಾಪಟುಗಳಿಗೆ ಪಿ.ವಿ.ಸಿಂಧು ಅವರ ಯಶಸ್ಸು ಸ್ಫೂರ್ತಿಯಾಗಲಿ. ಪ್ರತಿಯೊಬ್ಬ ಕ್ರೀಡಾಪಟುವಿಗೆ ಪಿ.ವಿ.ಸಿಂಧು ಅವರ ಕ್ರೀಡಾ ಜೀವನ ಮಾದರಿಯಾಗಿದೆ ಎಂದರು.

ಪಿ.ವಿ. ಸಿಂಧು ಅವರ ಯಶಸ್ಸಿನ ನಾಗಾಲೋಟ ಹೀಗೇ ಮುಂದುವರಿಯಲಿ. 2020ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸಿಂಧು ದೇಶಕ್ಕೆ ಚಿನ್ನದ ಪದಕ ತರುವಂತಾಗಲಿ ಎಂದು ಹಾರೈಸಿದರು.

ದೇಶದೆಲ್ಲೆಡೆ ದಸರಾ ಆಚರಿಸಲಾಗಿತ್ತಿದೆಯಾದರೂ, ಕನ್ನಡ ನಾಡಿನ ಜನರು ದಸರಾ ಹಬ್ಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ನಮ್ಮ ನಾಡಹಬ್ಬವು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಆಚರಿಸಲ್ಪಡುತ್ತಿರುವು ಸಂತಸದ ಸಂಗತಿ ಎಂದರು.

ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಪಿ.ವಿ. ಸಿಂಧು ಮಾತನಾಡಿ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯವಿದ್ದು ಎಲ್ಲ ಕ್ರೀಡಾಪಟುಗಳೂ ಕಠಿಣ ಪರಿಶ್ರಮದಲ್ಲಿ ತೊಡಗಿ ಎಂದು ಸಲಹೆ ಮಾಡಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಥಸಂಚಲನ ನಡೆಸಿದ ಮೈಸೂರು ಕ್ರೀಡಾ ವಸತಿ ನಿಲಯ, ಕಲ್ಬುರ್ಗಿ ವಲಯ, ಬೆಳಗಾವಿ ವಲಯ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ವಲಯ, ಮೈಸೂರು ವಲಯ ಮತ್ತು ಪೊಲೀಸ್ ಬ್ಯಾಂಡ್ ತಂಡದ ಸದಸ್ಯರಿಂದ ಗೌರವ ಧ್ವಜವಂದನೆ ಸ್ವೀಕರಿಸಿದರು. 

ವಿವಿಧ ವಲಯ ತಂಡಗಳ ನಾಯಕರಾದ ಅರವಿಂದ ಮಾಳಗಿ, ಮಮತ ಕೆಲೋಜಿ, ಎನ್.ಕಿರಣ್, ಉಜ್ವಲ್ ನಾಯ್ಡು ಹಾಗೂ ಚೈತ್ರ ದೇವಾಡಿಗ ಅವರು ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು.

ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೇಯರ್ ಪುಷ್ಪಲತ ಜಗನ್ನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ, ಸರ್ಕಾರದ ಅಪರ ಕಾರ್ಯದರ್ಶಿ ಜಿ.ಕಲ್ಪನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್, ದಸರಾ ಕ್ರೀಡಾ ಉಪಸಮಿತಿ ಉಪ ವಿಶೇಷಾಧಿಕಾರಿ ಕೆ.ಎಸ್. ಮುರಳಿ, ಅಧ್ಯಕ್ಷ ಎಂ.ಬಿ. ಜಗದೀಶ್, ಉಪಾಧ್ಯಕ್ಷ ಎಚ್. ಜಯರಾಂ, ಎಲ್.ಜಗದೀಶ್, ಕೆ.ದೇವರಾಜು, ಕಾರ್ಯದರ್ಶಿ ಕೆ.ಸುರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News