ದಾವಣಗೆರೆ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2019-10-01 18:51 GMT

ದಾವಣಗೆರೆ, ಅ.30: ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಿ, ಸಾಮಾಜಿಕ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಎಸಿ ಕಚೇರಿಯ ವರೆಗೂ ಪ್ರತಿಭಟನೆ ನಡೆಸಿ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ವಾಲ್ಮೀಕಿ ಜನಾಂಗದ ಇಬ್ಬರು ಮಕ್ಕಳು ಬಯಲಿನಲ್ಲಿ ಶೌಚ ಮಾಡಿದ್ದಾರೆಂಬ ನೆಪವನ್ನು ಇಟ್ಟುಕೊಂಡು ಅಮಾನವೀಯವಾಗಿ ಥಳಿಸಿ, ಈ ಇಬ್ಬರನ್ನು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ವಿಜಯಪುರ ಜಿಲ್ಲೆಯ ದೇವರಹಿಪ್ಪಗಿರಿ ತಾಲೂಕಿನ ಅಸಂತಾಪುರ ಗ್ರಾಮದ ರೇಣುಕಾ ಮಾದರ್ ಎಂಬ ವಿದ್ಯಾರ್ಥಿನಿಯ ಮೇಲೆ ಇತ್ತೀಚೆಗೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸಹ ಪೊಲಿಸರು ರಾಜಕೀಯ ಒತ್ತಡಕ್ಕೆ ಮಣಿದು ಕೈ ಚೆಲ್ಲಿರುವುದು ಅತ್ಯಂತ ನೀಚ ಕೃತ್ಯವಾಗಿದೆ ಎಂದು ಕಿಡಿಕಾರಿದರು. 

ರೇಣುಕಾ ಮಾದರ್ ಕೊಲೆ ಪ್ರಕರಣ ಆರೋಪಿಗಳು ರಾಜರೋಷವಾಗಿಯೇ ಓಡಾಡಿಕೊಂಡಿದ್ದರೂ ಸಹ ಪೊಲೀಸರು ಅವರನ್ನು ಬಂಧಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆರೋಪಿಗಳು ರಾಜಕೀಯವಾಗಿ, ಆರ್ಥಿಕವಾಗಿ ಎಷ್ಟೇ ಪ್ರಬಲವಾಗಿದ್ದರೂ ಪೊಲೀಸರು ಯಾವುದೇ ಆಮೀಷ ಮತ್ತು ಒತ್ತಡಕ್ಕೆ ಒಳಗಾಗದೆ ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕೆಂದು ಒತ್ತಾಯಿಸಿದರು. 

ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿಯವರನ್ನು ಗೊಲ್ಲರಹಟ್ಟಿಗೆ ಬಿಟ್ಟುಕೊಳ್ಳದೇ ಅವಮಾನಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಪಾಮೇನಹಳ್ಳಿಯ ಗೊಲ್ಲರಹಟ್ಟಿ ಪ್ರವೇಶಿಸಲು ಸಂಸದರನ್ನು ತಡೆದು ಅವಮಾನ ಮಾಡಲಾಗಿದೆ. ಒಬ್ಬ ಸಂಸದರಿಗೆ ಈ ಗತಿಯಾದರೆ, ಇನ್ನೂ ಸಾಮಾನ್ಯರ ಪಾಡು ಹೇಗಿರಬಹುದು ಎಂಬುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಪಾಮೇನಹಳ್ಳಿ ಗೊಲ್ಲರಹಟ್ಟಿಗೆ ಸಂಸದರ ಪ್ರವೇಶ ನಿರಾಕರಿಸಿದವರ ವಿರುದ್ಧ  ಪ.ಜಾ, ಪಂ.ಪಂ ದೌರ್ಜನ್ಯ ವಿರೋಧಿ ಕಾನೂನು 1987ರ ರೀತಿ ತಕ್ಕಶಿಕ್ಷೆ ವಿಧಿಸಬೇಕು. ಮಧ್ಯ ಪ್ರದೇಶದಲ್ಲಿ ಇಬ್ಬರು ದಲಿತ ಮಕ್ಕಳನ್ನು ಕೊಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿ ರೇಣುಕಾ ಮಾದಾರ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಗೈದವರನ್ನುಂ ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಸಂಘಟನೆಯ ರುದ್ರಪ್ಪ, ಬಿ.ಎನ್.ನಾಗೇಶ್, ಗುಮ್ಮನೂರು ಪರಶುರಾಮ್, ಪಿ.ತಿಪ್ಪೇರುದ್ರಪ್ಪ, ಜಯ್ಯಪ್ಪ, ಎಂ.ಪ್ರಕಾಶ್, ಹನುಮಂತಪ್ಪ, ಮಂಜಪ್ಪ, ಅಂಜಿನಪ್ಪ, ತಿರುಪತಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News