ಹೈದರಾಬಾದ್‌ನಲ್ಲಿ ಇಸ್ರೋ ವಿಜ್ಞಾನಿಯ ಹತ್ಯೆ

Update: 2019-10-02 03:38 GMT

ಹೈದರಾಬಾದ್, ಅ.2: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ)ದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಸುರೇಶ್ (56) ಎಂಬುವವರನ್ನು ಅವರ ಅಪಾರ್ಟ್‌ಮೆಂಟ್‌ನಲ್ಲಿ ಅಪರಿಚಿತರು ಹತ್ಯೆ ಮಾಡಿದ್ದಾರೆ.

ಮೂಲತಃ ಕೇರಳದವರಾದ ಸುರೇಶ್, ನಗರದ ಕೇಂದ್ರಭಾಗದ ಅಮೀರ್‌ಪೇಟೆ ಪ್ರದೇಶದ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ.

ಮಂಗಳವಾರ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಸಹೋದ್ಯೋಗಿಗಳು ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾದರು. ಅವರ ಪತ್ನಿ ಇಂದಿರಾ ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಅವರಿಗೆ ಮಾಹಿತಿ ನೀಡಲಾಯಿತು. ಸುರೇಶ್ ಅವರ ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರು ಹೈದರಾಬಾದ್‌ಗೆ ಧಾವಿಸಿ ಪೊಲೀಸರಿಗೆ ಮಾಹಿತಿ ನಿಡಿದರು. ಫ್ಲ್ಯಾಟ್‌ನ ಬಾಗಿಲು ಒಡೆದು ಒಳಗೆ ನೋಡಿದಾಗ ಸುರೇಶ್ ಮೃತದೇಹ ಪತ್ತೆಯಾಯಿತು.

ಸುರೇಶ್ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ವಸತಿ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸುರೇಶ್ ಕಳೆದ 20 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸವಿದ್ದರು. ಅವರ ಪತ್ನಿ ಕೂಡಾ ನಗರದಲ್ಲೇ ಉದ್ಯೋಗದಲ್ಲಿದ್ದರು. 2005ರಲ್ಲಿ ಅವರು ಚೆನ್ನೈಗೆ ವರ್ಗಾವಣೆಯಾಗಿದ್ದರು. ಮಗ ಅಮೆರಿಕದಲ್ಲಿದ್ದರೆ, ಮಗಳು ದೆಹಲಿಯಲ್ಲಿ ವಾಸವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News