ದೇಶದಲ್ಲಿ ಈ ಬಾರಿ ಅತಿವೃಷ್ಟಿ, ಪ್ರವಾಹಕ್ಕೆ ಬಲಿಯಾದವರೆಷ್ಟು ಗೊತ್ತೇ?

Update: 2019-10-02 03:45 GMT

ಹೊಸದಿಲ್ಲಿ, ಅ.2: ದೇಶದಲ್ಲಿ ಈ ಬಾರಿ ಅತಿವೃಷ್ಟಿ ಹಾಗೂ ನೆರೆ ಸಂಬಂಧಿ ಅನಾಹುತಗಳಿಂದ 14 ರಾಜ್ಯಗಳಲ್ಲಿ 1,685 ಮಂದಿ ಜೀವ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಆದರೆ ಅಧಿಕ ಮಳೆಯಿಂದ ಆಗಿರುವ ಆರ್ಥಿಕ ನಷ್ಟದ ಬಗ್ಗೆ ಅಧಿಕೃತ ಅಂಕಿ ಅಂಶಗಳಿಲ್ಲ.

ಈ ಬಾರಿಯ ಮುಂಗಾರು ಅವಧಿಯಲ್ಲಿ 25 ವರ್ಷಗಳಲ್ಲೇ ಗರಿಷ್ಠ ಮಳೆಯಾಗಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ಅನಾಹುತಗಳು ಸಂಭವಿಸಿದ್ದು, ಮಾನವ ಜೀವಹಾನಿಯ ಜತೆಗೆ ಲಕ್ಷಾಂತರ ಸಾಕುಪ್ರಾಣಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಮನೆಮಠ ಹಾಗೂ ಬೆಳೆಗಳಿಗೆ, ಮೂಲಸೌಕರ್ಯಗಳಿಗೂ ವ್ಯಾಪಕ ಹಾನಿಯಾಗಿದೆ. ಆಗಸ್ಟ್ 16ರ ಬಳಿಕ ಶೇಕಡ 80ರಷ್ಟು ಜಿಲ್ಲೆಗಳಲ್ಲಿ ನೆರೆಹಾವಳಿ ತಲೆದೋರಿದ್ದು, ದೇಶಾದ್ಯಂತ ಈ ಬಾರಿ 277 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

ಕೇಂದ್ರ ಗೃಹ ಸಚಿವಾಲಯದ ವಿಕೋಪ ನಿರ್ವಹಣೆ ವಿಭಾಗ ಮಾಡಿದ ಅಂದಾಜಿನ ಪ್ರಕಾರ, 22 ಲಕ್ಷ ಮಂದಿಯನ್ನು ಇದುವರೆಗೆ ಸ್ಥಳಾಂತರಿಸಲಾಗಿದ್ದು, ಈ ರಾಜ್ಯಗಳಲ್ಲಿ 8,700 ಪರಿಹಾರ ಕೇಂದ್ರಗಳನ್ನು ತೆರೆದು, ಮನೆ ಮಠಗಳನ್ನು ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರಾಕೃತಿಕ ವಿಕೋಪಗಳಿಂದ ಹೆಚ್ಚು ಹಾನಿಗೀಡಾಗುವವರು ಬಡಜನತೆ. ವಿಶ್ವಸಂಸ್ಥೆಯ ವಿಕೋಪ ಅಪಾಯ ಇಳಿಕೆ ಕಚೇರಿ(ಯುಎನ್‌ಡಿಆರ್‌ಆರ್)ಯ ಅಂದಾಜಿನ ಪ್ರಕಾರ ವಿಶ್ವಾದ್ಯಂತ ಪ್ರತೀ ವರ್ಷ ಪ್ರಾಕೃತಿಕ ವಿಕೋಪಗಳು 26 ದಶಲಕ್ಷ ಜನರನ್ನು ಬಡತನಕ್ಕೆ ತಳ್ಳುತ್ತಿವೆ.

ಜಾಗತಿಕವಾಗಿ 1998-2017ರ ಅವಧಿಯಲ್ಲಿ ವಿಶ್ವಾದ್ಯಂತ ಸಂಭವಿಸಿದ ಒಟ್ಟು ವಿಕೋಪಗಳ ಪೈಕಿ ಪ್ರವಾಹ ವಿಕೋಪಗಳ ಪ್ರಮಾಣ ಶೇಕಡ 44. ಉಳಿದಂತೆ ಭೂಕಂಪ, ಸುನಾಮಿ ಮತ್ತು ಚಂಡಮಾರುತದಂಥ ವಿಕೋಪಗಳು ಶೇಕಡ 72ರಷ್ಟಾಗಿವೆ ಎಂದು ಯುಎನ್‌ಡಿಆರ್‌ಆರ್ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News