ಮೈಸೂರು ದಸರಾ ಪ್ರಯುಕ್ತ ಭಾರತೀಯ ವಾಯುಪಡೆಯಿಂದ ಏರ್ ಶೋ

Update: 2019-10-02 18:17 GMT

ಮೈಸೂರು,ಅ.2: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇಂಡಿಯನ್ ಏರ್ ಫೋರ್ಸ್ ಸಹಯೋಗದಲ್ಲಿ ನಗರದ ಬನ್ನಿಮಂಟಪ ಮೈದಾನದಲ್ಲಿ ನಡೆದ ಏರ್ ಶೋ ಕಾರ್ಯಕ್ರಮ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಭಾರತೀಯ ವಾಯು ಪಡೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಬುಧವಾರ ಮೊದಲಿಗೆ ಹೆಲಿಕ್ಯಾಪ್ಟರ್ ಮೂಲಕ ಗುಲಾಬಿ ಹೂಗಳನ್ನು ಮೈದಾನಕ್ಕೆ ಚೆಲ್ಲುತ್ತಾ ಮೈದಾನದ ಸುತ್ತಪ್ರದರ್ಶನ ಮಾಡುವ ಮೂಲಕ ಪೆಟಲ್ ರಾಪಿಂಗ್ ಮಾಡಲಾಯಿತು. ನಂತರ ಭಾರತೀಯ ಯುದ್ಧ ವಿಮಾನದ ಮೂಲಕ ಯುದ್ಧದ ಸಮಯದಲ್ಲಿ ವಾಯುಪಡೆ ಹೇಗೆ ಕಾರ್ಯಾಚರಣೆ ಮಾಡಲಿದೆ ಎಂಬುದನ್ನು ತೋರಿಸುವ ಸಲುವಾಗಿ ಆಪರೇಷನ್ ಕಾರ್ಯಾಚರಣೆ ಮಾಡಿ ಯುದ್ಧ ವಿಮಾನದಿಂದ 6 ಜನ ಯೋಧರು ಹಗ್ಗದ ಮೂಲಕ ಮೈದಾನಕ್ಕಿಳಿಯುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಅಂತಿಮ ಹಂತವಾಗಿ ಸುಮಾರು 7 ಸಾವಿರ ಅಡಿಗಳಿಂದ ವಾಯುಸೇನೆಯ 10 ವೀರರು ಪ್ಯಾರಾಚೂಟ್ ಮೂಲಕ ಮೈದಾನಕ್ಕೆ ಧುಮುಕಿದ ಸ್ಕೈ ಡೈವಿಂಗ್ ಸಾಹಸ ದೃಶ್ಯ ನೆರೆದಿದ್ದ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸಿತ್ತು. ಈ ಪ್ಯಾರಾಚೂಟ್ ಮೂಲಕ ಮಾಸ್ಟರ್ ವಾರಂಟ್ ಆಫೀಸರ್ ಎಸ್.ಎಸ್ ಯಾದವ್, ಸ್ಕ್ವಾರ್ಡನ್ ಲೀಡರ್ ಅಫ್ತಬ್ ಖಾನ್, ಜೂನಿಯರ್ ವಾರಂಟ್ ಆಫಿಸರ್ ಮುಖೇಶ್, ಸರ್ಜಂಟ ಸಲಾರಿಯಾ ಚೌಹಾಣ್, ಕರ್ನಾಟಕದ ಯಾದವ್, ಅವಿನಾಶ್ ಹಾಗೂ ಅನ್ಸಾರಿ ಎಂಬ ವೀರರು ಆಕಾಶ ಗಂಗಾ ಪಡೆ ತಂಡದ ಹೆಸರಿನಿಂದ ಪ್ಯಾರಾಚೂಟ್ ಮೂಲಕ ಧುಮುಕಿದರು.

ಬಳಿಕ ಮೈಸೂರಿನ ಎರಡು ಅಗ್ನಿಶಾಮಕ ದಳದ ವಾಹನಗಳು ವಿವಿಧ ರೀತಿಯ ನೀರಿನ ಪ್ರಾತ್ಯಕ್ಷಿಕೆಯನ್ನು ನಡೆಸುವ ಮೂಲಕ ಮೈದಾನದಿಂದ ಆಕಾಶದೆತ್ತರಕ್ಕೆ ನೀರಿನ ಚಿಲುಮೆ ಚಿಮ್ಮುವ ರೀತಿ ಪ್ರದರ್ಶನ ಮಾಡಿ ಎಲ್ಲರ ಮನ ಗೆದ್ದರು. ವಾಯುಪಡೆ ಯೋಧರ ಸಾಹಸಕ್ಕೆ ಪ್ರೇಕ್ಷಕರು ಮೂಕ ವಿಸ್ಮಿತರಾದರು.

ಜಿಲ್ಲಾಡಳಿತದ ವತಿಯಿಂದ ಭಾರತೀಯ ವಾಯು ಸೇನೆಯ 23 ಯೋಧರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ದಸರಾ ಪರಂಪರೆ ತಿಳಿಸುವ ಪಾರಿತೋಷಕಗಳನ್ನು ಸಹ ಜಿಲ್ಲಾಧಿಕಾರಿ ಅಭಿರಾಮ್.ಜಿ ಶಂಕರ್ ಅವರು ನೀಡಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಚಿವ ಸಿ.ಸಿ ಪಾಟೀಲ್, ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ನಗರ ಪೊಲೀಸ್ ಕಮಿಷನರ್ ಕೆ.ಟಿ ಬಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ನಿವೃತ್ತ ವಿಂಗ್ ಕಮ್ಯಾಂಡರ್ ಶ್ರೀಕುಮಾರ್, ಸ್ಕ್ವಾಡ್ರನ್ ಲೀಡರ್ ನಿತೀಶ್, ಮುಡಾ ಆಯುಕ್ತ ಪಿ.ಎಸ್ ಕಾಂತರಾಜ್, ಡಿ.ಸಿ.ಪಿ ಮುತ್ತುರಾಜು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News