‘ಚೂಡಾಮಣಿ’ ರಾಮ ಸೀತೆಯರ ಪ್ರೇಮ ಕತೆ

Update: 2019-10-02 18:32 GMT

ಕನ್ನಡ ರಂಗಭೂಮಿ ಸಾಹಿತ್ಯದಲ್ಲಿ ಪುರಾಣಗಳನ್ನು ವಸ್ತುವಾಗಿಟ್ಟುಕೊಂಡು ‘ಮುರಿದು ಕಟ್ಟುವ’ ಕೆಲವನ್ನು ಹಲವು ಹಿರಿಯ ನಾಟಕಕಾರರು ಮಾಡಿದ್ದಾರೆ. ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’ದಿಂದ ಹಿಡಿದು ಕಾರ್ನಾಡ್ ಅವರ ‘ಯಯಾತಿ’ಯವರೆಗೆ ಬೇರೆ ಬೇರೆ ನೆಲೆಗಳಲ್ಲಿ ಈ ಪ್ರಯತ್ನ ನಡೆದಿದೆ. ಇದೇ ಸಂದರ್ಭದಲ್ಲಿ ಪುರಾಣಗಳ ಕತೆಗಳನ್ನು ರಮ್ಯವಾಗಿ ರಂಗಭೂಮಿಯಲ್ಲಿ ನಿರೂಪಿಸುವ ಪ್ರಯತ್ನವೂ ನಡೆದಿದೆ. ಇತ್ತೀಚಿನ ದಿನಗಳಲ್ಲಿ ರಂಗ ಸಾಹಿತ್ಯದ ಬರವಣಿಗೆ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ, ಆಶಾ ರಘು ಅವರು ‘ರಾಮಾಯಣ’ ಕತೆಯ ಭಾಗವೊಂದನ್ನು ಪುನರ್ ನಿರೂಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದೊಂದು ಸಂಗೀತ ನಾಟಕವಾಗಿದೆ. ‘ಅಭಿಜ್ಞಾನ ಶಾಕುಂತಲಾ’ ನಾಟಕದ ಮೂಲಕ ದುಷ್ಯಂತ ಶಕುಂತಳೆಯರ ಪ್ರೇಮ ಕತೆಯನ್ನು ತೆರೆದಿಡುತ್ತದೆ. ಅದನ್ನೇ ಮಾದರಿಯಾಗಿರಿಸಿಕೊಂಡು ‘ಚೂಡಾಮಣಿ’ಯ ಮೂಲಕ ಶ್ರೀರಾಮ ಮತ್ತು ಸೀತೆಯರ ನಡುವಿನ ಪ್ರೇಮ ಕತೆಯನ್ನು ನಿರೂಪಿಸಲು ಆಶಾ ರಘು ಪ್ರಯತ್ನಿಸಿದ್ದಾರೆ.

‘‘ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಉಂಗುರ ಪ್ರೇಮದ ಸಂಕೇತವಾದಂತೆ, ಒಂದು ನಿರ್ಣಾಯಕ ಉಪಾಧಿಯಾದಂತೆ ಈ ನಾಟಕದಲ್ಲಿ ಚೂಡಾಮಣಿಯೇ ಸೀತಾರಾಮರ ಪ್ರೇಮದ ಸಂಕೇತವಾಗಿದೆ. ನಾಟಕದುದ್ದಕ್ಕೂ ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ರೆಕರಿಂಗ್ ಮೆಟಫರ್’ ಆಗಿದೆ.....ಹೆಂಡತಿಯಾದವಳು ಗಂಡನ ಸಹಚಾರಿಣಿಯೆಂಬುದು ನಮ್ಮ ಸಾಮಾನ್ಯ ನಂಬಿಕೆಯಾಗಿದೆ. ಆದರೆ ‘ಚೂಡಾಮಣಿ’ ನಾಟಕದಲ್ಲಿ ಕೊನೆಗೆ ರಾಮನೇ ಸೀತೆಯನ್ನು ಹಿಂಬಾಲಿಸಲು ಬಯಸುವ ಸನ್ನಿವೇಶ ನಿಜಕ್ಕೂ ಹೃದಯಂಗಮವಾಗಿದೆ. ಈ ಕೃತಿ ಯಾವುದೇ ರಂಗ ನಿರ್ದೇಶಕನಿಗೆ ಸವಾಲೆಸೆವ ನಾಟಕವಲ್ಲ. ಬದಲಾಗಿ ನಿರ್ದೇಶಕನಿಗೆ ಸರ್ವ ಸ್ವಾತಂತ್ರ ನೀಡಬಲ್ಲ ನಾಟಕವಾಗಿದೆ’’ ಬೆನ್ನುಡಿಯಲ್ಲಿ ಡಾ. ಟಿ. ಎನ್. ವಾಸುದೇವಮೂರ್ತಿ ಅವರು ಬರೆಯುತ್ತಾರೆ.

‘‘ನೆನಪಿನ ಬುತ್ತಿಯಾಗಿ ದಾಂಪತ್ಯದ ಧ್ಯೋತಕವಾಗಿ ಚೂಡಾಮಣಿಯ ನಿರ್ವಚನವಾಗುತ್ತಲೇ ಕುಟೀರ ಮತ್ತು ಅಯೋಧ್ಯೆ ಎಂಬ ಎರಡು ಚಿತ್ರಣಗಳ ಮೂಲಕ ಭಿನ್ನ ಸಾಮಾಜಿಕ ಸಂದರ್ಭಗಳನ್ನು ನಿರೂಪಣೆ ಮಾಡುವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು. ಆಪ್ತವಾಗಿ ಸಂವಹನ ಮಾಡುವ ಪಾತ್ರಗಳು, ದೇಸಿ ನುಡಿಗಟ್ಟು, ಕಥೆಹೇಳುವ ತಂತ್ರ, ಕಾವ್ಯಾತ್ಮಕ ಭಾಷೆ, ಕಥಾ ಹಂದರಕ್ಕೆ ಪೂರಕವಾಗಿ ನಿಲ್ಲುವ ಹಾಡುಗಳು, ಸನ್ನಿವೇಶ ಮತ್ತು ದೃಶ್ಯಗಳ ಕಟ್ಟುವಿಕೆ, ನವಿರು ಸಂಭಾಷಣೆ ಇತ್ಯಾದಿಗಳು ನಾಟಕವನ್ನು ಓದಲು ಪ್ರಿಯವೆನಿಸುತ್ತದೆ....’’ ಎಂದು ಲೇಖಕ ಬೇಲೂರು ರಘುನಂದನ ಅವರು ಅಭಿಪ್ರಾಯಪಡುತ್ತಾರೆ.

ಕೃತಿಯಲ್ಲಿ ರಾಮ, ಸೀತೆ, ಶಕ, ಕಸ್ತೂರಿ, ಕುಶ, ಲವ, ಧನ್ಯಮ್ಮ, ವಾಲ್ಮೀಕಿ, ಲಕ್ಷ್ಮಣ, ಭರತ, ಶತ್ರುಘ್ನ ಮುಖ್ಯ ಪಾತ್ರಗಳು. ಒಟ್ಟು 21 ದೃಶ್ಯಗಳಿವೆ. ನಿರ್ದೇಶಕರ ಮನಸ್ಥಿತಿಗೆ ಪೂರಕವಾಗಿ ಒಗ್ಗುವ ರಂಗಚಲನೆ ಈ ನಾಟಕದಲ್ಲಿದೆ. ಸಾಹಿತ್ಯ ಲೋಕ ಪಬ್ಲಿಕೇಶನ್ಸ್, ಬೆಂಗಳೂರು ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 80 ರೂಪಾಯಿ. ಆಸಕ್ತರು 99459 39436 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News