ಮಂಡ್ಯ ಜಿಲ್ಲಾಡಳಿತದಿಂದ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Update: 2019-10-02 18:45 GMT

ಮಂಡ್ಯ, ಅ.2: ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಗಾಂಧೀಜಿ. ಇಂತಹ ವ್ಯಕ್ತಿ ಹಾಕಿಕೊಟ್ಟ ಮಾರ್ಗದಲ್ಲಿ ಯುವಕರು ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ನೆಹರು ಯುವ ಕೇಂದ್ರ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀ ಅವರ ಹೆಸರು ಕೇಳಿದ ಕ್ಷಣ ಎಲ್ಲರೂ ಮೂಕ ವಿಸ್ಮಿತರಾಗುತ್ತಾರೆ. ಇಂಥಹ ಒಬ್ಬ ಮಹಾನ್ ವ್ಯಕ್ತಿ ನಮ್ಮ ದೇಶದಲ್ಲಿ ಬದುಕಿ ಬಾಳಿದ್ದಾರೆ ಎಂಬುವುದು ಅವಿಸ್ಮರಣೀಯವಾದುದ್ದು. ಶತ್ರುವಾಗಿದ್ದರೂ ಅವರನ್ನು ಪ್ರೀತಿಯಿಂದ ಸತ್ಕರಿಸಬೇಕು ಎಂಬ ಘೋಷವ್ಯಾಕವನ್ನು ಗಾಂಧೀಜಿಯವರು ನೀಡಿದ್ದಾರೆ ಎಂದರು.

ಗಾಂಧೀಜಿಯವರು ಭಾರತವನ್ನೆಲ್ಲಾ ಸುತ್ತಿ ನಮ್ಮಲ್ಲಿರುವ ಬಹುಸಂಸ್ಕೃತಿಯನ್ನು ಹಾಗೂ ಬಹುಜನಾಂಗವನ್ನು ಅರ್ಥ ಮಾಡಿಕೊಂಡರು. ಇಲ್ಲಿರುವಂತಹ ಅಸ್ಪೃಶ್ಯತೆ, ಶೋಷಣೆ, ಮಹಿಳಾ ದೌರ್ಜನ್ಯ ವಿರುದ್ಧ ಹೋರಾಡಿದರು. ಸತ್ಯ, ಅಹಿಂಸೆ ಮಾರ್ಗದಲ್ಲೇ ನಡೆದರು ಎಂದು ಅವರು ಸ್ಮರಿಸಿದರು. ದೇಶದ ಆರ್ಥಿಕ ಮುಗ್ಗಟ್ಟಿನಿಂದ ಪ್ರತಿ ಮನೆ ಮನೆಯೂ ಹಸಿವಿನಿಂದ ಬಳಲುತ್ತಿದ್ದಾಗ ವಾರಕ್ಕೆ ಒಂದು ದಿನವಾದರೂ ಉಪವಾಸ ಮಾಡಬೇಕು ಎಂದು ತಾನೇ ಸ್ವತಃ ಉಪವಾಸ ಮಾಡಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಅವರು ಹೇಳಿದರು.

ಉಪನ್ಯಾಸ ನೀಡಿದ ಸರಕಾರಿ ಮಹಾವಿದ್ಯಾಲಯ ಪ್ರಾಧ್ಯಾಪಕ ನಿಂಗರಾಜು, ಗಾಂಧೀಜಿಯವರ ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕಾಗಿದೆ. ಮಹಾನ್ ವ್ಯಕ್ತಿಯ ದಾರಿಯಲ್ಲಿ ಇಡೀ ಮಾನವ ಸುಮುದಾಯ ನಡೆಯಬೇಕು ಎಂದರು.

ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರ ತಂದಿರುವ ಪಾಪು ಬಾಪು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾವೇರಿ ಉದ್ಯಾನವನದಲ್ಲಿ ಗಾಂಧೀಜಿಯವರ ಪ್ರತಿಮೆಗೆ  ಮಾಲಾರ್ಪಣೆ ಮಾಡಲಾಯಿತು.

ಉಪವಿಭಾಗಧಿಕಾರಿ ಸೂರಜ್, ಜಿಲ್ಲಾ ವಾರ್ತಾಧಿಕಾರಿ ಟಿ.ಕೆ.ಹರೀಶ್, ಅರಣ್ಯ ಇಲಾಖಾಧಿಕಾರಿ ಶಿವರಾಜು, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News