ಚಿಕ್ಕಮಗಳೂರು ಪ್ರವಾಸೋದ್ಯಮ ಅಭಿವೃದ್ಧಿಗೆ 80 ಕೋಟಿ ರೂ. ಬಿಡುಗಡೆ: ಸಚಿವ ಸಿ.ಟಿ ರವಿ

Update: 2019-10-02 19:05 GMT

ಚಿಕ್ಕಮಗಳೂರು, ಅ.2: ಜಿಲ್ಲೆಯ ಅಯ್ಯನಕೆರೆಯ ಸಮಗ್ರ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ  ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ ರವಿ ಹೇಳಿದರು.

ಬುಧವಾರ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಅಯ್ಯನಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವು ಅಯ್ಯನಕೆರೆ ತುಂಬಿ ಹರಿಯುತ್ತಿದೆ. ಅದಕ್ಕಾಗಿ ಪೂಜೆ ನೆರವೇರಿಸಲಾಗಿದೆ. ಇದೆ ರೀತಿಯಾಗಿ ಮುಂದಿನ ದಿನಗಳಲ್ಲಿಯೂ ಕೆರೆ ಕಟ್ಟೆಗಳು ತುಂಬಿ ಹರಿಯಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದರು.

ಪ್ರಸಕ್ತ ವರ್ಷ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಯ್ಯನಕೆರೆಯ ಸಮಗ್ರ ಅಭಿವೃದ್ದಿಗೆ ಹಾಗೂ ಬೋಟಿಂಗ್ ವ್ಯವಸ್ಥೆ ಮಾಡಲು 2 ಕೋಟಿ ರೂ. ಹಾಗೂ ಶಕುನ ರಂಗನಾಥಸ್ವಾಮಿ ದೇವಸ್ಥಾನದ ಮೂಲಭೂತ ಸೌಕರ್ಯಕ್ಕೆ 1.50 ಕೋಟಿ ಸೇರಿದಂತೆ ಒಟ್ಟು 3.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿಗೆ 80 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಅಯ್ಯನಕೆರೆ ಬೋಟಿಂಗ್ ವ್ಯವಸ್ಥೆ ಮಾಡುವುದಕ್ಕೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಈಗಾಗಲೇ ಪ್ರಕ್ರೀಯೆ ಪ್ರಾರಂಭವಾಗಿದೆ. ಗುಣಮಟ್ಟದ ಕಾಮಗಾರಿಗಳನ್ನು ಹಾಗೂ ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಚಿಂತಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿಜಯಕುಮಾರ್, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಗೂ ಅಯ್ಯನಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News