ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಗೌರವಧನ ಹೆಚ್ಚಿಸಿದ ರಾಜ್ಯ ಸರಕಾರ

Update: 2019-10-03 11:53 GMT

ಬೆಂಗಳೂರು, ಅ. 3: ರಾಜ್ಯದಲ್ಲಿನ ‘ಆಶಾ ಕಾರ್ಯಕರ್ತೆಯರ’ ಮಾಸಿಕ ಗೌರವಧನ 500 ರೂ.ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಆಶಾ ಕಾರ್ಯಕರ್ತೆಯರ ಗೌರವ ಧನ 500 ರೂ.ಹೆಚ್ಚಳದಿಂದ ಅವರು ಈಗ ಮಾಸಿಕ 6,500 ರೂ.ಗೌರವಧನ ಪಡೆಯಲಿದ್ದಾರೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರು ರಾಜ್ಯ ಸರಕಾರದಿಂದ 3,500 ರೂ., ಕೇಂದ್ರದಿಂದ 2,500 ರೂ.ಸೇರಿ ಒಟ್ಟು 6 ಸಾವಿರ ರೂ.ಪಡೆಯುತ್ತಿದ್ದರು. ಇದೀಗ ಸರಕಾರ 500 ರೂ.ಹೆಚ್ಚಳ ಮಾಡಿದ್ದು, ಮಾಸಿಕ 6,500 ರೂ.ಪಡೆಯಲಿದ್ದಾರೆ. ಒಟ್ಟು 41,625 ಮಂದಿ ಆಶಾ ಕಾರ್ಯಕರ್ತೆಯರಿಗೆ ಇದರಿಂದ ಪ್ರಯೋಜನ ಆಗಲಿದ್ದು, ಸರಕಾರಕ್ಕೆ ವಾರ್ಷಿಕ 25 ಕೋಟಿ ರೂ.ಹೊರೆಯಾಗಲಿದೆ ಎಂದು ವಿವರ ನೀಡಿದರು.

ಕೈದಿಗಳ ಬಿಡುಗಡೆ: ಗಾಂಧೀಜಿಯವರ 150ನೆ ಜಯಂತಿ ಅಂಗವಾಗಿ ಸನ್ನಡತೆ ಮೇಲೆ 20 ಕೈದಿಗಳನ್ನು ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಒಪ್ಪಿಗೆ ನೀಡಲಾಗಿದೆ. ಓರ್ವ ಮಹಿಳಾ ಕೈದಿ ಸೇರಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಕಾರಾಗೃಹಗಳಲ್ಲಿನ ಶಿಕ್ಷೆಗೊಳಗಾಗಿರುವ ಕೈದಿಗಳ ಬಿಡುಗಡೆ ನಿರ್ಧರಿಸಲಾಗಿದೆ ಎಂದರು.

ನೂತನ ಕೈಗಾರಿಕಾ ನೀತಿಗೆ ಪೂರಕವಾಗಿ ಜವಳಿ, ಏರೋಸ್ಪೇಸ್, ಎಲೆಕ್ಟ್ರಾನಿಕ್ಸೃ್, ಎಲೆಕ್ಟ್ರಿಕ್ ವಾಹನ ಸೇರಿದಂತೆ ಮೆಗಾ ಯೋಜನೆಗಳಿಗೆ ರಿಯಾಯಿತಿ ನೀಡುವ ಬಗ್ಗೆ ಸಂಪುಟಕ್ಕೆ ಶಿಫಾರಸ್ಸು ಮಾಡಲು ಸಿಎಂ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆಗೆ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.

ನೋಟ್ ಪುಸ್ತಕಗಳ ವಿತರಣೆ: ಸಮಾಜ ಕಲ್ಯಾಣ ಇಲಾಖೆಯ 824 ವಸತಿ ಶಾಲೆ ಮತ್ತು ಕಾಲೇಜುಗಳ ಮಕ್ಕಳಿಗೆ ನೋಟ್ ಬುಕ್ ಮತ್ತು ಸ್ಟೇಷನರಿ ವಸ್ತುಗಳ ಖರೀದಿಗೆ ಹೆಚ್ಚುವರಿಯಾಗಿ 26 ಕೋಟಿ ರೂ.ನೀಡಲು ಸಂಪುಟ ಸಮ್ಮತಿಸಿದೆ ಎಂದು ಮಾಧುಸ್ವಾಮಿ ಹೇಳಿದರು.

ಉಪಕರಣ ಖರೀದಿ: ರಾಜ್ಯದ ರಕ್ತನಿಧಿ ಮತ್ತು ರಕ್ತ ಶೇಖರಣಾ ಕೇಂದ್ರಗಳಿಗೆ ಉಪಕರಣಗಳನ್ನು ಖರೀದಿಸಲು 12 ಕೋಟಿ ರೂ.ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. ಶಿಶುಗಳ ಮರಣವನ್ನು ತಪ್ಪಿಸಲು ನವಜಾತ ಶಿಶು ಆರೈಕೆ ಘಟಕಗಳಿಗೆ ಉಪಕರಣ, ಔಷಧಿ ಖರೀದಿಗೆ 16.95ಕೋಟಿ ರೂ.ನೀಡಲು ಅನುಮೋದನೆ ನೀಡಿದೆ ಎಂದರು.

10 ಲಕ್ಷ ರೂ.ಪರಿಹಾರ: ಕೆಎರ್ಸ್ಸಾಪಿ ಶೂಟಿಂಗ್ ತರಬೇತಿ ವೇಳೆ ಆಕಸ್ಮಿಕ ಗುಂಡು ತಗುಲಿ ಮೃತಪಟ್ಟ ಹೊಸಕೋಟೆ ಜಡಿಗೇನಹಳ್ಳಿಯ ರೈತನ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ನೀಡಲು ಸಂಪುಟ ತೀರ್ಮಾನಿಸಿದೆ ಎಂದು ಅವರು ವಿವರ ನೀಡಿದರು.

ಸರಕಾರಿ ಉದ್ಯೋಗ ನೀಡಬೇಕೆಂದು ರಾಜ್ಯ ಮಾನವ ಹಕ್ಕುಗಳ ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ, ಕಾನೂನಿನಲ್ಲಿ ಸರಕಾರಿ ಉದ್ಯೋಗ ನೀಡಲು ಅವಕಾಶ ಇಲ್ಲ. ಹೀಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ ಎಂದು ಅವರು ವಿವರಿಸಿದರು.

ವನ್ಯಜೀವಿ ಮತ್ತು ಮಾನವ ಸಂಘರ್ಷ ತಪ್ಪಿಸಲು ನಾಗರಹೊಳೆ, ಬಂಡೀಪುರ, ಮಡಿಕೇರಿ, ವಿರಾಜಪೇಟೆ, ಬನ್ನೇರುಘಟ್ಟ ವನ್ಯಜೀವಿ ಧಾಮ, ಹಾಸನ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಒಟ್ಟು 118 ಕಿ.ಮೀ ಉದ್ದದ ರೈಲ್ವೆ ಹಳಿಗಳ ಬೇಲಿ ನಿರ್ಮಿಸಲು 100 ಕೋಟಿ ರೂ.ನೀಡಲು ಒಪ್ಪಿಗೆ ನೀಡಿದೆ.

ಮೂರು ವರ್ಷಗಳಲ್ಲಿ ವಿವಿಧ ಅರಣ್ಯ ಪ್ರದೇಶಗಳ ಅಂಚಿನಲ್ಲಿ 628 ಕಿ.ಮೀ ಉದ್ದದ ರೈಲ್ವೆ ಹಳಿಗಳ 517 ಕಿ.ಮೀ ಬೇಲಿ ನಿರ್ಮಿಸಲು 628 ಕೋಟಿ ರೂ.ವೆಚ್ಚ ಮಾಡಲಾಗುವುದು. ಪ್ರತಿ ಕಿ.ಮೀಗೆ 1.20 ಕೋಟಿ ರೂ.ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ 157 ಕೆರೆ ತುಂಬುವ 386 ಕೋಟಿ ರೂ.ಮೊತ್ತದ ಯೋಜನೆಗೆ ಅನುಮೋದನೆ ನೀಡಿದೆ. ಹಾಗೆಯೇ ಗದಗ, ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಸಮೀಪ ಇಂಗು ಕೆರೆ ನಿರ್ಮಾಣಕ್ಕೆ 14 ಕೋಟಿ ರೂ. ಯೋಜನೆಗೂ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಒಳಚರಂಡಿ ಕಾಮಗಾರಿಗೆ 55 ಕೋಟಿ ರೂ.ಒದಗಿಸಲು ಹಾಗೂ ಯಾದಗಿರಿಯ ಹುಣಸಗಿ ಗ್ರಾಮವನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ನೀರು ಒದಗಿಸುವ 108 ಕೋಟಿ ರೂ.ವೆಚ್ಚದ ಎಣ್ಣೆಹೊಳೆ ಏತನೀರಾವರಿ ಯೋಜನೆಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ

-ಜೆ.ಸಿ.ಮಾದುಸ್ವಾಮಿ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News