ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ಣ ಕಡೇಕೋಡಿ ನಿಧನ

Update: 2019-10-03 16:48 GMT

ಬೆಳಗಾವಿ, ಅ.3: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಮಾನದ ಸಾಧಕ ಕೃಷ್ಣ ಗೋಪಾಲಕೃಷ್ಣ ಕಡೇಕೋಡಿ ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.

ಕಂದಾಯ ಇಲಾಖೆಯಲ್ಲಿ ಕಾರಕೂನ ಹುದ್ದೆಯಿಂದ ಆಯುಕ್ತರ ಹುದ್ದೆಯವರೆಗೆ ಏರಿದ್ದ ಅವರು ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದ್ದರು. ಬೆಳಗಾವಿಯ ಸದಾಶಿವನಗರದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಗುರುವಾರ ಮಧ್ಯಾಹ್ನ ಅವರ ಅಂತ್ಯಸಂಸ್ಕಾರ ನೆರವೇರಿತು.

ಶತಮಾನದ ಸಾಧಕ: ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಪುರಾತನ ವಸ್ತುಗಳ ಸಂಗ್ರಹ ಅವರ ಹವ್ಯಾಸವಾಗಿತ್ತು. ಅದೊಂದು ಅಪರೂಪದ ದಾಖಲೆಯೇ ಸರಿ. ಇದರಲ್ಲಿ ದೊಡ್ಡ ಸಾಧನೆಯನ್ನೇ ಅವರು ಮಾಡಿದ್ದಾರೆ.

1854ರಲ್ಲಿ ಬಿಡುಗಡೆಯಾಗಿರುವ ವಿಕ್ಟೊರಿಯಾ ರಾಣಿ ಮುಖದ ಪ್ರಥಮ ಅಂಚೆ ಚೀಟಿಯಿಂದ ಹಿಡಿದು ಭಾರತದಲ್ಲಿ ಈವರೆಗೆ ಬಿಡುಗಡೆಯಾಗಿರುವ ಎಲ್ಲ ಅಂಚೆ ಚೀಟಿಗಳೂ ಇವರ ಬಳಿ ಇವೆ. ಕಿತ್ತೂರು ಚನ್ನಮ್ಮ, ನಾ.ಸು.ಹರ್ಡೀಕರ್ ಮತ್ತಿತರರ ಅಂಚೆ ಚೀಟಿ ಬಿಡುಗಡೆಗೂ ಕಡೇಕೋಡಿ ಕಾರಣರಾಗಿದ್ದಾರೆ. ಕಡೇಕೋಡಿಯವರ 90ನೇ ವಯಸ್ಸಿನ ಸವಿ ನೆನಪಿಗಾಗಿ ಅಮೆರಿಕಾ ಸರಕಾರ 41 ಸೇಂಟ್ಸ್ ಮೌಲ್ಯದ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಭಾರತ ಸೇರಿದಂತೆ 64 ದೇಶಗಳಲ್ಲಿ ಬಿಡುಗಡೆಯಾಗಿರುವ ಮಹಾತ್ಮಾ ಗಾಂಧಿಯವರ ಎಲ್ಲ ಅಂಚೆ ಚೀಟಿಗಳನ್ನು ಕಡೇಕೋಡಿ ಸಂಗ್ರಹಿಸಿದ್ದಾರೆ. ಜತೆಗೆ, ಆ ಅಂಚೆ ಚೀಟಿಗಳ ಐತಿಹ್ಯವನ್ನೂ ಸಂಗ್ರಹಿಸಿ ದಾಖಲಿಸಿದ್ದಾರೆ. ಇದಕ್ಕಾಗಿ, ಕೇಂದ್ರ ಸರಕಾರದ ಬಂಗಾರದ ಪದಕ ಪಡೆದಿದ್ದಾರೆ. 1982ರಲ್ಲಿ ಮೊದಲ ಬಾರಿಗೆ ದೇಶದ ಸ್ವಾತಂತ್ರ್ಯ ಸಂಗ್ರಾಮದ ಕಥೆಯನ್ನು ಅಂಚೆ ಚೀಟಿಯಲ್ಲಿ ನಿರೂಪಿಸಿದ್ದಾರೆ. ಅಂಚೆ ಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ಪಾರಂಪರಿಕ ವಸ್ತುಗಳ ಸಂಗ್ರಹ ಮೂರನ್ನೂ ಮಾಡುವ, ಅದರಲ್ಲೂ ಇಳಿ ವಯಸ್ಸಿನಲ್ಲೂ ಇಂತಹ ಅಪರೂಪದ ಕಾಯಕದಲ್ಲಿ ತೊಡಗಿದ್ದವರು ಅವರಾಗಿದ್ದರು.

1975ರಲ್ಲಿ ಬೆಳಗಾವಿಯಲ್ಲಿ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಾಹಕರ ಸಂಘ ಸ್ಥಾಪಿಸಿದರು. ರಾಜ್ಯ ಅಂಚೆ ಚೀಟಿ ಸಂಗ್ರಾಹಕರ ಸಂಘದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಗೆ ಪಿಲಾಟೆಲಿಕ್ ಬ್ಯೂರೋ ಎನ್ನುವ ಹೆಸರು ಬರುವಂತೆ ಮಾಡಿದ ಕೀರ್ತಿ ಕಡೇಕೋಡಿಯವರದ್ದು. ಬೆಂಗಳೂರು, ಬೆಳಗಾವಿ, ಧಾರವಾಡ ಮೊದಲಾದೆಡೆ ಆಯೋಜಿಸಿದ್ದ ಅಂಚೆ ಚೀಟಿ ಪ್ರಗದರ್ಶನಗಳಲ್ಲಿ ಅವರು ಬಂಗಾದರ ಪದಕ ಪಡೆದಿದ್ದರು. ರಾಣಿ ಚನ್ನಮ್ಮ (1977), ನಾ.ಸು.ಹರ್ಡಿಕರ್(1989), ಜೋಗ ಜಲಪಾತ (2003) ಅಂಚೆ ಚೀಟಿಗಳನ್ನು ಭಾರತ ಸರಕಾರದಿಂದ ಬಿಡುಗಡೆ ಮಾಡಿಸುವಲ್ಲಿ ಕಡೇಕೋಡಿಯವರ ಪಾತ್ರ ಪ್ರಮುಖವಾದದ್ದು.

ನಾಣ್ಯ ಸಂಗ್ರಹ: ಔರಂಗಜೇಬ್, ಪೇಶ್ವೆಯವರ ಕಾಲದ ನಾಣ್ಯದಿಂದ ಹಿಡಿದು ಸುಮಾರು 1860ನೇ ಇಸವಿಯಿಂದೀಚೆಗಿನ ಎಲ್ಲ ಮಾದರಿಯ ನಾಣ್ಯ, ನೋಟುಗಳನ್ನು ಸಂಗ್ರಹಿಸಿದ್ದರು. ಬಂಗಾರ, ಬೆಳ್ಳಿಯ ನಾಣ್ಯಗಳು, 1835ರಿಂದ 1947ರ ವರೆಗೆ ಬ್ರಿಟಿಷರು ಬಿಡುಗಡೆ ಮಾಡಿರುವ ಎಲ್ಲ ನಾಣ್ಯಗಳೂ ಇವರ ಬಳಿ ಇವೆ. 1765ರ ಈಸ್ಟ್ ಇಂಡಿಯಾ ಕಂಪನಿಯ ಗೋಲ್ಡ್ ಮೊಹರ್ ನಾಣ್ಯವೂ ಇವರ ಸಂಗ್ರಹದಲ್ಲಿದೆ.

ಅವರ ಆಸಕ್ತಿ ನಾಣ್ಯಗಳ ಸಂಗ್ರಹಕ್ಕಷ್ಟೆ ಸೀಮಿತವಾಗಿಲ್ಲ. ಸಂಗ್ರಹಿಸಿದ ನಾಣ್ಯಗಳ ಇತಿಹಾಸವನ್ನೂ ಅವರು ಕೆದಕಿದ್ದಾರೆ. 1ರಿಂದ 10 ರೂ. ಹಾಗೂ 1ರಿಂದ 100 ರೂ. ವರೆಗಿನ ಸೀರಿಯಲ್ ನೋಟುಗಳು ಇವರ ಬಳಿ ಇದ್ದು, ಇಂತಹ ನೋಟು ಸಂಗ್ರಹ ದೇಶದಲ್ಲೆ ಬೇರೆ ಯಾರ ಬಳಿಯೂ ಇಲ್ಲ ಎನ್ನಲಾಗಿದೆ.

ಈಸ್ಟ್ ಇಂಡಿಯಾ ಕಂಪನಿಯ 18 ಮತ್ತು 19ನೇ ಶತಮಾನದ ನಾಣ್ಯಗಳು, 1835ರಿಂದೀಚೆಗಿನ ಅಖಂಡ ಭಾರತದ ನಾಣ್ಯಗಳು, 1880-1061ರ ನಡುವಿನ ಗೋವಾದ ನಾಣ್ಯಗಳು, ಭಾರತದ ಎಲ್ಲ ಕರೆನ್ಸಿಗಳು ಅವರ ಸಂಗ್ರಹದಲ್ಲಿವೆ.

ಪಾರಂಪರಿಕ ವಸ್ತುಗಳು: ನಾಣ್ಯಗಳ ಜತೆಗೆ, ಅಪರೂಪದ ಪಾರಂಪರಿಕ ವಸ್ತುಗಳ ಸಂಗ್ರಹದಲ್ಲೂ ಕಡೇಕೋಡಿ ಎತ್ತಿದ ಕೈ. ಮಲೆನಾಡಿನ ಪರಿಸರದಲ್ಲಿ ನಮ್ಮ ಹಿರಿಯರು ಅಡುಗೆಗೆ ಬಳಸುತ್ತಿದ್ದ ಸಾಮಗ್ರಿಗಳು, ಮನೆಯಂಗಳದಲ್ಲಿ ಇಡುತ್ತಿದ್ದ ವಸ್ತುಗಳು, ಬೆಳಕಿನ ವ್ಯವಸ್ಥೆಯ ಉಪಕರಣಗಳು, ಹಿರಿಯರ ಧರ್ಮ ಕರ್ಮಾಚರಣೆ ವಸ್ತುಗಳು ಇತ್ಯಾದಿ ಇವರ ಸಂಗ್ರಹದಲ್ಲಿವೆ.

ಮ್ಯೂಸಿಯಂ ಕನಸು: ತಾವು ಸಂಗ್ರಹಿಸಿರುವ ವಸ್ತುಗಳನ್ನು ಜೋಪಾನವಾಗಿಡುವ ನಿಟ್ಟಿನಲ್ಲಿ ಒಂದು ಮ್ಯೂಸಿಯಂ ಸ್ಥಾಪಿಸಿ, ತಮ್ಮ ಸಂಗ್ರಹವನ್ನೆಲ್ಲ ಮುಂದಿನ ಪೀಳಿಗೆಗೆ ಕಾಯ್ದಿಡುವ ಅಭಿಲಾಷೆ ಕಡೇಕೋಡಿಯವರದ್ದಾಗಿತ್ತು. ಅವರ ಕನಸನ್ನು ಸರಕಾರ, ಸಂಘ ಸಂಸ್ಥೆಗಳು ಸಾಕಾರಗೊಳಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News