ಪ್ರಧಾನಿ ಹೇಳಿದ ಹಸಿ ಸುಳ್ಳು

Update: 2019-10-04 05:57 GMT

ನೂರೈವತ್ತು ವರ್ಷಗಳ ಹಿಂದೆ ಜನಿಸಿದ ಗಾಂಧೀಜಿಯ ಜನ್ಮ ದಿನವನ್ನು ಭಾರತ ಮಾತ್ರವಲ್ಲ ಇಡೀ ಜಗತ್ತು ಆಚರಿಸಿತು. ಬಾಪೂಜಿ ‘ಸತ್ಯವೇ ದೇವರು’ ಹೇಳಿದ ಮಾತು ಮನುಕುಲಕ್ಕೆ ನಿರಂತರ ದಾರಿ ದೀಪವಾಗಿದೆ. ಆದರೆ ಇದೇ ಮಹಾತ್ಮನ 150ನೇ ಜಯಂತಿ ಅಂಗವಾಗಿ ಅಹ್ಮದಾಬಾದ್‌ನಲ್ಲಿ ಏರ್ಪಡಿಸಲಾದ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ರಿಂದ ‘ರಾಷ್ಟ್ರಪಿತ’ ಎಂದು ಕರೆಸಿಕೊಂಡ ಇನ್ನೊಬ್ಬ ಮಹಾತ್ಮರು ಹಸಿ ಸುಳ್ಳೊಂದನ್ನು ಹೇಳಿದರು. ‘‘ದೇಶದ ಗ್ರಾಮೀಣ ಭಾಗ ಬಯಲು ಶೌಚಾಲಯ ಮುಕ್ತವಾಗಿದೆ. ಅರವತ್ತು ತಿಂಗಳುಗಳ ಸತತ ಪರಿಶ್ರಮದಿಂದ ಈ ಗುರಿ ಸಾಧಿಸಲಾಗಿದೆ.’’ ಎಂದು ಈ ಮಹಾತ್ಮರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ‘‘ಗ್ರಾಮೀಣ ಭಾರತವನ್ನು ಬಯಲು ಶೌಚ ಮುಕ್ತ ಮಾಡಿದ ಸಾಧನೆಗಾಗಿ ಇಡೀ ವಿಶ್ವವೇ ಬೆರಗಾಗಿ ಭಾರತವನ್ನು ಕೊಂಡಾಡುತ್ತಿದೆ’’ ಎಂದು ಇವರು ಇನ್ನೊಂದು ಬುರುಡೆ ಬಿಟ್ಟರು. ‘‘ಭಾರತವನ್ನು ಬಯಲು ಶೌಚ ಮುಕ್ತ ರಾಷ್ಟ್ರವನ್ನಾಗಿ ಮಾಡಿದ್ದು ಮಹಾತ್ಮಾ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಕ್ಕೆ ಸಮನಾದುದು’’ ಎಂದೂ ‘‘ಇದು ಮಹಿಳೆಯರಿಗೆ ಘನತೆಯನ್ನು ತಂದು ಕೊಟ್ಟಿದೆ. ಲಕ್ಷಾಂತರ ಮಕ್ಕಳನ್ನು ಅನಾರೋಗ್ಯದಿಂದ ಕಾಪಾಡಿದೆ’’ ಎಂದೂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಬಯಲು ಶೌಚ ರಾಷ್ಟ್ರದ ಘೋಷಣೆ ನಿಜವೇ ಆಗಿದ್ದರೆ ಸಂತೋಷ. ಆದರೆ ವಾಸ್ತವಿಕ ಪರಿಸ್ಥಿತಿ ಮತ್ತು ಅಧಿಕೃತ ಅಂಕಿ ಅಂಶಗಳು ಹೇಳುವ ಸತ್ಯವೇ ಬೇರೆಯಾಗಿದೆ. ಬಯಲು ಶೌಚ ಮುಕ್ತ ಎಂದು ಘೋಷಿಸಿದ ಮಾತ್ರಕ್ಕೆ ಗುರಿ ಸಾಧಿಸಿದಂತಲ್ಲ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬಾವಖೇಡಿ ಗ್ರಾಮವನ್ನು 2018ರ ಎಪ್ರಿಲ್ 4ರಂದು ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಲಾಗಿತ್ತು. ಆದರೆ ಇದೇ ಗ್ರಾಮದಲ್ಲಿ ಕಳೆದ ಸೆಪ್ಟಂಬರ್ 25ರಂದು ಬಯಲಿನಲ್ಲಿ ಶೌಚ ಮಾಡಿದರೆಂದು ಇಬ್ಬರು ದಲಿತ ಬಾಲಕರನ್ನು ನಡು ರಸ್ತೆಯಲ್ಲಿ ಹೊಡೆದು ಸಾಯಿಸಲಾಗಿತ್ತು. ಮನೆಯಲ್ಲಿ ಶೌಚಾಲಯ ಇಲ್ಲದ್ದರಿಂದ ಈ ಬಾಲಕರು ಬಯಲಿನಲ್ಲಿ ಶೌಚ ಮಾಡಲು ಬಂದಾಗ ಈ ಹೇಯ ಕೃತ್ಯ ನಡೆದಿತ್ತು. ಪ್ರಧಾನ ಮಂತ್ರಿ ಹೆಮ್ಮೆಯಿಂದ ಹೇಳಿಕೊಂಡ ಬಯಲು ಶೌಚ ಮುಕ್ತ ಎಂದು ಘೋಷಿಸಲ್ಪಟ್ಟ ಹಳ್ಳಿಯ ಕತೆಯಿದು. ಇದು ಅದೊಂದು ಗ್ರಾಮದ ಕತೆಯಲ್ಲ ಗ್ರಾಮೀಣ ಭಾರತದ ಕೊನೆಯಿಲ್ಲದ ವ್ಯಥೆಯ ಕತೆ.

   ಕಳೆದ ಐದು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ಈ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಕಾಶ್ಮೀರ, ಪೌರತ್ವ ನೋಂದಣಿಯಂತಹ ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡಂತೆ ಬಯಲು ಶೌಚ ಮುಕ್ತ ಭಾರತ ತನ್ನ ಮಹತ್ಸಾಧನೆ ಎಂದು ಮೋದಿ ಹೇಳುತ್ತಿದ್ದಾರೆ.

  ಆದರೆ ಪ್ರಧಾನಿ ಏನೇ ಹೇಳಲಿ ಕೇಂದ್ರ ಸರಕಾರದ ದತ್ತಾಂಶಗಳ ಪ್ರಕಾರ ಭಾರತ ನೂರಕ್ಕೆ ನೂರರಷ್ಟು ಬಯಲು ಶೌಚ ಮುಕ್ತ ರಾಷ್ಟ್ರವಾಗಿಲ್ಲ ಎಂಬುದು ಸಾಬೀತಾಗಿದೆ. 2018ರ ನವೆಂಬರ್‌ನಿಂದ 2019ರ ಫೆಬ್ರವರಿ ಅಂತ್ಯದ ವರೆಗೆ ನಡೆಸಲಾದ ಸಮೀಕ್ಷೆ ಪ್ರಧಾನಿ ಹೇಳಿಕೆಗೆ ವ್ಯತಿರಿಕ್ತವಾಗಿದೆ. ದೇಶದ ಶೇಕಡಾ 93.1ರಷ್ಟು ಕುಟುಂಬಗಳು ಮಾತ್ರ ಶೌಚಾಲಯ ಸೌಲಭ್ಯಗಳನ್ನು ಹೊಂದಿವೆ. ಶೇ. 96. 5ರಷ್ಟು ಜನ ಮಾತ್ರ ತಮ್ಮ ಮನೆಗಳಲ್ಲಿ ಇರುವ ಶೌಚಾಲಯ ಬಳಸುತ್ತಾರೆ. ಬಯಲು ಶೌಚ ಮುಕ್ತವಾಗಿರುವ ಗ್ರಾಮಗಳು ಶೇ. 90.7 ಮಾತ್ರ. ಶೇ. 3.5ರಷ್ಟು ಮಂದಿ ಶೌಚಾಲಯ ಇದ್ದರೂ ವಿವಿಧ ಕಾರಣಗಳಿಂದ ಅದನ್ನು ಬಳಸುತ್ತಿಲ್ಲ.

ಸರಕಾರದ ದಾಖಲೆಗಳಲ್ಲಿ ಲಭ್ಯವಾಗದ ಅನೇಕ ಅಂಶಗಳೂ ಇವೆ. ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಶೌಚಾಲಯವಿದ್ದರೂ ನೀರಿನ ಕೊರತೆಯಿಂದ ಅವುಗಳನ್ನು ಬಳಸಲು ಜನರು ಹಿಂದೇಟು ಹಾಕುತ್ತಾರೆ. ಹೀಗಾಗಿ ಶೌಚಾಲಯ ನಿರ್ಮಿಸಿದ ಮಾತ್ರಕ್ಕೆ ಜನರು ಬಯಲು ಶೌಚಕ್ಕೆ ಹೋಗುವುದಿಲ್ಲವೆಂದಲ್ಲ.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 2014 ರಲ್ಲಿ ಮೊದಲ ಬಾರಿ ದಿಲ್ಲಿಯ ಕೆಂಪುಕೋಟೆಯ ಮೇಲೆ ನಿಂತು ಮಾತಾಡುವಾಗ ‘ಸ್ವಚ್ಛ ಭಾರತ ಅಭಿಯಾನ’ ಘೋಷಿಸಿದರು. 2019ರಲ್ಲಿ ನಡೆಯಲಿರುವ ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ದೇಶವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡಬೇಕೆಂದು ಹೇಳಿದ್ದರು. ಈಗ ಈ ಗುರಿ ಸಾಧಿಸಲಾಗಿದೆ ಎಂದು ಜನರಿಗೆ ತೋರಿಸಲು ಆತುರವಾಗಿ ಈ ಘೋಷಣೆ ಮಾಡಿದ್ದಾರೆ. ವಾಸ್ತವಿಕ ಪರಿಸ್ಥಿತಿಗೂ, ಅಧಿಕೃತ ಅಂಕಿಅಂಶಗಳಿಗೂ, ಪ್ರಧಾನಿ ಹೇಳಿಕೆಗೂ ತಾಳೆಯಾಗುತ್ತಿಲ್ಲ.

 ಪ್ರಧಾನಿ ಸ್ವಚ್ಛ ಭಾರತ ಘೋಷಣೆ ಮಾಡುವ ಮೊದಲೇ ಅಸ್ತಿತ್ವದಲ್ಲಿದ್ದ ಶೌಚಾಲಯಗಳನ್ನು ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದು ಬಿಂಬಿಸುವ ಉದ್ದೇಶದಿಂದ ಕೆಲ ಅಂಕಿ ಸಂಖ್ಯೆಗಳನ್ನು ಬದಲಿಸಲಾಗಿದೆ. 2012ರಲ್ಲಿ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಲೆಕ್ಕ ಹಾಕಲಾದ ಮನೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಗುರಿ ಸಾಧನೆಗಾಗಿ ಹೀಗೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ

 ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಸ್ವಚ್ಛ ಭಾರತದ ಅಂಕಿಅಂಶಗಳು ಸಂಪೂರ್ಣ ಕಟ್ಟುಕತೆಯಾಗಿವೆ. ಪ್ರಧಾನಿ 2014ರಲ್ಲಿ ಘೋಷಿಸಿದ ಗುರಿಯನ್ನು ಸಾಧಿಸಲು ಅಂಕಿ ಅಂಶಗಳನ್ನು ತಿರುಚಲಾಗಿದೆ. ವಾಸ್ತವವಾಗಿ ಸರಕಾರ ಹೇಳಿಕೊಂಡಿರುವುದಕಿಂತ ಶೇ. 40ರಷ್ಟು ಮಾತ್ರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೂ ಪ್ರಧಾನ ಮಂತ್ರಿ ಇಂತಹ ಮಹತ್ವದ ವಿಷಯದಲ್ಲಿ ಸುಳ್ಳು ಹೇಳುವುದು ಅವರ ಘನತೆಗೆ ತಕ್ಕುದಲ್ಲ.

ಬಯಲು ಶೌಚ ಮುಕ್ತ ಭಾರತ ಮೋದಿಯವರೇ ಆರಂಭಿಸಿದ ಕಾರ್ಯಕ್ರಮವಲ್ಲ. ತುಂಬಾ ಹಿಂದಿನಿಂದಲೂ ನಮ್ಮ ಸರಕಾರಗಳು ಇದಕ್ಕಾಗಿ ಪ್ರಯತ್ನಿಸುತ್ತಲೇ ಬಂದಿವೆ. ಕರ್ನಾಟಕದಲ್ಲಿ ಎಂ.ಪಿ. ಪ್ರಕಾಶ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಬಯಲು ಶೌಚ ಮುಕ್ತ ಗ್ರಾಮಗಳಿಗಾಗಿ ವಿಶೇಷ ಯೋಜನೆ ರೂಪಿಸಿ ಅದಕ್ಕೆ ತಕ್ಕ ಅನುದಾನ ಒದಗಿಸಿದ್ದರು. ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಸಹಾಯ ಧನ ನೀಡಲು ಆಗಲೇ ಆರಂಭಿಸಿತ್ತು. ದೇಶದ ಉಳಿದ ರಾಜ್ಯಗಳಲ್ಲೂ ಇಂತಹ ಯೋಜನೆಗಳನ್ನು ರೂಪಿಸಲಾಯಿತು. ಆದರೆ ಮೋದಿಯವರಂತೆ ಅವರಾರೂ ಇದು ತಮ್ಮ ಸಾಧನೆ ಎಂದು ಪ್ರಚಾರ ಮಾಡಿಕೊಳ್ಳಲಿಲ್ಲ.

ಪ್ರಧಾನಿ ಮೋದಿ ಬಯಲು ಶೌಚ ಮುಕ್ತ ಗುರಿ ಸಾಧಿಸಲಾಗಿದೆ ಎಂದು ಹೇಳುತ್ತಲೇ ಬಂದರು. ಆದರೆ ‘ದಿ ವೈರ್’ ಆನ್ ಲೈನ್ ಸುದ್ದಿ ಜಾಲ ತಾಣ ತನ್ನ ಸುದ್ದಿಗಾರರ ಮೂಲಕ ಪರಿಶೀಲನೆ ನಡೆಸಿದಾಗ 2017ರಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಿಸಲ್ಪಟ್ಟ ಅನೇಕ ಹಳ್ಳಿಗಳ ಮನೆಗಳಲ್ಲಿ ಶೌಚಾಲಯವೇ ಇರಲಿಲ್ಲ. ಕೆಲವು ಶೌಚಾಲಯಗಳು ಕುಸಿದು ಬಿದ್ದಿರುವುದು ಕಂಡು ಬಂದಿದೆ.

ಪ್ರಧಾನ ಮಂತ್ರಿ ಇಂತಹ ಸುಳ್ಳು ಹೇಳುವ ಬದಲು ವರ್ಷಕ್ಕೆ ಎರಡು ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು? ಜಿಡಿಪಿ ಶೇ. 5ಕ್ಕೆ ಯಾಕೆ ಕುಸಿಯಿತು? ಎಂಬ ಪ್ರಶ್ನೆಗೆ ಉತ್ತರಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News