ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ಸರಕಾರ ದಿವಾಳಿಯಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-10-04 11:43 GMT

ಬೆಂಗಳೂರು, ಅ. 4: ‘ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ದಿವಾಳಿಯಾಗಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ‘ಸನ್ಮಾನ್ಯ ಯಡಿಯೂರಪ್ಪನವರೇ ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿ ಕೊಡುತ್ತೀರಿ? ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕಿಲ್ಲ, ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜೀನಾಮೆ ಕೊಟ್ಟು ಹೊರಡಿ: ‘ಮುಖ್ಯಮಂತ್ರಿ ಯಡಿಯೂರಪ್ಪನವರೇ, ನಿಮ್ಮ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬೊಕ್ಕಸ ಖಾಲಿಗೆ ಯಾರು ಹೊಣೆ: ಸೆಪ್ಟೆಂಬರ್‌ವರೆಗೆ ರಾಜ್ಯದ ಬೊಕ್ಕಸ ಸುಸ್ಥಿತಿಯಲ್ಲಿ ಇತ್ತು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿದ್ದಾರೆ. ಸೆಪ್ಟೆಂಬರಿನಲ್ಲಿ ಸುಸ್ಥಿತಿಯಲ್ಲಿದ್ದ ಬೊಕ್ಕಸ ಅಕ್ಟೋಬರ್ ವೇಳೆಗೆ ಖಾಲಿಯಾಗಿದೆ ಎಂದರೆ ಇದಕ್ಕೆ ಯಾರು ಹೊಣೆ ಎಂದು ಬಿಜೆಪಿಯವರೇ ನೀವೇ ಹೇಳಬೇಕು’ ಎಂದು ಜೆಡಿಎಸ್ ಟ್ವಿಟ್ಟರ್ ಮೂಲಕ ಒತ್ತಾಯಿಸಿದೆ.

ಬಿಜೆಪಿ ಸಂಸದರು ಉತ್ತರ ಕುಮಾರರೇ..: ‘ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ. ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ! ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದೇಗೆ?’ ಎಂದು ಕಾಂಗ್ರೆಸ್ ಕಿಡಿಕಾರಿದೆ

‘ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಇಪ್ಪತ್ತೈದು ಉತ್ತರ ಕುಮಾರರೇ ನಿಮ್ಮ ಉತ್ತರವೇನು? ಮುಖ್ಯಮಂತ್ರಿ ಯಡಿಯೂರಪ್ಪನವರೇ ನೆರೆ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲವೇ ನಿರ್ಗಮಿಸಿ’ ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News