ಮುಸ್ಲಿಮರನ್ನು ದಮನಿಸಲು ಜನಾಂಗೀಯವಾದಿ ನೀತಿಯ ಮೊರೆ ಹೋದ ಬಿಜೆಪಿ: ಎಸ್‌ಡಿಪಿಐ ಆಕ್ರೋಶ

Update: 2019-10-04 12:05 GMT
ಇಲ್ಯಾಸ್ ಮುಹಮ್ಮದ್ ತುಂಬೆ

ಬೆಂಗಳೂರು, ಅ. 4: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದೆಂದು ಹೇಳಿಕೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿವರದು ಕೇವಲ ಬೆದರಿಸುವ ವಿಫಲ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಟೀಕಿಸಿದ್ದಾರೆ.

ಎನ್‌ಆರ್‌ಸಿ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಮುಸ್ಲಿಮ್ ಸಮುದಾಯವನ್ನು ದಮನಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಕೋಮುವಾದಿ ಹಾಗೂ ಜನಾಂಗೀಯವಾದಿ ನೀತಿಗೆ ಮೊರೆ ಹೋಗಿವೆ. ದೇಶದ ನಾಗರಿಕರ ಅಭಿವೃದ್ಧಿ, ವಿಕಾಸದ ಬಗ್ಗೆ ಚಿಂತಿಸುವುದರ ಬದಲಾಗಿ ದೇಶದ ಪ್ರಜೆಗಳನ್ನು ಹೊರದಬ್ಬುವುದು ಹೇಗೆ ಎಂಬ ಬಗ್ಗೆ ಯೋಚಿಸುವ ಇಂತಹ ಕುತ್ಸಿತ ಹಾಗೂ ವಿಭಜನಕಾರಿ ಮನಸ್ಸುಗಳು ದೇಶದ ಆಡಳಿತದ ಚುಕ್ಕಾಣಿಯಲ್ಲಿ ವಕ್ಕರಿಸಿರುವುದು ದೇಶದ ದುರದೃಷ್ಟ.

ಆರೆಸ್ಸೆಸ್ಸಿನ ಜನಾಂಗೀಯವಾದಿ ಮತ್ತು ವಿಭಜನವಾದಿ ಸಿದ್ಧಾಂತಗಳನ್ನು ಕುತಂತ್ರಗಳ ಮೂಲಕ ಜಾರಿಗೆ ತರುತ್ತಿರುವ ಬಿಜೆಪಿ ಈ ದೇಶದ ಸಮಗ್ರತೆಗೆ, ಏಕತೆಗೆ ಹಾಗೂ ಭಾವೈಕ್ಯತೆಗೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‌ಶಾ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಜಾರಿಗೆ ತರಲಾಗುವುದೆಂದು ದೇಶದ ಮುಸ್ಲಿಮರನ್ನು ಬೆದರಿಸುವ ಹತಾಶ ಪ್ರಯತ್ನಕ್ಕೆ ಇಳಿದಿದ್ದಾರೆ.

ಎಸ್‌ಡಿಪಿಐ ಹಾಗೂ ದೇಶದ ಎಲ್ಲ ಸಂವಿಧಾನ ಪ್ರಿಯ ಹಾಗೂ ಜಾತ್ಯತೀತ ಜನರೆಲ್ಲ ಒಂದಾಗಿ ಬಿಜೆಪಿ ಹಾಗೂ ಸಂಘಪರಿವಾರದ ಷಡ್ಯಂತ್ರಗಳನ್ನು ವಿಫಲಗೊಳಿಸಲಾಗುವುದು. ಎನ್‌ಆರ್‌ಸಿ ಎಂಬ ಬೆದರುಬೊಂಬೆಗೆ ಈ ದೇಶದ ಜನತೆ ಸೊಪ್ಪುಹಾಕಲಾರರು. ಎಸ್‌ಡಿಪಿಐ ಅದನ್ನು ಸಾರಸಗಟಾಗಿ ತಿರಸ್ಕರಿಸುತ್ತಿದೆ. ಯಾವುದೇ ಸಮುದಾಯಗಳ ಜನರು ಅದಕ್ಕೆ ಬೆದರಲಾರರು ಎಂದು ಇಲ್ಯಾಸ್ ಮುಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಜನರು ಪ್ರವಾಹ ಸಂತ್ರಸ್ತರು ಮನೆ-ಮಾರು ಕಳೆದುಕೊಂಡು ಅನ್ನಕ್ಕಾಗಿ ಪರದಾಡುತ್ತಿರುವಾಗ ಅಂತಹವರ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಏನೇನೂ ಮಾಡದ ಕೇಂದ್ರ ಹಾಗೂ ರಾಜ್ಯ ಸರಕಾರ ಇಂತಹ ಹೇಳಿಕೆಗಳಿಂದ ಜನರ ದಿಕ್ಕು ತಪ್ಪಿಸುತ್ತಿದೆ.

ದೇಶದಲ್ಲಿ ಮೋದಿ ಸರಕಾರದ ಜನವಿರೋಧಿ ಆಡಳಿತದಿಂದ ಜನರು ತತ್ತರಿಸುತ್ತಿದ್ದು, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಅಮಿತ್ ಶಾ ಹಾಗೂ ಬಸವರಾಜ ಬೊಮ್ಮಾಯಿ ಹೇಳಿಕೆಗಳು ಖಂಡನೀಯ ಎಂದು ಇಲ್ಯಾಸ್ ತುಂಬೆ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News