ಪಿಎಂಸಿ, ಐಎಲ್‌ಆ್ಯಂಡ್‌ಎಫ್‌ಎಸ್, ಇಂಡಿಯಾ ಬುಲ್ಸ್....ಹೌಡಿ ಮೋಡಿ?

Update: 2019-10-04 18:29 GMT

1991ರ ನಂತರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಹೆಸರಿನಲ್ಲಿ ಸಾಮಾನ್ಯ ಜನರ ಆಸ್ತಿಪಾಸ್ತಿ ಮತ್ತು ಉಳಿತಾಯಗಳ ಮೇಲೆ ಕಾರ್ಪೊರೇಟ್ ದಾಳಿ ಪ್ರಾರಂಭವಾದ ಮೇಲೆ ಬ್ಯಾಂಕು-ವಿಮೆಗಳು ಖಾಸಗೀಕರಣವಾಗುತ್ತಿರುವುದು ಮಾತ್ರವಲ್ಲದೆ ಅವುಗಳ ಮೇಲಿನ ಉಸ್ತುವಾರಿಯೂ ಸಡಿಲವಾಗುತ್ತಿದೆ. ಅದರಲ್ಲೂ ಮೋದಿ ಹಯಾಮಿನಲ್ಲಿ ಸರಕಾರ ಮತ್ತು ಅವರ ಪ್ರೀತಿಪಾತ್ರ ಕಂಪೆನಿಗಳ ಸ್ವಜನ ಪಕ್ಷಪಾತಿ ಕ್ರೋನಿ ಆರ್ಥಿಕತೆ ಮತ್ತು ಕ್ರೋನಿ ಆಡಳಿತಗಳು ಪ್ರಾರಂಭವಾದ ಮೇಲೆ ಹಾಡ ಹಗಲಿನಲ್ಲೇ ಜನರ ದುಡ್ಡನ್ನು ಬ್ಯಾಂಕುಗಳೇ ಲೂಟಿ ಮಾಡುತ್ತಿವೆ.



ಒಲೆ ಹತ್ತಿ ಉರಿದರೆ ನಿಲಬವುದಲ್ಲದೆ
ಧರೆ ಹತ್ತಿ ಉರಿದರೆ ನಿಲಬಹುದೆ?....
ತಾಯ ಎದೆಹಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ...ಕೂಡಲಸಂಗಮದೇವಾ?

ಎಂದು ಬಸವಣ್ಣ ಹನ್ನೆರಡನೇ ಶತಮಾನದಲ್ಲೇ ಕೇಳಿದ್ದರು. ಕಾಯಬೇಕಾದವರು, ಪೊರೆಯಬೇಕಾದವರೇ ಜೀವ ತೆಗೆಯಲು ಮುಂದಾದರೆ ಬದುಕು ಹೇಗೆ ಎಂಬ ಪ್ರಶ್ನೆಯನ್ನು ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಇಡೀ ದೇಶಕ್ಕೆ ದೇಶವೇ ಕೇಳುವಂತಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆಗಳು ಪಿಎಂಸಿ, ಐಎಲ್‌ಆ್ಯಂಡ್‌ಎಫ್‌ಎಸ್, ಇಂಡಿಯಾ ಬುಲ್ಸ್ ಹಗರಣಗಳು. ಬ್ಯಾಂಕುಗಳ ರಾಷ್ಟ್ರೀಕರಣವಾಗುವ ಮೊದಲು ಸಾಮಾನ್ಯ ಜನರು ಕಷ್ಟಪಟ್ಟು ದುಡಿದ ಹಣವನ್ನು ಮತ್ತು ಉಳಿತಾಯದ ಹಣವನ್ನು ಕೂಡಿಡಲು ಒಂದು ನಂಬಿಗಸ್ಥ ದಾರಿಯಿರಲಿಲ್ಲ. ಬ್ಯಾಂಕಿಂಗ್ ಸೇವೆ ರಾಷ್ಟ್ರೀಕರಣವಾದದ್ದೇ ಸಾಮಾನ್ಯ ಜನರಿಗೆ ಇಂತಹ ನಂಬುಗೆಯ ಹಣಕಾಸು ಸೇವೆಯನ್ನು ಒದಗಿಸಲೆಂದು ಎಂದು ಕೂಡಾ ಹೇಳಿಕೊಳ್ಳಲಾಗಿದೆ. ಇದರಿಂದಾಗಿ ತಮ್ಮ ಉಳಿತಾಯಕ್ಕೆ ಭದ್ರತೆ, ಬಡ್ಡಿ ಮತ್ತು ತಮಗೆ ಬೇಕೆಂದಾಗ ಅದನ್ನು ವಾಪಸ್ ಪಡೆದುಕೊಳ್ಳಬಹುದಾದ ಗ್ಯಾರಂಟಿಗಳು ಇರುತ್ತಿದ್ದುದ್ದರಿಂದ ಸಾಮಾನ್ಯ ಜನರು ತಮ್ಮ ಬೆವರಿನ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ರಿಸರ್ವ್ ಬ್ಯಾಂಕಿನಿಂದ ಅನುಮತಿ ಪಡೆದ ಸಹಕಾರಿ ಬ್ಯಾಂಕುಗಳಲ್ಲಿ, ವಿಮಾ ಕಂಪೆನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡತೊಡಗಿದರು. 2019ರ ವೇಳೆಗೆ ಜನರ ಉಳಿತಾಯದ ಹಣದ ಮೊತ್ತ ಬ್ಯಾಂಕುಗಳಲ್ಲಿ 117 ಲಕ್ಷ ಕೋಟಿ ರೂಪಾಯಿಗಳು ಮತ್ತು ಎಲ್‌ಐಸಿ ಒಂದರಲ್ಲೇ 31 ಲಕ್ಷ ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತ ಶೇಖರಣೆಯಾಗಿದೆ. ಹೀಗೆ ಶೇಖರಣೆಯಾದ ಬೃಹತ್ ಮೊತ್ತದ ಬಂಡವಾಳವನ್ನು ಸರಕಾರದ ಆದೇಶದಂತೆ ಅಥವಾ ಪರೋಕ್ಷ ಸೂಚನೆಯ ಮೇರೆಗೆ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ದೊಡ್ಡ ದೊಡ್ಡ ಕಂಪೆನಿಗಳಲ್ಲಿ, ಸರಕಾರಗಳಲ್ಲಿ ಮತ್ತು ಇತರ ಲಾಭದಾಯಕ ಸಾರ್ವಜನಿಕ ಯೋಜನೆಗಳಲ್ಲಿ ಹೂಡುತ್ತವೆ. ಈ ಹೂಡಿಕೆಯಿಂದ ಬರುವ ಲಾಭವನ್ನೇ ಗ್ರಾಹಕರ ಉಳಿತಾಯದ ಮೇಲಿನ ಅಥವಾ ವಿಮೆಯ ಮೇಲಿನ ಬಡ್ಡಿಯಾಗಿ ಸಂಸ್ಥೆಗಳು ಸಂದಾಯ ಮಾಡುತ್ತವೆ. ಕಳೆದ ಒಂದು ದಶಕದಲ್ಲಿ ಕೇವಲ ಬಂಡವಾಳ ಹೂಡಿಕೆ ಮಾತ್ರ ಮಾಡುವ ಬ್ಯಾಂಕುಗಳನ್ನು- ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ- NBFC-ಗಳನ್ನೂ ಸಹ ಇದಕ್ಕೆಂದೇ ಸ್ಥಾಪಿಸಲಾಗಿದೆ ಮತ್ತು ಅವಕ್ಕೆ ಪ್ರಾಥಮಿಕ ಹಣವನ್ನು ಸಾರ್ವಜನಿಕ ಬ್ಯಾಂಕುಗಳು, ವಿಮೆ ಕಂಪೆನಿಗಳು ಹಾಗೂ ಸರಕಾರವೇ ಒದಗಿಸುತ್ತಿದೆ. ಹೀಗೆ ಗ್ರಾಹಕರಿಗೂ ಮತ್ತು ದೇಶದ ಆರ್ಥಿಕತೆಗೂ ಏಕಕಾಲದಲ್ಲಿ ಸಹಾಯವಾಗುತ್ತದೆ ಎಂಬುದು ಇದರ ಹಿಂದಿನ ಘೋಷಿತ ಆಶಯ. ಆದರೆ ಈ ರೀತಿ ಬ್ಯಾಂಕುಗಳು ಅಥವಾ ವಿಮಾ ಕಂಪೆನಿಗಳು ಸಾಲ ನೀಡಬೇಕೆಂದರೆ ಸಾಲ ಪಡೆದುಕೊಳ್ಳುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಾಲವನ್ನು ವಾಪಸ್ ಮಾಡುವ ಸಾಮರ್ಥ್ಯ ಇರಬೇಕಾದದ್ದನ್ನು ಖಾತರಿ ಮಾಡಿಕೊಳ್ಳುವುದು ಆಯಾ ಬ್ಯಾಂಕಿನ ಅಧಿಕಾರಿಗಳ ಕರ್ತವ್ಯ.

ಬ್ಯಾಂಕುಗಳು ಆ ರೀತಿ ಕಾನೂನುಬದ್ಧವಾಗಿ ನಡೆದುಕೊಳ್ಳುವುದನ್ನು ಖಾತರಿ ಮಾಡಿಕೊಳ್ಳಬೇಕಿರುವುದು ಬ್ಯಾಂಕುಗಳ ಮೇಲುಸ್ತುವಾರಿ ನೋಡಿಕೊಳ್ಳುವ ರಿಸರ್ವ್ ಬ್ಯಾಂಕಿನ ಕರ್ತವ್ಯ. ಸರಕಾರಗಳ ಕರ್ತವ್ಯ. ಆದರೆ 1991ರ ನಂತರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಹೆಸರಿನಲ್ಲಿ ಸಾಮಾನ್ಯ ಜನರ ಆಸ್ತಿಪಾಸ್ತಿ ಮತ್ತು ಉಳಿತಾಯಗಳ ಮೇಲೆ ಕಾರ್ಪೊರೇಟ್ ದಾಳಿ ಪ್ರಾರಂಭವಾದ ಮೇಲೆ ಬ್ಯಾಂಕು-ವಿಮೆಗಳು ಖಾಸಗೀಕರಣವಾಗುತ್ತಿರುವುದು ಮಾತ್ರವಲ್ಲದೆ ಅವುಗಳ ಮೇಲಿನ ಉಸ್ತುವಾರಿಯೂ ಸಡಿಲವಾಗುತ್ತಿದೆ. ಅದರಲ್ಲೂ ಮೋದಿ ಹಯಾಮಿನಲ್ಲಿ ಸರಕಾರ ಮತ್ತು ಅವರ ಪ್ರೀತಿಪಾತ್ರ ಕಂಪೆನಿಗಳ ಸ್ವಜನ ಪಕ್ಷಪಾತಿ ಕ್ರೋನಿ ಆರ್ಥಿಕತೆ ಮತ್ತು ಕ್ರೋನಿ ಆಡಳಿತಗಳು ಪ್ರಾರಂಭವಾದ ಮೇಲೆ ಹಾಡ ಹಗಲಿನಲ್ಲೇ ಜನರ ದುಡ್ಡನ್ನು ಬ್ಯಾಂಕುಗಳೇ ಲೂಟಿ ಮಾಡುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಂಜಾಬ್ ಮಹಾರಾಷ್ಟ್ರ ಕೋಆಪರೇಟೀವ್ ಬ್ಯಾಂಕ್-ಪಿಎಂಸಿ- ಹಗರಣ. ಭಾರತದ 1500 ಸಹಕಾರಿ ಬ್ಯಾಂಕುಗಳಲ್ಲಿ ಮೊದಲ ಹತ್ತು ಸ್ಥಾನದಲ್ಲಿದ್ದ ಈ ಪಿಎಂಸಿ ಬ್ಯಾಂಕಿನಲ್ಲಿ ಸಾಮಾನ್ಯ ಜನರಲ್ಲದೆ ಇತರ ಸಣ್ಣಪುಟ್ಟ ಕೋ ಆಪರೇಟೀವ್ ಬ್ಯಾಂಕುಗಳೂ ಸಹ ತಮ್ಮ ಡಿಪಾಸಿಟಿನ ಹಣವನ್ನು ಹೂಡಿದ್ದವು. ಹೀಗಾಗಿ ಕಳೆದ ವರ್ಷ ಈ ಬ್ಯಾಂಕಿನ ಒಟ್ಟಾರೆ ಡಿಪಾಸಿಟ್ ಶೇಖರಣೆಯೇ 12,000 ಕೋಟಿ ರೂಪಾಯಿಗಳಾಗಿದ್ದವು. ಆದರೆ ಅದರಲ್ಲಿ 8,000 ಕೋಟಿ ರೂಪಾಯಿಗಳಷ್ಟು ಹಣವನ್ನು ಈ ಬ್ಯಾಂಕಿನ ಆಡಳಿತ ಮಂಡಳಿ ಹಲವು ಸುಳ್ಳು ಖಾತೆಗಳ ಮೂಲಕ ಡಿಎಫ್‌ಐಎಲ್ ಎನ್ನುವ ಮತ್ತೊಂದು ದಿವಾಳಿಯೆದ್ದ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾತ್ರವೇ ನೀಡಿದೆ.

ಪರಿಣಾಮವಾಗಿ ಈಗ ಈ ಪಿಎಂಸಿ ಬ್ಯಾಂಕು ಕೂಡಾ ದಿವಾಳಿಯೆದ್ದಿದೆ ಹಾಗೂ ಇದರಲ್ಲಿ ಹಣ ಹೂಡಿದ್ದ ಲಕ್ಷಾಂತರ ಸಣ್ಣ ಉಳಿತಾಯದಾರರ ಹಣವೂ ಲೂಟಿಯಾಗಿದೆ. ರಿಸರ್ವ್ ಬ್ಯಾಂಕಿನ ಆದೇಶದ ಭಾಗವಾಗಿಯೇ ಅದರಲ್ಲಿ ಹೂಡಿಕೆ ಮಾಡಿರುವ ಗ್ರಾಹಕರು ಈಗ ಹತ್ತು ಸಾವಿರಕ್ಕಿಂತ ಹೆಚ್ಚಿನ ಹಣವನ್ನು ವಾಪಸ್ ಪಡೆಯುವಂತಿಲ್ಲ. ಇದರಿಂದಾಗಿ ಲಕ್ಷಾಂತರ ಗ್ರಾಹಕರು ತಮ್ಮ ಹಣವನ್ನೆಲ್ಲಾ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಸಲಿ ವಿಷಯವೇನೆಂದರೆ ಆ ಡಿಎಫ್‌ಐಎಲ್ ಸಂಸ್ಥೆಯ ಮಾಲಕರಾದ ರಾಕೇಶ್ ವಾಧ್ವಾನ್ ಮತ್ತು ಆತನ ಮಗ ಸಾರಂಗ್ ವಾಧ್ವಾನ್ ಈ ಪಿಎಂಸಿ ಬ್ಯಾಂಕಿನ ಪ್ರಮೋಟರುಗಳಲ್ಲಿ ಇಬ್ಬರು. ಹಾಗೂ ಪಿಎಂಸಿ ಬ್ಯಾಂಕಿನ ಮಾಲಕ ವಾರ್ಯಾಮ್ ಸಿಂಗ್ ಡಿಎಫ್‌ಐಎಲ್ ಸಂಸ್ಥೆಯ ಪ್ರಮೋಟರುಗಳಲ್ಲಿ ಒಬ್ಬ! ಅಷ್ಟು ಮಾತ್ರವಲ್ಲ. ಈ ಡಿಎಫ್‌ಐಎಲ್ ಸಂಸ್ಥೆಯು ನಾಲ್ಕೈದು ವರ್ಷಗಳಷ್ಟು ಹಿಂದೆಯೇ ದಿವಾಳಿಯಾಗತೊಡಗಿತ್ತು. ಆದರೂ ಪಿಎಂಸಿ ಬ್ಯಾಂಕು ಅದರಲ್ಲಿ ಹಣಹೂಡಲು ಮುಂದುವರಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಐದು ವರ್ಷಗಳಿಂದ ಪಿಎಂಸಿ ಬ್ಯಾಂಕು ತನ್ನ ಡಿಪಾಸಿಟಿನ ಶೇ.73ರಷ್ಟು ಹಣವನ್ನು ಇಂತಹ ದಿವಾಳಿ ಸಂಸ್ಥೆಯೊಂದರಲ್ಲಿ ಹೂಡುತ್ತಿದ್ದರೂ ಅದರ ಪ್ರತಿವರ್ಷದ ಆಡಿಟ್‌ಲ್ಲಾಗಲೀ, ವಾರ್ಷಿಕ ತನಿಖೆಗಳಲ್ಲಾಗಲೀ ರಿಸರ್ವ್ ಬ್ಯಾಂಕು ಇದನ್ನು ಯಾಕೆ ಪತ್ತೆ ಮಾಡಲಾಗಲಿಲ್ಲ?...

ಅಂದಹಾಗೆ ಈ ಪಿಎಂಸಿ ಬ್ಯಾಂಕಿನ ಸುಮಾರು 12 ಜನ ನಿರ್ದೇಶಕರು ಬಿಜೆಪಿಯ ಸದಸ್ಯರು. ಅದರಲ್ಲಿ ಒಬ್ಬರಾದ ರಾಜ್‌ನೀತ್‌ಸಿಂಗ್ ಅವರು ಬರಲಿರುವ ಮಹಾರಾಷ್ಟ್ರದ ಶಾಸನ ಸಭಾ ಚುನಾವಣೆಯಲ್ಲಿ ಮುಲುಂದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದಕ್ಕೆ ಕೆಲವು ತಿಂಗಳುಗಳ ಮುಂಚೆ ಐಎಲ್‌ಆ್ಯಂಡ್‌ಎಫ್‌ಎಸ್ ಎಂಬ ಮತ್ತೊಂದು ಗೃಹ ನಿರ್ಮಾಣ ಮತ್ತು ಹಣಕಾಸು ಸಂಸ್ಥೆ ದಿವಾಳಿಯೆದ್ದಿತು. ಈ ಸಂಸ್ಥೆ ಮಾಡಿದ ಲೂಟಿಯ ಮೊತ್ತ 1,20,000 ಕೋಟಿ. ಹತ್ತು ವರ್ಷದ ಕೆಳಗೆ ಹೆಸರೇ ಕೇಳದ ಈ ಸಂಸ್ಥೆ ಮೋದಿ ಹಯಾಮಿನಲ್ಲಿ ತುಂಬಾ ಪ್ರವರ್ಧಮಾನಕ್ಕೆ ಬಂದಿತು. ಸರಕಾರಿ ಹಣಕಾಸು ಸಂಸ್ಥೆಗಳಾದ ಎಲ್‌ಐಸಿ ಮತ್ತು ಎಸ್‌ಬಿಐಗಳೇ ಅದರಲ್ಲಿ ಅಂದಾಜು 60,000 ಕೋಟಿಗೂ ಹೆಚ್ಚು ಹಣವನ್ನು ಹೂಡಿದ್ದವು.

ಅಷ್ಟು ಮಾತ್ರವಲ್ಲ. ಕಳೆದ ಹತ್ತು ವರ್ಷಗಳಿಂದೀಚೆಗೆ ಉದಾರೀಕರಣ ನೀತಿಯ ಭಾಗವಾಗಿ ಈ ದೇಶದ 2 ಕೋಟಿ ಕಾರ್ಮಿಕರ ಭವಿಷ್ಯ ನಿಧಿ ಮತ್ತು ಪಿಂಚಣಿ ನಿಧಿಯ ಹಣವನ್ನು ಒಂದು ಬೃಹತ್ ನಿಧಿಯನ್ನಾಗಿ ಪರಿವರ್ತಿಸಿ ಅದನ್ನು ಮಾರುಕಟ್ಟೆಯಲ್ಲಿ ಹೂಡಿ ಲಾಭ ಮಾಡುವ ಅಪಾಯಕಾರಿ ನೀತಿಯನ್ನು ಸರಕಾರಗಳು ಅನುಸರಿಸುತ್ತಿವೆ. ಈ ಪಿಂಚಣಿ ಮತ್ತು ಪಿಎಫ್ ನಿಧಿಗಳ ವಾರ್ಷಿಕ ಮೊತ್ತ ಅಂದಾಜು 6 ಲಕ್ಷ ಕೋಟಿ ರೂ.ಗಳಾಗುತ್ತವೆ. ಅದನ್ನು ಎಲ್ಲಿ ಹೂಡಬೇಕೆಂಬುದನ್ನು ಸರಕಾರಿ ಅಧಿಕಾರಿಗಳು, ಮಂತ್ರಿಗಳು ಮತ್ತು ಮಾರುಕಟ್ಟೆ ಪರಿಣಿತರಿರುವ ಸಮಿತಿಯು ತೀರ್ಮಾನ ಮಾಡುತ್ತದೆ. ಅಂದರೆ ಪರೋಕ್ಷವಾಗಿ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಆಡಳಿತಾರೂಢ ಸರಕಾರವೇ ಮಾಡುತ್ತದೆ. ಹೀಗಾಗಿಯೇ ಈ ಜನಸಾಮಾನ್ಯರ ಪಿಂಚಣಿನಿಧಿಯ ಅಂದಾಜು 40,000 ಕೋಟಿ ಹಣವನ್ನೂ ಸರಕಾರ ಈ ಐಎಲ್‌ಆ್ಯಂಡ್‌ಎಫ್‌ಎಸ್ ಸಂಸ್ಥೆಯಲ್ಲಿ ಹೂಡಿತ್ತು. ಈಗ ಅಷ್ಟೂ ಹಣ ಲೂಟಿಯಾಗಿದೆ. ಮೊನ್ನೆ ಇದರ ಬಗ್ಗೆ ಹೇಳಿಕೆ ನೀಡಿರುವ ಹಣಕಾಸು ಇಲಾಖೆಯು ಪೆನ್ಷನ್ ಫಂಡಿನ ತೀರ್ಮಾನ ಆಯಾ ಫಂಡ್ ನಿರ್ವಹಿಸುವ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಾಗ ಇಂತಹ ರಿಸ್ಕುಗಳಲ್ಲೇ ಇರುತ್ತದೆ. ಹೀಗಾಗಿ ಆ ನಷ್ಟವನ್ನು ಸರಕಾರ ಭರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅಂದರೆ ಐಎಲ್‌ಆ್ಯಂಡ್‌ಎಫ್‌ಎಸ್ ಸಂಸ್ಥೆಯಲ್ಲಿ ಹೂಡಲಾಗಿರುವ ಜನರ ಪೆನ್ಷನ್ ಮತ್ತು ಪಿಂಚಣಿ ದುಡ್ಡು ವಾಪಸ್ ಬರುವುದಿಲ್ಲ ಎಂದರ್ಥ...
 
ಅಂದಹಾಗೆ ಈ ಐಎಲ್‌ಆ್ಯಂಡ್‌ಎಫ್‌ಎಸ್ ಸಂಸ್ಥೆಯ ಮಾಲಕ ರವಿ ಪಾರ್ಥಸಾರಥಿಯವರು ಬಿಜೆಪಿಯ ನಿಕಟವರ್ತಿಯಾಗಿದ್ದು, ಮೋದಿಯವರ ನೆಚ್ಚಿನ ಸ್ನೇಹಿತ ಅಂಬಾನಿಯವರ ಆಪ್ತಮಿತ್ರರೂ ಆಗಿದ್ದಾರೆ. ಅವರ ಬೆಂಬಲದಿಂದಾಗಿಯೇ ರವಿ ಪಾರ್ಥಸಾರಥಿಯವರು ಸರಕಾರಕ್ಕೆ ಮತ್ತು ಮಾರುಕಟ್ಟೆಗೆ ಬಹಳ ಬೇಗ ಆಪ್ತವಾದರು ಮತ್ತು ಈ ಎತ್ತರಕ್ಕೆ ಬೆಳೆದರು. ಈ ಹಗರಣವು ಬಯಲಿಗೆ ಬರುತ್ತಿದ್ದಂತೆ ಅವರಿಗೆ ಹೃದಯ ಬೇನೆ ಬಂದಂತಾಗಿ ಅವರು ಈಗ ಲಂಡನ್‌ನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಅವರು ಇಂಗ್ಲೆಂಡ್‌ನ ನಾಗರಿಕತ್ವವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆಲ್ಲವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಹೋಗುತ್ತಿರುವಾಗಲೇ ಇಂಡಿಯಾ ಬುಲ್ಸ್ (India Bulls) ಎಂಬ ಮತ್ತೊಂದು ಪ್ರಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯು ಇದೇ ರೀತಿ ಜನರಿಂದ ಎತ್ತುವಳಿ ಮಾಡಿದ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಶೇರು ಹಣವನ್ನು ಹಾಗೂ ಬ್ಯಾಂಕುಗಳ ಹೂಡಿಕೆಯ ಕೋಟ್ಯಂತರ ಹಣವನ್ನು ಹೇರಾಫೇರಿ ಮಾಡಿರುವ ಬಗ್ಗೆ ದಿಲ್ಲಿ ಹೈಕೋರ್ಟಿನಲ್ಲಿ ದೂರೊಂದು ದಾಖಲಾಗಿದೆ. ಅದರ ಪ್ರಕಾರ ಈ ಇಂಡಿಯಾ ಬುಲ್ಸ್ ಸಂಸ್ಥೆಯು ಮಾರುಕಟ್ಟೆಯಿಂದ ಮತ್ತು ಬ್ಯಾಂಕುಗಳಿಂದ ಪಡೆದುಕೊಂಡ ಹಣವನ್ನು ಹತ್ತಾರು ಬೇನಾಮಿ ಹೆಸರಿನಲ್ಲಿ ಮತ್ತು ತನ್ನದೇ ನೂರಾರು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದಂತೆ ತೋರಿಸಿದೆ. ಮತ್ತದು ವಾಪಸ್ ತನ್ನದೇ ಆದ ಇತರ ಹಲವಾರು ಸಂಸ್ಥೆಗಳಲ್ಲಿ ಮರುಹೂಡಿಕೆಯಾಗುವಂತೆ ನೋಡಿಕೊಂಡಿದೆ. ಇದನ್ನು ರೌಂಡ್ ಟ್ರಿಪಿಂಗ್ ಮೋಸವೆಂದು ಕರೆಯಲಾಗುತ್ತದೆ. ಇದರಿಂದ ತೆರಿಗೆ ವಂಚನೆಯಾಗುವುದು ಮಾತ್ರವಲ್ಲದೆ ಲಕ್ಷಾಂತರ ಕೋಟಿ ಹಣ ಲೂಟಿಯಾದದ್ದು ಎಲ್ಲಿಂದ ಮತ್ತು ಯಾರಿಂದ ಎಂದು ಪತ್ತೆಯಾಗುವುದೇ ಕಷ್ಟವಾಗುತ್ತದೆ. ಅಂದಹಾಗೆ, ಈ ಇಂಡಿಯಾ ಬುಲ್ಸ್ ಸಂಸ್ಥೆಯ ರೌಂಡ್ ಟ್ರಿಪಿಂಗ್ ದ್ರೋಹದಲ್ಲಿ ಪ್ರಧಾನವಾಗಿ ಪಾಲ್ಗೊಂಡಿರುವವರು ಮೋದಿಯವರ ಆಪ್ತರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಗಳು.

ಹೌಡಿ ಇಂಡಿಯಾ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News