ಚಿಂದಿ ಆಯುವ ಹಕ್ಕು

Update: 2019-10-04 18:31 GMT

ಸ್ವಚ್ಛ ಭಾರತ ಅಭಿಯಾನವು ಎರಡು ಮಹತ್ವದ ಬೆಳವಣಿಗೆಗಳ ಬಗ್ಗೆ ನಮ್ಮನ್ನು ಕುರುಡಾಗಿಸಬಾರದು. ಮೊದಲನೆಯದು, ಆಳುವವರ್ಗದ ಉನ್ನತ ಸ್ಥಾಯಿ ನಾಯಕರು ಸಾಂಕೇತಿಕವಾಗಿ ಚಿಂದಿ ಆಯುವವರೊಂದಿಗೆ ಗುರುತಿಸಿಕೊಂಡ ಕ್ರಮಗಳ ಮೂಲಕ ತೋರಿದ ಔದಾರ್ಯದಿಂದಾಗಿ ಚಿಂದಿ ಆಯುವವರಿಗೆ ದಿಢೀರನೆ ಮಹತ್ವ ಬಂದುಬಿಟ್ಟಿದೆ. ಮತ್ತೊಂದು ಸಾಂಕೇತಿಕವಲ್ಲದ, ಆದರೆ ಸಾರಭೂತವಾದ ಬೆಳವಣಿಗೆಯೆಂದರೆ ಚಿಂದಿ ಆಯುವುದು ತಮ್ಮ ಹಕ್ಕೆಂದು ಪ್ರತಿಪಾದಿಸುತ್ತಿರುವುದು. ಆದರೆ ಚಿಂದಿ ಆಯುವುದೂ ಕೂಡಾ ಒಂದು ಹಕ್ಕಾಗಿ ಬದಲಾಗಿರುವುದು ಹಾಗೂ ಸಾಂಕೇತಿಕವಾಗಿ ಅವರೊಂದಿಗೆ ಗುರುತಿಸಿಕೊಂಡ ಕ್ರಿಯೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ರಾಜಕೀಯ ನಾಯಕರಿಗೆ ಚಿಂದಿ ಆಯುವುದು ಅವರ ದೈನಂದಿನ ಸಾಮಾಜಿಕ ಮತ್ತು ಭೌತಿಕ ವಾಸ್ತವದ ಭಾಗವಲ್ಲ. ಆದರೆ ಚಿಂದಿ ಆಯುವವರು ಪ್ರತಿನಿತ್ಯ ಆ ಕೆಲಸದಲ್ಲಿ ಅನಿವಾರ್ಯವಾಗಿ ತೊಡಗಿಕೊಂಡಿರುತ್ತಾರೆ. ಎರಡನೆಯದಾಗಿ ಚಿಂದಿ ಆಯುವವರು ಇಷ್ಟಪಟ್ಟು ಚಿಂದಿ ಆಯುವ ಉದ್ಯೋಗವನ್ನು ಮಾಡುವುದಿಲ್ಲ. ವಾಸ್ತವವಾಗಿ ಕಸ ಎತ್ತುವ ವೃತ್ತಿಯಲ್ಲಿ ಚಿಂದಿ ಆಯುವುದು ಅನಿವಾರ್ಯವಾಗುತ್ತದೆ. ಈ ವೃತ್ತಿಯಲ್ಲಿ ಈ ಬಲವಂತದ ಅನಿವಾರ್ಯತೆ ಇರುವುದರಿಂದ ಚಿಂದಿ ಆಯುವುದು ಹೇಗೆ ಹಕ್ಕಾಗಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಈ ಪ್ರಶ್ನೆಯು ಇಂತಹ ಹಕ್ಕುಗಳ ಸ್ವರೂಪವನ್ನು ಇನ್ನಷ್ಟು ಆಳವಾಗಿ ಪರಿಶೀಲಿಸುವಂತೆ ಮಾಡುತ್ತದೆ.

ಉದಾಹರಣೆಗೆ ಚಿಂದಿ ಆಯುವುದು ಸಕಾರಾತ್ಮಕ ಹಕ್ಕೋ ಅಥವಾ ನಕಾರಾತ್ಮಕ ಹಕ್ಕೋ ಎಂದು ಕೂಡಾ ಕೇಳಬಹುದು. ವೈಯಕ್ತಿಕ ಹಕ್ಕುಗಳು ಮನುಷ್ಯರ ಸಾಮಾಜಿಕ ಸತ್ವವನ್ನು ಎತ್ತರಿಸಿ ಸಬಲೀಕರಿಸುವುದರಿಂದ ಅವನ್ನು ಸಕಾರಾತ್ಮಕ ಹಕ್ಕುಗಳೆಂದು ಪರಿಗಣಿಸಲಾಗುತ್ತದೆ. ಈ ಹಕ್ಕುಗಳನ್ನು ಸಂವಿಧಾನಿಕವಾಗಿ ಪರಿಗಣಿಸಲಾಗಿದ್ದು ಸಾಂಸ್ಥಿಕವಾಗಿ ಪರೀಕ್ಷಿಸಲಾಗುತ್ತದೆ. ಒಂದು ಸಕಾರಾತ್ಮಕ ಸಾಧನವಾಗಿ ಅವು ವ್ಯಕ್ತಿಗಳು ತಮ್ಮ ಉದ್ಯೋಗವನ್ನು ಅಥವಾ ಕೆಲಸಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವಂತೆ ಸಬಲೀಕರಿಸುತ್ತದೆ. ಒಂದು ಕೆಲಸಕ್ಕೆ ಸಂಬಂಧಪಟ್ಟಂತೆ ಹಕ್ಕುಗಳ ಸ್ವರೂಪವು ಮನುಷ್ಯರನ್ನೊಳಗೊಂಡಿರುವ ಭೌತಿಕ ಶ್ರಮವನ್ನು ಆಧರಿಸಿರುತ್ತದೆ. ಮಾಡುವ ಕೆಲಸವು ವ್ಯಕ್ತಿಘನತೆಯನ್ನು ಎತ್ತಿಹಿಡಿಯುತ್ತಾ, ಪರಿಶುದ್ಧ ಮತ್ತು ಆರೋಗ್ಯದಾಯಕ ವಾತಾವರಣದಲ್ಲಿದ್ದರೆ ಅದು ಕೆಲಸ ಮಾಡುವ ವ್ಯಕ್ತಿಗೆ ಸಮಾನ ಮಾನವಿಕ ಸತ್ವವನ್ನು ಒದಗಿಸುತ್ತದೆ. ಅಷ್ಟು ಮಾತ್ರವಲ್ಲ, ಒಂದು ಘನತೆಯುಳ್ಳ ಮತ್ತು ಆರೋಗ್ಯಶೀಲ ಕೆಲಸವು ಸ್ಪರ್ಧಾತ್ಮಕವಾಗಿ ಆಕರ್ಷಕವಾಗಿಯೂ ಇರಬೇಕೆಂದೂ ಸಹ ವಾದಿಸಬಹುದು.

ಅಂತಹ ಗುಣಮಟ್ಟದ ಉದ್ಯೋಗಗಳು ಲಭ್ಯವಿದ್ದಾಗ ಅಗತ್ಯವಿರುವ ಬಹಳಷ್ಟು ಜನರನ್ನು ಅದು ಆಕರ್ಷಿಸುತ್ತದೆ ಮತ್ತು ಅವರು ಆ ಕೆಲಸಕ್ಕಾಗಿ ಸ್ಪರ್ಧಿಸುತ್ತಾರೆ. ಒಂದು ಘನತೆಯುಳ್ಳ ಕೆಲಸವನ್ನು ಸ್ಪರ್ಧೆಯ ಮೂಲಕ ಪಡೆದುಕೊಳ್ಳುವುದು ವ್ಯಕ್ತಿಯ ಸತ್ವವನ್ನೂ ಮತ್ತು ಸಾಮಾಜಿಕ ಮೌಲ್ಯವನ್ನೂ ಹೆಚ್ಚಿಸುತ್ತದೆ. ಹೀಗೆ ಘನತೆಯುಳ್ಳ ಉದ್ಯೋಗಕ್ಕಾಗಿ ನಡೆಯುವ ಸ್ಪರ್ಧೆಯು ಒಂದು ಔಪಚಾರಿಕ ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಉದ್ಯೋಗಗಳ ನಡುವೆ ಒಂದು ಶ್ರೇಣೀಕರಣವನ್ನು ಹುಟ್ಟುಹಾಕುತ್ತದೆ. ಆದ್ದರಿಂದಲೇ ಪ್ರತಿಷ್ಠೆ ಅಥವಾ ಸಾಮಾಜಿಕ ಮೌಲ್ಯವೆಂಬುದೂ ಸಹ ಒಂದು ಕೆಲಸ ಅಥವಾ ಉದ್ಯೋಗದ ಬಗ್ಗೆ ರೂಪಿಸಿಕೊಳ್ಳಲಾಗಿರುವ ಶ್ರೇಣೀಕೃತ ಮೌಲ್ಯಂದಾಜುಗಳನ್ನೇ ಆಧರಿಸಿರುತ್ತದೆ. ಈ ದಿನಗಳಲ್ಲಿ ಸರಕಾರಿ ಕ್ಷೇತ್ರಗಳಲ್ಲಿ ಮತ್ತು ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಪಡೆದುಕೊಳ್ಳುವ ಉದ್ಯೋಗಗಳು ಸಾಪೇಕ್ಷವಾಗಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳುತ್ತವೆ ಎಂದು ಹೇಳಬಹುದು. ಹೀಗಾಗಿ, ಕೆಲಸದ ಹಕ್ಕುಗಳ ಬಗೆಗಿನ ಸಕಾರಾತ್ಮಕ ವ್ಯಾಖ್ಯಾನಗಳು ಈ ಪರಿಸ್ಥಿತಿಗಳನ್ನು ಆಧರಿಸಿರುತ್ತವೆ. ಚಿಂದಿ ಆಯುವವರು ತಮ್ಮ ಹಕ್ಕುಗಳನ್ನು ಈ ಸನ್ನಿವೇಶದಲ್ಲಿ ಪ್ರತಿಪಾದಿಸುತ್ತಿರುವರೇ? ಖಂಡಿತಾ ಇಲ್ಲ. ಅದಕ್ಕೆ ಎರಡು ಕಾರಣಗಳನ್ನು ನೀಡಬಹುದು.

ಮೊದಲನೆಯದಾಗಿ ಚಿಂದಿ ಆಯುವವರು ಮತ್ತು ಸಮಾಜ ಇಬ್ಬರೂ ಸಹ ಈ ವೃತ್ತಿಯನ್ನು ಸಾಮಾಜಿಕವಾಗಿ ಕಳಂಕಿತವಾದ ಮತ್ತು ವೈಯಕ್ತಿಕ ಮಟ್ಟದಲ್ಲಿ ನೈತಿಕವಾಗಿ ದಮನಕಾರಿಯೆಂದು ಪರಿಗಣಿಸುತ್ತಾರೆ. ನಾಗರಿಕ ಸಮಾಜವು ಬಿಸಾಕುವ ಕಸವನ್ನು ಆಯುವ ಈ ಮಂದಿಯನ್ನು ನಾಗರಿಕ ಸಮಾಜವು ಸದಾ ತಿರಸ್ಕಾರದಿಂದ ಅಥವಾ ಅನುಮಾನದಿಂದಲೇ ನೋಡುತ್ತದೆ. ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ದಮನಕಾರಿಯಾಗಿರುತ್ತದೆ. ಈ ಕೆಲಸದ ಸ್ವರೂಪವೇ ಚಿಂದಿ ಆಯುವವರು ಕಸದ ಗುಂಡಿಗೆ ಇಳಿಯುವಾಗ ತಾವು ಸಾಮಾನ್ಯ ಮನುಷ್ಯರಿಗಿಂತ ಕೀಳೆಂಬ ಭಾವನೆಯನ್ನು ಹುಟ್ಟಿಸುತ್ತದೆ. ಈ ಬಗೆಯ ಗಲೀಜನ್ನು ಮತ್ತು ಕಸವನ್ನು ಆಯುವ ವೃತ್ತಿಯು ಆ ಕೆಲಸವನ್ನು ಮಾಡುವವರಲ್ಲಿ ಮಾನವಿಕ ಸತ್ವವನ್ನು ಹೆಚ್ಚಿಸುವುದಿಲ್ಲ. ಅಥವಾ ಚಿಂದಿ ಆಯುವ ವೃತ್ತಿಯು ಸಾಮಾಜಿಕ ಪ್ರತಿಷ್ಠೆಯನ್ನೂ ತಂದುಕೊಡುವುದಿಲ್ಲ. ಚಿಂದಿ ಆಯುವ ಕೆಲಸದಲ್ಲಿ ಯಾವ ಸಾಮಾಜಿಕ ಮೌಲ್ಯವೂ ಇಲ್ಲ. ಎರಡನೆಯದಾಗಿ ಚಿಂದಿ ಆಯುವ ಹಕ್ಕಿನ ಪ್ರತಿಪಾದನೆಯು ಸಮಾಜದ ಸದಸ್ಯರಲ್ಲಿ ಜೀವನದ ಇತರ ಕ್ಷೇತ್ರಗಳಲ್ಲಿರುವ ತಾರತಮ್ಯವನ್ನು ಗುರುತಿಸಲಾಗದ ಗ್ರಹಿಕಾ ಸ್ಥಂಭನಕ್ಕೆ ಗುರಿ ಮಾಡುತ್ತದೆ. ಚಿಂದಿ ಆಯುವುದನ್ನು ಹಕ್ಕೆಂದು ಪ್ರತಿಪಾದಿಸುವವರು ಜೀವನದ ಇತರ ಕ್ಷೇತ್ರಗಳಲ್ಲೂ ತಾರತಮ್ಯಗಳನ್ನು ಮಾಡುತ್ತಾರೆ ಮತ್ತು ಅಮಾನವೀಯ ವಸತಿ ಹಾಗೂ ದುರ್ಭರ ಜೀವನ ಪರಿಸ್ಥಿತಿಗಳಿಗೆ ಮತ್ತಷ್ಟು ಸಕಾರಣ ತರ್ಕವನ್ನೂ ಒದಗಿಸುತ್ತಾರೆ.

ಚಿಂದಿ ಆಯುವವರು ಸಮಾಜದಿಂದ ಬೇರ್ಪಟ್ಟು ದೂರದ ಕೊಳೆಗೇರಿಗಳಲ್ಲಿ ವಾಸ ಮಾಡುತ್ತಾರೆಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಬೇರ್ಪಟ್ಟು ಬದುಕುವ ಪ್ರಜ್ಞೆಯನ್ನು ಅವರು ವಾಸಿಸುವ ಸ್ಥಳದಿಂದ ಕೆಲಸ ಮಾಡುವ ಸ್ಥಳಗಳಿಗೂ ಕೊಂಡೊಯ್ಯುತ್ತಾರೆ. ಮತ್ತದು ಅವರ ಕೆಲಸದ ಸ್ಥಳಗಳಲ್ಲಿ ನಡೆಯುವ ಹಸಿ ಮತ್ತು ಒಣಕಸ ಬೇರ್ಪಡಿಸುವ ಕೆಲಸದೊಂದಿಗೆ ಸರಿಯಾಗಿ ಬೆರೆಯುತ್ತದೆ.

ಚಿಂದಿ ಆಯುವ ಹಕ್ಕಿನ ಪ್ರತಿಪಾದನೆಯು ಅವರು ಜೀವನದಲ್ಲಿ ಅನುಭವಿಸುವ ವಿಶಾಲ ಸ್ವರೂಪದ ಬೇರ್ಪಡುವಿಕೆಯನ್ನು ಮತ್ತು ಅದರಿಂದ ಚಿಂದಿ ಆಯುವವರು ಎದುರಿಸುವ ಸಾಮಾಜಿಕ ಕಳಂಕವನ್ನೇನೂ ನಿವಾರಿಸುವುದಿಲ್ಲ. ಮೂರನೆಯದಾಗಿ ಚಿಂದಿ ಆಯುವ ಹಕ್ಕಿನ ಪ್ರತಿಪಾದನೆಯು ಅದಕ್ಕೆ ಪರ್ಯಾಯವಾಗಿ ಹೆಚ್ಚು ಘನತೆಯುಳ್ಳ ಕೆಲಸದ ಆಯ್ಕೆಯನ್ನು ಮರೆಸಿಬಿಡುತ್ತದೆ. ಆದರೆ, ಇಂದಿನ ದಿನಗಳಲ್ಲಿ ಮತ್ತಷ್ಟು ಘನತೆಯುಳ್ಳ ಉದ್ಯೋಗಗಳು ದೊರಕದಿರುವುದರಿಂದ ಚಿಂದಿ ಆಯುವವರು ಕಸದ ಗುಂಡಿಗಳಲ್ಲೇ ಕಾಲ ಕಳೆಯಬೇಕಾಗಿರುವುದೂ ಸಹ ಅಷ್ಟೇ ಮುಖ್ಯವಾದ ಮತ್ತೊಂದು ಕಟುವಾಸ್ತವವಾಗಿದೆ. ಹಾಗೆ ನೋಡಿದರೆ, ಈ ಚಿಂದಿ ಆಯುವ ಕೆಲಸವನ್ನೂ ಸಹ ದೊಡ್ಡ ಕಂಪೆನಿಗಳು ಕಿತ್ತುಕೊಳ್ಳುವ ಅಪಾಯವಿರುವುದರಿಂದಲೇ ಚಿಂದಿ ಆಯುವ ಹಕ್ಕಿನ ಪ್ರತಿಪಾದನೆಯು ಹುಟ್ಟಿಕೊಂಡಿರುವುದಕ್ಕೆ ಪ್ರಧಾನ ಕಾರಣವಾಗಿದೆ. ಚಿಂದಿ ಆಯುವ ಹಕ್ಕಿನ ಪ್ರತಿಪಾದನೆಗೆ ಕಾರಣವೇನೇ ಇರಲಿ, ಅದು ಮತ್ತಷ್ಟು ಘನತೆಯುಳ್ಳ, ನೈರ್ಮಲ್ಯದಿಂದ ಕೂಡಿದ ಮತ್ತು ಸ್ಪರ್ಧಾತ್ಮಕವಾದ ಕೆಲಸಗಳನ್ನು ಪಡೆದುಕೊಳ್ಳಲು ಉತ್ತೇಜಿಸುವಂತಹ ಸಕಾರಾತ್ಮಕ ಹಕ್ಕಿನ ಪಾತ್ರವನ್ನು ವಹಿಸಬೇಕಾಗುತ್ತದೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News