ಗ್ರಾಹಕರ ವಿಶ್ವಾಸ 6 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ : ಆರ್ ಬಿಐ

Update: 2019-10-05 03:53 GMT

ಹೊಸದಿಲ್ಲಿ,ಅ.4: ಬಳಕೆದಾರರ ವಿಶ್ವಾಸ 2019,ಸೆಪ್ಟಂಬರ್‌ನಲ್ಲಿ ಆರು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಶುಕ್ರವಾರ ಬಿಡುಗಡೆಗೊಂಡ ಆರ್‌ಬಿಐನ ಹಣಕಾಸು ನೀತಿಯು ಬಹಿರಂಗಗೊಳಿಸಿದೆ.

2019,ಸೆಪ್ಟೆಂಬರ್ ಸುತ್ತಿನ ಸಮೀಕ್ಷೆಯಲ್ಲಿ ಪ್ರಚಲಿತ ಸ್ಥಿತಿ ಸೂಚ್ಯಂಕ(ಸಿಸಿಐ)ವು 89.4ಕ್ಕೆ ಇಳಿದಿದ್ದು,ಇದು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಅತ್ಯಂತ ಕನಿಷ್ಠವಾಗಿದೆ. ಯುಪಿಎ-2 ಆಡಳಿತದಲ್ಲಿ 2013,ಸೆಪ್ಟೆಂಬರ್‌ನಲ್ಲಿ ಸಿಸಿಐ 88ಕ್ಕೆ ಇಳಿದಿತ್ತು.

ಆರ್‌ಬಿಐ ದೇಶದ ಪ್ರಮುಖ ನಗರಗಳಲ್ಲಿ 5,000ಕ್ಕೂ ಅಧಿಕ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಳಕೆದಾರ ವಿಶ್ವಾಸ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯು ಆರ್ಥಿಕ ಸ್ಥಿತಿ,ಉದ್ಯೋಗ,ಬೆಲೆ ಮಟ್ಟ,ಆದಾಯ ಮತ್ತು ವೆಚ್ಚ ಈ ಐದು ಆರ್ಥಿಕ ವ್ಯತ್ಯಯ ಸಾಧ್ಯತೆಗಳ ಬಗ್ಗೆ ಬಳಕೆದಾರ ಗ್ರಹಿಕೆ (ಹಾಲಿ ಮತ್ತು ಭವಿಷ್ಯದ)ಗಳನ್ನು ತೂಗಿ ನೋಡುತ್ತದೆ.

ಬಳಕೆದಾರ ವಿಶ್ವಾಸ ಸೂಚ್ಯಂಕವು 100ಕ್ಕಿಂತ ಹೆಚ್ಚಿದ್ದರೆ ಅದು ಬಳಕೆದಾರರ ಧನಾತ್ಮಕ ಅಭಿಪ್ರಾಯವನ್ನು ಸೂಚಿಸುತ್ತದೆ.

 2014ರಲ್ಲಿ ಮೋದಿ ಸರಕಾರವು ಮೊದಲ ಬಾರಿಗೆ ಅಧಿಕಾರಕ್ಕೇರುವ ಮುನ್ನ ಬಳಕೆದಾರರ ವಿಶ್ವಾಸವು ನಿರಾಶಾದಾಯಕ ಸ್ಥಿತಿಯಲ್ಲಿತ್ತು. ನೂತನ ಸರಕಾರ ಆಯ್ಕೆಯಾದಾಗ ಅದು ಪುನಃ ಆಶಾವಾದಕ್ಕೆ ಮರಳಿತ್ತು. 2014,ಸೆಪ್ಟಂಬರ್‌ನಲ್ಲಿ ಸೂಚ್ಯಂಕ 103.1ರಷ್ಟಿತ್ತು. 2016,ಡಿಸೆಂಬರ್‌ವರೆಗೂ ಬಳಕೆದಾರರು ಆಶಾವಾದಿಗಳಾಗಿಯೇ ಇದ್ದರು. ಆದರೆ 2016,ನವಂಬರ್‌ನಲ್ಲಿ ನೋಟು ರದ್ದತಿಯ ಬಳಿಕ ಅದು ನಿರಾಶಾವಾದದತ್ತ ಹೊರಳತೊಡಗಿತ್ತು. ಆಗಿನಿಂದಲೂ ಅದು ಎರಡೂವರೆ ವರ್ಷಗಳ ಕಾಲ ನಿರಾಶಾದಾಯಕ ವಲಯ( 100ಕ್ಕಿಂತ ಕಡಿಮೆ)ದಲ್ಲಿಯೇ ಮುಂದುವರಿದಿತ್ತು. 2019ರ ಲೋಕಸಭಾ ಚುನಾವಣೆಗಳ ಮೊದಲು ಅದು ಮತ್ತೆ ಆಶಾವಾದಕ್ಕೆ ಮರಳಿತ್ತು. 2019,ಮಾರ್ಚ್‌ನಲ್ಲಿ 104.6ನ್ನು ತಲುಪಿದ್ದ ಅದು 2016,ಡಿಸೆಂಬರ್ ಬಳಿಕ ಮೊದಲ ಬಾರಿಗೆ 100ರ ಗಡಿಯನ್ನು ದಾಟಿತ್ತು. ಚುನಾವಣೆಯ ಬಳಿಕ ಅದು ಕುಸಿಯುತ್ತಲೇ ಸಾಗಿದ್ದು,ಈಗ ಆರು ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News