ಬಿಜೆಪಿಯ ಒಳ ರಾಜಕೀಯಕ್ಕೆ ನಾಡಿನ ಹಿತಾಸಕ್ತಿ ಬಲಿ

Update: 2019-10-05 06:36 GMT

ಕರ್ನಾಟಕದ ಪಾಲಿಗೆ ಒಂದು ಕಾಲವಿತ್ತು. ಕೇಂದ್ರದಲ್ಲಿ ಒಂದು ಪಕ್ಷದ ಸರಕಾರವಿದ್ದರೆ, ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರಕಾರ. ಕೇಂದ್ರದಲ್ಲಿರುವ ಸರಕಾರ ಈ ಕಾರಣಕ್ಕಾಗಿ ರಾಜ್ಯದ ಜೊತೆಗೆ ಸಹಕರಿಸುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷಗಳು ಆಗಾಗ ಹೇಳಿಕೆ ನೀಡುತ್ತಿರುತ್ತವೆ. ಮತ್ತು ರಾಜ್ಯವನ್ನು ಆಳುವ ಸರಕಾರ ಎಲ್ಲ ವೈಫಲ್ಯಗಳಿಗೂ ಕೇಂದ್ರವನ್ನು ಹೊಣೆ ಮಾಡಿ ಬಚಾವಾಗುತ್ತಿರುತ್ತವೆ. ಆದರೆ ಅದೃಷ್ಟಕ್ಕೆ ಇಂದು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿದೆ. ಇದರಿಂದಾಗಿ ಸಂಸದರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಅನುದಾನಗಳನ್ನು ಬಿಡುಗಡೆ ಮಾಡುವ ಶಕ್ತಿ ಬಂದಿದೆ ಎಂದು ಜನರು ಭಾವಿಸಿದ್ದರು. ತಮ್ಮದೇ ಸರಕಾರ ಆದುದರಿಂದ, ರಾಜ್ಯದ ಬಗ್ಗೆ ಕೇಂದ್ರದಿಂದ ಜನರು ಉದಾರತೆಯನ್ನು ನಿರೀಕ್ಷಿಸಿದ್ದರು. ಆದರೆ ಜನರ ನಿರೀಕ್ಷೆ ಹುಸಿಯಾಗಿದೆ. ಮಾತ್ರವಲ್ಲ, ಕೇಂದ್ರ ಸರಕಾರವು ರಾಜ್ಯದ ಬಿಜೆಪಿ ನಾಯಕರ ಲೆಕ್ಕಾಚಾರಗಳನ್ನೇ ಬುಡಮೇಲಾಗಿಸಿದೆ. ಕೇಂದ್ರ ಸರಕಾರ, ಪ್ರವಾಹದಿಂದ ತತ್ತರಿಸಿದ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರು, ಸಂಸದರು ಮನವಿಯ ಮೇಲೆ ಮನವಿ ಮಾಡಿದರೂ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ತಮ್ಮದೇ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದರಿಂದ ಅದನ್ನು ಟೀಕಿಸಲೂ ಆಗದೆ, ಸಮರ್ಥಿಸಲೂ ಆಗದೆ ರಾಜ್ಯ ಸರಕಾರ ಒದ್ದಾಡುತ್ತಿದೆ. ಇದೀಗ ಸ್ವತಃ ಬಿಜೆಪಿಯೊಳಗಿನಿಂದಲೇ ಅಸಮಾಧಾನದ ಕಿಡಿಗಳು ಹೊರಬೀಳುತ್ತಿವೆ. ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಬಿಜೆಪಿಯೊಳಗೆ ಸಂಸದರ ಕೊರತೆಯೇನೂ ಇಲ್ಲ. ಕರ್ನಾಟಕ ಅತ್ಯಧಿಕ ಬಿಜೆಪಿ ಸಂಸದರನ್ನು ಕೇಂದ್ರ ಸರಕಾರಕ್ಕೆ ನೀಡಿದೆ.

ಇದೇ ಸಂದರ್ಭದಲ್ಲಿ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರೂ ರಾಜ್ಯದಲ್ಲಿದ್ದಾರೆ. ಕೇಂದ್ರ ಸರಕಾರದಲ್ಲಿ ಸಚಿವರಾಗಿಯೂ ಹಲವರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಒಂದಾಗಿ ನಿಂತು ರಾಜ್ಯಕ್ಕೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಡ ಹೇರಿದ್ದರೆ, ಅದಕ್ಕೆ ಕೇಂದ್ರ ತಲೆಬಾಗಲೇ ಬೇಕಾಗಿತ್ತು. ವಿಪರ್ಯಾಸವೆಂದರೆ ಈ ಸಂಸದರು ಕೇಂದ್ರಕ್ಕೆ ಒತ್ತಡವನ್ನು ಹೇರುವುದಿರಲಿ, ಕೇಂದ್ರದಿಂದ ಪರಿಹಾರವನ್ನು ಕೇಳುವುದೇ ತಪ್ಪು ಎಂಬ ಅರ್ಥದಲ್ಲಿ ಬಹಿರಂಗವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ‘‘ನೆರೆ ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಬಾರದು. ರಾಜ್ಯದಲ್ಲಿ ಅದಕ್ಕೆ ಬೇಕಾದ ಹಣ ಇದೆ’’ ಎಂದು ಸಂಸದರೊಬ್ಬರು ಬಹಿರಂಗವಾಗಿ ಮೂರ್ಖ ಹೇಳಿಕೆಯನ್ನು ನೀಡಿದರು. ‘ನೆರೆ ಪರಿಹಾರ ನಿಧಿ’ಯ ಕುರಿತಂತೆ ಸಣ್ಣ ಜ್ಞಾನವೂ ಇವರಿಗೆ ಇದ್ದಂತಿಲ್ಲ. ರಾಜ್ಯ ಕೇಂದ್ರಕ್ಕೆ ಕೊಟ್ಟಿದ್ದನ್ನು ಅದು ಮರಳಿಸುತ್ತದೆಯೇ ಹೊರತು, ರಾಜ್ಯಕ್ಕೆ ಕೇಂದ್ರ ಸರಕಾರ ಭಿಕ್ಷೆ ನೀಡುತ್ತಿಲ್ಲ ಎನ್ನುವುದನ್ನು ಅರಿಯದ ಸಂಸದರು ಇನ್ನೇನು ತಾನೆ ಹೇಳಿಕೆ ನೀಡಿಯಾರು? ಒಂದೆಡೆ ಸಂಸದರೇ, ‘‘ಕೇಂದ್ರದಿಂದ ಪರಿಹಾರ ಬೇಡ’’ ಎಂದು ಹೇಳುತ್ತಿರುವಾಗ ಕೇಂದ್ರ ಸರಕಾರ ಹಣವನ್ನು ಯಾಕಾದರೂ ಬಿಡುಗಡೆ ಮಾಡೀತು? ಅಷ್ಟೇ ಅಲ್ಲ, ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರಾದ ಚಕ್ರವರ್ತಿ ಸೂಲಿಬೆಲೆ ‘ಪರಿಹಾರಕ್ಕಾಗಿ ಧ್ವನಿಯೆತ್ತಿದಾಗ’, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದ ಗೌಡ ಅವರು, ಆತನನ್ನು ‘‘ದೇಶದ್ರೋಹಿ’’ ಎಂಬರ್ಥದಲ್ಲಿ ಟೀಕಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಧ್ವನಿಯೆತ್ತಿ ಎಂದು ಮತದಾರರು ಸಂಸದರನ್ನು ಆರಿಸಿಕಳುಹಿಸಿದ್ದರೆ, ಅವರು ಕೇಂದ್ರದ ನಾಯಕರನ್ನು ಓಲೈಸುವುದಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿರುವುದು ಮಾತ್ರವಲ್ಲ, ರಾಜ್ಯದ ಜನರ ಪರವಾಗಿ ಧ್ವನಿಯೆತ್ತಿದವರನ್ನು ದೇಶದ್ರೋಹಿಗಳು ಎಂದು ಕರೆಯುವ ಪರಂಪರೆಯೊಂದಕ್ಕೆ ನಾಂದಿ ಹಾಡಿದ್ದಾರೆ.

ವಿಪರ್ಯಾಸವೆಂದರೆ, ಬಿಜೆಪಿಯೊಳಗೆ ಕೆಲವರು ನೆರೆ ಪರಿಹಾರ ಬಿಡುಗಡೆಯಾಗದೇ ಇರುವುದಕ್ಕಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಾದರೂ ಅವರೆಲ್ಲ ಅದಕ್ಕಾಗಿ ಸಂಸದರನ್ನಷ್ಟೇ ಟೀಕಿಸುತ್ತಿದ್ದಾರೆ. ಅವರಾರೂ ಕೇಂದ್ರ ಸರಕಾರವನ್ನು ಟೀಕಿಸುವ ಗೋಜಿಗೆ ಹೋಗುತ್ತಿಲ್ಲ. ರಾಜ್ಯ ಸರಕಾರ ಈಗಾಗಲೇ ಅತಿವೃಷ್ಟಿಗೆ ಸಂಬಂಧಿಸಿ ನಾಶ, ನಷ್ಟಗಳ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ. ಸಂಸದರೂ ಈ ಕುರಿತಂತೆ ಮನವಿಯನ್ನು ನೀಡಿದ್ದಾರೆ. ಇಷ್ಟಾದರೂ ಕೇಂದ್ರ ಸರಕಾರ ಕರ್ನಾಟಕದ ಕುರಿತಂತೆ ದಿವ್ಯ ನಿರ್ಲಕ್ಷ ವಹಿಸಿದೆ ಎಂದಾದರೆ, ಕೇಂದ್ರದ ವರಿಷ್ಠರು ಈ ರಾಜ್ಯದ ನಾಯಕರನ್ನು ಲಘುವಾಗಿ ಭಾವಿಸಿಕೊಂಡಿರುವುದರ ಸಂಕೇತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಸಂಸದರೆಲ್ಲರೂ ‘ಮೋದಿ’ಯ ಹೆಸರನ್ನು ಹೇಳಿ ಆಯ್ಕೆಯಾದವರು. ಇಂದು ಸಂಸದರನ್ನು ಟೀಕಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯೇ ‘ಮೋದಿ’ಯ ಹೆಸರಿನಲ್ಲಿ ಬಿಜೆಪಿಗೆ ಮತ ನೀಡಲು ಬಹಿರಂಗವಾಗಿ ಕೆಲಸ ಮಾಡಿದ್ದಾರೆ. ಅಂದರೆ ಸಂಸದರಿಗೆ ಸ್ವಂತ ವ್ಯಕ್ತಿತ್ವವೇ ಇಲ್ಲ ಎನ್ನುವುದನ್ನು ಇದು ತಿಳಿಸುತ್ತದೆ. ಹೀಗಿರುವಾಗ ‘ಪರಿಹಾರ’ಕ್ಕಾಗಿ ನಾವು ಸಂಸದರನ್ನು ಟೀಕಿಸದೆ ನೇರವಾಗಿ ಮೋದಿಯನ್ನೇ ಟೀಕಿಸುವ ಅನಿವಾರ್ಯವಿದೆ. ಆದರೆ ರಾಜ್ಯದ ಹಿತಾಸಕ್ತಿಯನ್ನು ಮುಂದಿಟ್ಟು ಕೇಂದ್ರವನ್ನು ಟೀಕಿಸುವ ಒಂದೇ ಒಂದು ವ್ಯಕ್ತಿತ್ವ ಬಿಜೆಪಿಯೊಳಗೆ ಕಾಣುತ್ತಿಲ್ಲ. ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಮಳೆ ಹಾನಿ ಸಂಭವಿಸಿದಾಗ ಕೇಂದ್ರ ಸರಕಾರ ತಕ್ಷಣ ಸ್ಪಂದಿಸಿತ್ತು. ಬಿಹಾರದಲ್ಲಿ ನಾಶ ನಷ್ಟವುಂಟಾದಾಗ, ಸ್ವತಃ ಪ್ರಧಾನಿಯವರೇ ಟ್ವೀಟ್ ಮಾಡಿದ್ದರು. ಯಾವ ರಾಜ್ಯದ ನಾಯಕರು ಸ್ವಂತಿಕೆಯನ್ನು, ಆತ್ಮಗೌರವವನ್ನು ಹೊಂದಿರುತ್ತಾರೋ, ಆ ರಾಜ್ಯದ ಸ್ಥಿತಿಗತಿಗೆ ಕೇಂದ್ರ ತಕ್ಷಣ ಸ್ಪಂದಿಸುವುದು ಸಹಜವೇ ಆಗಿದೆ. ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಿಗೆ ಕೇಂದ್ರ ತಕ್ಷಣ ಸ್ಪಂದಿಸುವುದು ಇದೇ ಕಾರಣಕ್ಕೆ.

ಆದರೆ ರಾಜ್ಯದಲ್ಲಿ ಮೋದಿಯ ‘ಗುಲಾಮ’ರಷ್ಟೇ ಇದ್ದಾರೆ. ಅವರೆಲ್ಲರೂ ಸದಾ ‘ಮೋದಿ ಮೋದಿ’ ಎಂದು ಜಪಿಸುತ್ತಾ ರಾಜ್ಯದ ಆತ್ಮಗೌರವವನ್ನೇ ಮೋದಿಯ ಪಾದ ಕಮಲಗಳಿಗೆ ಅರ್ಪಿಸಿದ್ದಾರೆ. ಇಂತಹ ನಾಯಕರು ಹೋಗಿ ಕೇಂದ್ರದಲ್ಲಿ ಮನವಿ ಮಾಡಿದರೆ, ಆ ಕಡೆಗೆ ಸರಕಾರ ದೃಷ್ಟಿ ಎತ್ತಿ ನೋಡುವುದು ಸಾಧ್ಯವೇ? ಪರಿಹಾರಕ್ಕಾಗಿ ಒತ್ತಾಯಿಸಲು ಯಡಿಯೂರಪ್ಪ ಎರಡೆರಡು ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದಾರಾದರೂ, ಅವರನ್ನು ಭೇಟಿಯಾಗಲು ಪ್ರಧಾನಿ ಮೋದಿ ನಿರಾಕರಿಸಿದರು. ಒಬ್ಬ ಮುಖ್ಯಮಂತ್ರಿಗೆ, ಒಂದು ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಅವಮಾನ ಏನಿದೆ? ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರ ನೀಡದೇ ಇರುವುದರ ಹಿಂದೆ ಬಿಜೆಪಿಯೊಳಗಿನ ಒಳ ರಾಜಕೀಯ ಕೆಲಸ ಮಾಡುತ್ತಿದೆ. ಬಿಜೆಪಿಯ ಚುಕ್ಕಾಣಿಯನ್ನು ಯಡಿಯೂರಪ್ಪರ ಕೈಯಿಂದ ಕಿತ್ತುಕೊಳ್ಳಲು ಆರೆಸ್ಸೆಸ್ ಭಾರೀ ಸಂಚು ನಡೆಸುತ್ತಿದೆ. ಕೇಂದ್ರದಿಂದ ಪರಿಹಾರ ಪಡೆಯಲು ವಿಫಲವಾದರೆ, ರಾಜ್ಯ ಸರಕಾರಕ್ಕೆ ಸಮಸ್ಯೆಯನ್ನು ನಿಭಾಯಿಸಲು ಕಷ್ಟವಾಗುತ್ತದೆ. ಅದೆಲ್ಲದರ ಹೊಣೆಯನ್ನು ಯಡಿಯೂರಪ್ಪರ ತಲೆಗೆ ಕಟ್ಟಿ, ಅವರನ್ನು ವಿಫಲ ಮುಖ್ಯಮಂತ್ರಿಯನ್ನಾಗಿಸುವುದು ಆರೆಸ್ಸೆಸ್‌ನ ಗುರಿಯಾಗಿದೆ. ಸಂತೋಷ್, ಚಕ್ರವರ್ತಿ ಸೂಲಿಬೆಲೆಯಂತಹ ನಾಯಕರು ಒಳಗೊಳಗೆ ಇದರಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಯಡಿಯೂರಪ್ಪರನ್ನು ಹೊಣೆ ಮಾಡಿ, ಯಡಿಯೂರಪ್ಪ ತಂಡವನ್ನು ಹೊರಗಿಟ್ಟು ಭವಿಷ್ಯದಲ್ಲಿ ಕಟ್ಟಾ ಆರೆಸ್ಸೆಸ್ ಹಿನ್ನೆಲೆ ಹೊಂದಿರುವ ಹೊಸ ತಂಡವನ್ನು ಕಟ್ಟುವುದು ಮತ್ತು ಅದರ ನೇತೃತ್ವವನ್ನು ಸಂತೋಷ್ ವಹಿಸಿಕೊಳ್ಳುವುದು ಇದರ ಹಿಂದಿನ ಅಂತಿಮ ಉದ್ದೇಶವಾಗಿದೆ. ತಮ್ಮ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅತಿವೃಷ್ಟಿಯಿಂದ ಸರ್ವನಾಶವಾಗಿರುವ ಜನರ ಬದುಕನ್ನು ಬಲಿಕೊಡುತ್ತಿದ್ದಾರೆ. ಈ ಸಂಚನ್ನು ಗುರುತಿಸಿ ಯಡಿಯೂರಪ್ಪ ಅವರು ಇನ್ನಾದರೂ ನಾಡಿನ ಹಿತಾಸಕ್ತಿಗಾಗಿ ಕೇಂದ್ರದ ವಿರುದ್ಧ ಬಹಿರಂಗವಾಗಿ ಧ್ವನಿಯೆತ್ತಬೇಕಾಗಿದೆ ಮತ್ತು ಆ ಧ್ವನಿಗೆ ನಾಡಿನ ಎಲ್ಲ ರಾಜಕೀಯ ನಾಯಕರೂ ಪಕ್ಷ ಭೇದ ಮರೆತು ಧ್ವನಿ ಸೇರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News