ಜಂಬೂ ಸವಾರಿ ದಿನ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ, ತಾಕತ್ತಿದ್ದರೆ ತಡೆಯಲಿ: ಚೋರನಹಳ್ಳಿ ಶಿವಣ್ಣ ಸವಾಲು

Update: 2019-10-06 06:17 GMT

ಮೈಸೂರು,ಅ.5: ವಿದೇಶಿಗರು ಮತ್ತು ಪ್ರವಾಸಿಗರಿಗೆ ಕರಪತ್ರ ಹಂಚಿ  ಜಂಬೂಸವಾರಿಯ ದಿನ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಇವರಿಗೆ ತಾಕತ್ತಿದ್ದರೆ ತಡೆಯಲಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಸವಾಲು ಹಾಕಿದರು.

ಮಹಿಷ ದಸರಾಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಶನಿವಾರ ಚಾಮುಂಡಿ ಬೆಟ್ಟದಲ್ಲಿ “ಮೂಲನಿವಾಸಿಗಳ ಐಕ್ಯತೆಗಾಗಿ ಪ್ರತಿಭಟನಾ ಸಭೆ”ಯನ್ನು ಹಮ್ಮಿಕೊಂಡಿತ್ತು. ಈ ಪ್ರತಿಭಟನಾ ಸಭೆಗೆ ತೆರಳು ಮಾರ್ಗ ಮಧ್ಯೆ ಪೊಲೀಸರು ದಲಿತ ಮುಖಂಡರನ್ನು ಬಂಧಿಸಿ ಅವರನ್ನು ಸಿಎಆರ್ ಮೈದಾನದಲ್ಟಿಟ್ಟು ನಂತರ ಬಿಡುಗಡೆ ಮಾಡಿದರು. 

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮೂಲನಿವಾಸಿಗಳ ಸಂಸ್ಕೃತಿ ಆಚರಣೆಗೆ ಅಡ್ಡಿ ಪಡಿಸಿದ ಮೇಲೆ ಇವರ ಆಚರಣೆಯಯನ್ನು ಅಡ್ಡಿಪಡಿಸುತ್ತೇವೆ. ಇವರಿಗೆ ತಾಕತ್ತಿದ್ದರೆ ನಮ್ಮನ್ನು ತಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪ್ರತಾಪ್ ಸಿಂಹನ ಒತ್ತಡಕ್ಕೆ ಹೆದರಿ ಜಿಲ್ಲಾಡಳಿತ ಆರೆಸ್ಸೆಸ್ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ. ನಮ್ಮ ಸಂಸ್ಕೃತಿ ಆಚರಣೆಗೆ ಧಕ್ಕೆ ತರುವ ಮೂಲಕ ನಮ್ಮ ಮನಸ್ಥಿತಿಯನ್ನು ಕೆಣಕಿದ್ದಾರೆ. ಹಾಗಾಗಿ ಈ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದ್ದು, ಇಲ್ಲಿ ಜಾತಿಯತೆ ತಾಂಡವವಾಡುತ್ತಿದೆ. ಇಂತಹ ದೇಶಕ್ಕೆ ನೀವು ಬಂದರೆ ನಿಮಗೂ ಗೌರವವಿರುವುದಿಲ್ಲ ಎಂದು ವಿದೇಶಿಗರಿಗೆ ಮತ್ತು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಗಲಾಟೆ ಎಬ್ಬಿಸಿದ್ದು ಇಲ್ಲಿಗೆ ದಯಮಾಡಿ ಬರಬೇಡಿ ಎಂದು ಕರಪತ್ರ ಮಾಡಿಸಿ ಪ್ರವಾಸಿಗರಿಗೆ ಹಂಚಲಾಗುವುದು ಎಂದು ಹೇಳಿದರು.

ದ್ರಾವಿಡರ ದೇಶಕ್ಕೆ ವಲಸೆ ಬಂದ ಆರ್ಯರು ನಮ್ಮ ಆಚಾರ ವಿಚಾರಗಳನ್ನು ಮರೆಮಾಚಿ ವೈದಿಕಶಾಹಿಗಳ ಆಡಳಿತವನ್ನು ಬಲಂತವಾಗಿ ಹೇರಿದ್ದಾರೆ. ನಮ್ಮ ನಾಡಿನ ಆದಿ ದೊರೆ ಮಹಿಷ ಮಹರಾಜನ ಇತಿಹಾಸವನ್ನು ತಿರುಚಿ ಅವನನ್ನು ಒಬ್ಬ ರಾಕ್ಷಸ ಎಂಬಂತೆ ಬಿಂಬಿಸಿದ್ದಾರೆ. ಅದನ್ನು ಸುಳ್ಳು ಎಂದು ತಿಳಿಸಲು ಹೊರಟಿರುವ ನಮ್ಮ ಮೇಲೆ ಸಂಘಪರಿವಾರ ಮತ್ತು ಆರೆಸ್ಸೆಸ್ ಸಂಸದ ಪ್ರತಾಪ್ ಸಿಂಹನಂತ ಗುಲಾಮನ ಕೈಯಲ್ಲಿ ತಡೆಯುವ ಯತ್ನಕ್ಕೆ ಕೈಹಾಕಿದೆ ಎಂದು ಕಿಡಿಕಾರಿದರು.

ದಲಿತರ ಭಾವನೆಗಳಿಗೆ ಸಂಸದ ಪ್ರತಾಪ್ ಸಿಂಹ ಧಕ್ಕೆ ತಂದಿದ್ದಾನೆ. ಆತನ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ಮೂಲನಿವಾಸಿಗಳು ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಆತನನ್ನು ಸುಮ್ಮನೆ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವನಿಗೆ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಹೇಳಿದರು.

ಇಂದು ಐಕ್ಯತಾ ಸಭೆ ನಡೆಸಲು ತೀರ್ಮಾನಿಸಿ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮೂಲನಿವಾಸಿಗಳು ಆಗಮಿಸಿದ್ದರೆ ಅವರನ್ನು ತಡೆಯುವ ಕೆಲಸವನ್ನು ಪೊಲೀಸರ ಮೂಲಕ ಮಾಡಿಸಲಾಗಿದೆ. ನಮಗೆ ಈದೇಶದಲ್ಲಿ ಸ್ವಾತಂತ್ರ್ಯ ಹಕ್ಕು ಇಲ್ಲವೆ ಎಂದು ಪ್ರಶ್ನಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಬಹುಜನರ ಆಶಯದಂತೆ ಕಳೆದ ಏಳು ವರ್ಷಗಳಿಂದ ಮಹಿಷ ದಸರಾ ಆಚರಣೆಯನ್ನು ಮಾಡಿಕೊಂಡು ಬರಲಾಗುತ್ತಿತ್ತು. ಅದಕ್ಕೆ ಅಡ್ಡಿಪಡಿಸುವ ಮೂಲಕ ಬಹುಜನರ ಧಾರ್ಮಿಕ ಹಕ್ಕಿನ ಮೇಲೆ ಮಾನಸಿಕ ಅತ್ಯಾಚಾರ ಮಾಡಲಾಗಿದೆ. ಮೈಸೂರಿನಲ್ಲಿ ಪ್ರಜಾಪ್ರಭುತ್ವ ಉಳಿದಿದಿಯಾ ಅಥವಾ ಒಬ್ಬ ಸಂಸದನಿಗಾಗಿ ಜಿಲ್ಲಾಡಳಿತ ಇದಿಯೋ ಇಲ್ಲವೊ ಗೊತ್ತಾಗುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.

ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾಯಾರಣ್ ಮಾತನಾಡಿ, ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ದಬ್ಬಾಳಿಕೆ ನಡೆದುಕೊಂಡು ಬರುತ್ತಿದೆ. ಕಳೆದ ಏಳು ವರ್ಷದಿಂದ ಶಾಂತಿಯಿಂದ ನಡೆದುಕೊಂಡು ಬರುತ್ತಿದ್ದ ಆಚರಣೆಗೆ ಅಡ್ಡಿಪಡಿಸುವ ಮೂಲಕ ಸಂಸದ ಪ್ರತಾಪ್ ಸಿಂಹ ಕೋಮು ಗಲಭೆಗೆ ಕಾರಣರಾಗುತ್ತಿದ್ದಾರೆ. ಇಂತಹ ಒಬ್ಬ ರಾಜಕೀಯ ಭಯೋತ್ಪಾದಕನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷಗಳು ನಿದ್ದೆ ಮಾಡುತ್ತಿದಿಯೇ ?: ದಲಿತರ ಮೇಲೆ ಇಷ್ಟೊಂದ ಅನ್ಯಾಯ ನಡೆಯುತ್ತಿದ್ದರು ರಾಜ್ಯದಲ್ಲಿರುವ ವಿರೋಧಪಕ್ಷಗಳು ನಿದ್ದೆ ಮಾಡುತ್ತಿದಿಯೇ ಎಂದು ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರ್ ಪ್ರಶ್ನಿಸಿದರು. ದಲಿತರ ಮತಬೇಕು, ಅವರ ಬೆಂಬಲ ಸದಾ ಇರಬೇಕು ಎಂದು ಹೇಳುವ ವಿರೋಧಪಕ್ಷಗಳು ದಲಿತರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯ ನಡೆಯುತಿದ್ದರೂ ಒಂದೇ ಒಂದು ಹೇಳಿಕೆ ನೀಡಿಲ್ಲ. ತಮ್ಮ ವೈಯಕ್ತಿಕ ಮತ್ತು ಸ್ವಾರ್ಥ ರಾಜಕಾರಣವನ್ನು ಮಾಡುತ್ತಿವೆ ಎಂದು ಕಿಡಿಕಾರಿದರು.

ಮಹಿಷ ದಸರಾ ನಮ್ಮ ಹಕ್ಕು, ನಾವು ಆಚರಣೆ ಮಾಡುತ್ತೇವೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿಇದೆ ಎಂದ ಮಾತ್ರಕ್ಕೆ ನಮ್ಮ ಆಚರಣೆ ಬಿಡಲು ಸಾಧ್ಯವೆ, ಇನ್ನು ಹೆಚ್ಚಿನ ರೀತಿಯಲ್ಲಿನಮ್ಮ ಆಚರಣೆಯನ್ನು ಮಾಡುತ್ತೇವೆಎಂದು ತಾ.ಪಂ.ಸದಸ್ಯ ಸುರೇಶ್ ಕುಮಾರ್ ಹೇಳಿದರು.

ರೈತ ಸಂಘದ ರಘು ಮಾತನಾಡಿ ಅಶಾಂತಿಗೆ ಕಾರಣರಾದ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸಿ ಶಾಂತಿ ಕಾಪಾಡಬೇಕು, ಈತ ಓರ್ವ ಮಾನಸಿಕ ಅಸ್ವಸ್ಥನಾಗಿದ್ದು ಈತನಿಗೆ ಸಾರ್ವಜನಿಕರ ಹಣದಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಹೇಳಿದರು.

ಇದೇ ವೇಳೆ ದಸಂಸ ಮಖಂಡರಾದ ಮೂಡಹಳ್ಳಿ ಮಹದೇವ್, ಆಲತ್ತೂರು ಹುಂಡಿ ಶಿವರಾಜು, ಮುರಡಗಳ್ಳಿ ಮಹದೇವ್, ಅರಸಿನಕೆರೆ ಶಿವರಾಜು, ಕ್ಯಾತಮಾರನಹಳ್ಳೀ ಚಂದ್ರು, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News