ಕಾಶ್ಮೀರಕ್ಕೆ ಭೇಟಿ ನೀಡಲು ಭಾರತ ಸರಕಾರದಿಂದ ಅನುಮತಿ ನಿರಾಕರಣೆ: ಅಮೆರಿಕಾ ಸೆನೆಟರ್ ಆರೋಪ

Update: 2019-10-05 09:29 GMT

ಹೊಸದಿಲ್ಲಿ, ಅ.5: ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಸ್ವತಃ ಅವಲೋಕಿಸಲು ತಮಗೆ ಭಾರತ ಸರಕಾರ ಅನುಮತಿ ನಿರಾಕರಿಸಿದೆ ಎಂದು ಅಮೆರಿಕಾದ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಕ್ರಿಸ್ ವ್ಯಾನ್ ಹೊಲ್ಲೆನ್ ಹೇಳಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರ ಭೇಟಿಗೆ ಅನುಮತಿ ನಿರಾಕರಿಸಲ್ಪಟ್ಟ ಅಮೆರಿಕಾದ ಪ್ರಥಮ ಜನಪ್ರತಿನಿಧಿ ಇವರಾಗಿದ್ದಾರೆ.

ಮೇಲಿನ ಮಾಹಿತಿಯನ್ನು ಸ್ವತಃ ವ್ಯಾನ್ ಹೊಲ್ಲೆನ್ ಅವರೇ ರಾಜಧಾನಿಯಲ್ಲಿ ಅಧಿಕಾರಿಗಳನ್ನು ಹಾಗೂ ಗಣ್ಯರನ್ನು ಭೇಟಿಯಾದ ಸಂದರ್ಭ ಹೇಳಿಕೊಂಡಿದ್ದಾರೆ. “ಒಂದು ವಾರದ ಹಿಂದೆ ಸರಕಾರದ ಬಳಿ ಅನುಮತಿ ಕೇಳಲಾಯಿತಾದರೂ ಅಲ್ಲಿಗೆ ಹೋಗಲು ಇದು ಸೂಕ್ತ ಸಮಯವಲ್ಲ ಎಂಬ ಉತ್ತರ ನೀಡಲಾಗಿದೆ'' ಎಂದು ಅವರು ಹೇಳಿದ್ದಾರೆ.

ಮೇರಿಲ್ಯಾಂಡ್ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಾನ್ ಹೊಲ್ಲೆನ್  ಕಾಶ್ಮೀರದಲ್ಲಿನ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೆರಿಕಾ ಕಾಂಗ್ರೆಸ್ಸಿನ 50ರಷ್ಟು ಸದಸ್ಯರ ಪೈಕಿ ಒಬ್ಬರಾಗಿದ್ದಾರೆ.

“ಭಾರತ ಸರಕಾರಕ್ಕೆ ಅಡಗಿಸಿಡಲು ಏನೂ ಇಲ್ಲವೆಂದಾದರೆ  ಜನರಿಗೆ  ಕಾಶ್ಮೀರಕ್ಕೆ ಭೇಟಿ ನೀಡಲು ಅನುಮತಿಸುವುದಕ್ಕೆ ಸರಕಾರಕ್ಕೆ ಯಾವುದೇ ಸಮಸ್ಯೆಯಾಗಬಾರದು,'' ಎಂದು ಅವರು ನ್ಯೂಯಾರ್ಕ್ ಟೈಮ್ಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಈ ಪ್ರಕರಣ ಕುರಿತಂತೆ ಅಧಿಕೃತವಾಗಿ ಏನನ್ನೂ ಹೇಳದೇ ಇದ್ದರೂ ಸುರಕ್ಷತೆ ಹಾಗೂ ಭದ್ರತಾ ಕಾರಣಗಳಿಗಾಗಿ ವಿದೇಶಿ ಗಣ್ಯರಿಗೆ ಅಲ್ಲಿಗೆ ಹೋಗದಂತೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News