ಮಲೆನಾಡಿನಲ್ಲಿ ಧಾರಾಕಾರ ಮಳೆ: ಕೊಚ್ಚಿ ಹೋದ ಸೇತುವೆ, ಮರಬಿದ್ದು ಆಟೊ ಸಂಪೂರ್ಣ ಜಖಂ

Update: 2019-10-05 13:17 GMT

ಚಿಕ್ಕಮಗಳೂರು, ಅ.5: ಕಳೆದ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದಾಗಿ ಭಾರೀ ಸಾವು ನೋವುಗಳಿಗೆ ಕಾರಣವಾಗಿದ್ದ ಭಾರೀ ಮಳೆಯ ಆರ್ಭಟ ನಂತರದ ದಿನಗಳಲ್ಲಿ ಕಡಿಮೆಯಾಗಿದ್ದು, ಕಳೆದೊಂದು ತಿಂಗಳಿನಿಂದ ಆಗಾಗ್ಗೆ ಮಲೆನಾಡಿನ ಅಲ್ಲಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಶನಿವಾರ ನಗರ ಸೇರಿದಂತೆ ಮಲೆನಾಡಿನಾದ್ಯಂತ ದಿಢೀರನೆ ಸುರಿದಿದೆ. 

ಶನಿವಾರ ಸಂಜೆ ವೇಳೆಗೆ ಮಲೆನಾಡು ಭಾಗದ ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿ ಸೇತುವೆಯೊಂದು ಕೊಚ್ಚಿ ಹೋಗಿದ್ದರೆ, ನಿಂತಿದ್ದ ಆಟೊ ರಿಕ್ಷಾದ ಮೇಲೆ ತೆಂಗಿನ ಮರವೊಂದು ಉರುಳಿ ಬಿದ್ದು, ಆಟೊ ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ.

ಕಳೆದ ಆಗಸ್ಟ್ ನಲ್ಲಿ ಭಾರೀ ಮಳೆಯು ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿಮಾಡಿ ಸಾವು ನೋವುಗಳಿಗೆ ಕಾರಣವಾಗಿತ್ತು. ಸುಮಾರು ಒಂದೂವರೆ ತಿಂಗಳ ಬಳಿಕ ಶನಿವಾರ ಸಂಜೆ ವೇಳೆಗೆ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಮಳೆ ಆರ್ಭಟಿಸಿದೆ.

ಧಾರಾಕಾರ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಆಟೊ ರಿಕ್ಷಾವೊಂದರ ಮೇಲೆ ತೆಂಗಿನ ಮರ ಉರುಳಿ ಬಿದ್ದ ಪರಿಣಾಮ ಆಟೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮರ ಬೀಳುವ ಮುನ್ನ ಆಟೊ ಚಾಲಕ ರಿಕ್ಷಾದಿಂದ ಕೆಳಗಿಳಿದಿದ್ದ ಪರಿಣಾಮ ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತೆಂಗಿನ ಮರ ರಸ್ತೆ ಬದಿಯಲಿದ್ದ ವಿದ್ಯುತ್ ಕಂಬದ ಮೇಲೂ ಉರುಳಿದ ಪರಿಣಾಮ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳೂ ತುಂಡಾಗಿ, ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. 

ಇದೇ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯ ಹೊಕ್ಕಳ್ಳಿ ಗ್ರಾಮದಲ್ಲಿ ಹೊಕ್ಕಳ್ಳಿ-ಹೊರನಾಡು-ಕೊಪ್ಪ ಸಂಪರ್ಕಿಸುವ ಸೇತುವೆಯೊಂದು ಹಳ್ಳದ ನೀರಿಗೆ ಸಿಲುಕಿ ಸುಮಾರು ಎರಡು ಕಿ.ಮೀ ದೂರಕ್ಕೆ ಕೊಚ್ಚಿ ಹೋಗಿದೆ. ಭಾರೀ ಮಳೆಯಾದ ಪರಿಣಾಮ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ಸೇತುವೆಯ ಮೋರಿಗಳೂ ಕೊಚ್ಚಿಹೋಗಿದೆ. ಸೇತುವೆ ಕೊಚ್ಚಿ ಹೋಗುವ ಮುನ್ನ ಗ್ರಾಮದ ಬೈಕ್ ಸವಾರನೋರ್ವ ಸೇತುವೆ ಮೇಲೆ ನಿಂತು ಹಳ್ಳದ ನೀರಿನ ರಭಸ ನೋಡುತ್ತಿದ್ದು, ಸೇತುವೆ ಅಲುಗಾಡುತ್ತಿದ್ದಂತೆ ಬೈಕ್ ಸವಾರ ಅಲ್ಲಿಂದ ಕೂದಲೆಳೆಯ ಅಂತರದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ. ಉಳಿದಂತೆ ಶನಿವಾರ ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಜಾವಳಿ, ಬಾಳೂರು, ಕಳಸ, ಕುದುರೆಮುಖ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ. 

ಇನ್ನು ಚಿಕ್ಕಮಗಳೂರು ನಗರದಲ್ಲೂ ಶನಿವಾರ ಧಾರಾಕಾರವಾಗಿ ಮಳೆ ಸುರಿದಿದ್ದು, ಸುಮಾರು 1 ಗಂಟೆಗಳ ಕಾಲ ನಗರದಲ್ಲಿ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಸುಮಾರು ಗಂಟೆಗಳ ಕಾಲ ನಗರದ ಎಂಜಿ ರಸ್ತೆ, ಐಜಿ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಗರ ಅಲ್ಲದೇ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಉಳಿದಂತೆ ಮಲೆನಾಡಿನ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕುಗಳು ಹಾಗೂ ತರೀಕೆರೆ, ಕಡೂರು ತಾಲೂಕುಗಳ ಅಲ್ಲಲ್ಲಿ ಧಾರಾಕಾರವಾಗಿ ಮಳೆಯಾದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News