ಆರೋಗ್ಯ ರಕ್ಷಣೆ ವೆಚ್ಚ ಭರಿಸಲು ಸಾಧ್ಯವಿರದ ವಲಸಿಗರಿಗೆ ಅಮೆರಿಕ ಪ್ರವೇಶವಿಲ್ಲ

Update: 2019-10-05 16:37 GMT

ವಾಶಿಂಗ್ಟನ್, ಅ. 5: ತಮ್ಮ ಆರೋಗ್ಯ ರಕ್ಷಣೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದ ವಲಸಿಗರ ಅಮೆರಿಕ ಪ್ರವೇಶವನ್ನು ಸ್ಥಗಿತಗೊಳಿಸುವ ಘೋಷಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.

ಆದರೆ, ಇದು ಯಾವುದೇ ವ್ಯಕ್ತಿಯ ಆಶ್ರಯ ಕೋರುವ ಅರ್ಹತೆ ಅಥವಾ ನಿರಾಶ್ರಿತ ಸ್ಥಾನಮಾನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಶ್ವೇತಭವನ ಹೊರಡಿಸಿರುವ ಘೋಷಣೆಯು ತಿಳಿಸಿದೆ. ನೂತನ ಕಾನೂನು ನವೆಂಬರ್ 3ರಿಂದ ಜಾರಿಗೆ ಬರಲಿದೆ.

ವಲಸಿಗರು ಅಮೆರಿಕವನ್ನು ಪ್ರವೇಶಿಸಿದ 30 ದಿನಗಳಲ್ಲಿ ಆರೋಗ್ಯ ವಿಮೆಯನ್ನು ಹೊಂದಬೇಕು, ಇಲ್ಲವೇ ತಮ್ಮ ಆರೋಗ್ಯ ರಕ್ಷಣೆಯ ವೆಚ್ಚವನ್ನು ಸ್ವತಃ ಭರಿಸುವ ಸಾಮರ್ಥ್ಯ ಹೊಂದಿರಬೇಕು. ಇವರೆಡೂ ಇಲ್ಲದಿದ್ದರೆ ಅವರ ಅಮೆರಿಕ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ನೂತನ ಕಾನೂನು ಹೇಳುತ್ತದೆ. ಕಾನೂನುಬದ್ಧ ಮತ್ತು ಕಾನೂನುಬಾಹಿರ ವಲಸೆಯನ್ನು ಕಡಿತಗೊಳಿಸುವ ಭರವಸೆಯೊಂದಿಗೆ ಟ್ರಂಪ್ ಅಧಿಕಾರಕ್ಕೆ ಬಂದಿದ್ದಾರೆ.

2020ರ ಹಣಕಾಸು ವರ್ಷದಲ್ಲಿ ಅಮೆರಿಕದಲ್ಲಿ ಕೇವಲ 18,000 ವಲಸಿಗರಿಗೆ ಆಶ್ರಯ ನೀಡಲಾಗುವುದು ಎಂದು ಟ್ರಂಪ್ ಆಡಳಿತ ಕಳೆದ ತಿಂಗಳು ಹೇಳಿದೆ. ಇದು ಆಧುನಿಕ ವಲಸೆ ಕಾರ್ಯಕ್ರಮದ ಇತಿಹಾಸದಲ್ಲಿಯೇ ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ.

ಸಾವಿರಾರು ಭಾರತೀಯ ವಲಸಿಗರ ಕನಸಿಗೆ ಕೊಳ್ಳಿ?

ತಮ್ಮ ಆರೋಗ್ಯ ಸೇವೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದ ವಲಸಿಗರಿಗೆ ಅಮೆರಿಕ ಪ್ರವೇಶವನ್ನು ನಿರಾಕರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೊಸ ಕಾನೂನು ಸಾವಿರಾರು ಭಾರತೀಯ ವಲಸಿಗರ ಮೇಲೆ ಪರಿಣಾಮ ಬೀರಲಿದೆ.

ತಮ್ಮಲ್ಲಿ ಆರೋಗ್ಯ ವಿಮೆ ಇದೆ ಅಥವಾ ತಮ್ಮ ವೈದ್ಯಕೀಯ ವೆಚ್ಚವನ್ನು ಭರಿಸಲು ತಾವು ಸಮರ್ಥರಾಗಿದ್ದೇವೆ ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ, ಅಮೆರಿಕ ಪ್ರವೇಶಿಸುವ ಕನಸು ಹೊತ್ತ ಸಾವಿರಾರು ಭಾರತೀಯರು ವೀಸಾ ನಿರಾಕರಿಸಲ್ಪಡುವ ಅಪಾಯವನ್ನು ಎದುರಿಸುತ್ತಿದ್ದಾರೆ. ವಿದೇಶದಿಂದ ವಲಸೆ ವೀಸಾಗಳಿಗಾಗಿ ಅರ್ಜಿ ಹಾಕುವವರಿಗೆ, ಅದರಲ್ಲೂ ಮುಖ್ಯವಾಗಿ ಹತ್ತಿರದ ಕುಟುಂಬ ಸದಸ್ಯರಿಂದ ಪ್ರಾಯೋಜಿಸಲ್ಪಡುವವರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಎಚ್-1ಬಿ ವೀಸಾ ಪಡೆದು ಈಗಾಗಲೇ ಅಮೆರಿಕದಲ್ಲಿರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರ ಗ್ರೀನ್ ಕಾರ್ಡ್ ಅರ್ಜಿಗಳನ್ನು ಅಮೆರಿಕದ ಉದ್ಯೋಗದಾತ ಕಂಪೆನಿಗಳು ಪ್ರಾಯೋಜಿಸುತ್ತವೆ. ಹೊಸ ಕಾನೂನು ಸುಮಾರು 23,000 ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಜಿ ಅಧಿಕಾರಿಯೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News