ಗುಂಪು ಹತ್ಯೆಯ ಕುರಿತು ಮಾತನಾಡಿದವರ ವಿರುದ್ಧ ಎಫ್ಐಆರ್: ಪಿ.ಎಫ್.ಐ. ಆಕ್ರೋಶ

Update: 2019-10-06 05:49 GMT

ಹೊಸದಿಲ್ಲಿ, ಅ.6: ದೇಶದಲ್ಲಿ ನಡೆಯುತ್ತಿರುವ ಗುಂಪುಹತ್ಯೆಯ ಘಟನೆಗಳ ಹೆಚ್ಚಳದ ಕುರಿತು ಕಳವಳ ಸೂಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದ ಸುಮಾರು 50 ಖ್ಯಾತನಾಮರ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಖ್ಯಾತನಾಮರ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಪ್ರಕಾರ ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ದೇಶದ್ರೋಹ, ಸಾರ್ವಜನಿಕ ಕಿರುಕುಳ, ಉದ್ದೇಶಪೂರ್ವಕವಾಗಿ ಶಾಂತಿಭಂಗಕ್ಕೆ ಪ್ರಚೋದಿಸುವುದರೊಂದಿಗೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಅವಮಾನಿಸುವ ಸೆಕ್ಷನ್ ಗಳು ಒಳಗೊಂಡಿವೆ ಎಂದು ಹೇಳಲಾಗಿದೆ. ಇವೆಲ್ಲವೂ ಹಾಸ್ಯಾಸ್ಪದ ಮಾತ್ರವಲ್ಲ, ಜನರನ್ನು ಬೆದರಿಸುವ ನಿಟ್ಟಿನಲ್ಲಿ ಕಾನೂನಿನ ಸಂಪೂರ್ಣ ದುರ್ಬಳಕೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಮುಕ್ತವಾಗಿ ಮಾತನಾಡುವುದು, ಅಸಮ್ಮತಿಯ ಹಕ್ಕನ್ನು ರಕ್ಷಿಸುವುದು ಮತ್ತು ಅಲ್ಪಸಂಖ್ಯಾತರು-ದಲಿತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರಗಳ ವಿರುದ್ಧ ಧ್ವನಿ ಎತ್ತುವುದು ಕೂಡ ದೇಶದಲ್ಲಿ ಇದೀಗ ಅಪರಾಧವಾಗಿಬಿಟ್ಟಿದೆ ಎಂಬುದು ಅತಿರೇಕದ ವಿಚಾರವಾಗಿದೆ.  ಖ್ಯಾತನಾಮರೊಂದಿಗೆ ಐಕ್ಯಮತವನ್ನು ವ್ಯಕ್ತಪಡಿಸಿರುವ ಪಾಪ್ಯುಲರ್ ಫ್ರಂಟ್ ಅಧ್ಯಕ್ಷ, ಸಂಘಟನೆಯು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿ ನಿಲ್ಲಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News