ಬಾಗಲಕೋಟೆ: ಭಾರೀ ಮಳೆಗೆ ಮನೆ ಕುಸಿತ; ಒಂದೇ ಕುಟುಂಬದ ಮೂವರು ಮೃತ್ಯು

Update: 2019-10-06 12:36 GMT

ಬಾಗಲಕೋಟೆ, ಅ.6: ಭಾರೀ ಮಳೆ ಸುರಿದ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಮತ್ತು ಅವರ ಪುತ್ರ ಸಾವನ್ನಪ್ಪಿರುವ ದುರ್ಘಟನೆ ಇಲ್ಲಿನ ರಸೂರು ಗ್ರಾಮದಲ್ಲಿ ನಡೆದಿದೆ.

ಈರಪ್ಪ ಹಡಪದ(60), ಗೌರವ್ವ ಹಡಪದ (52) ಮತ್ತು ಪುತ್ರ ನಿಂಗಪ್ಪ ಹಡಪದ(35) ಮೃತಪಟ್ಟವರಾಗಿದ್ದು, ಘಟನೆಯಲ್ಲಿ ನಿಂಗಪ್ಪನ ಪತ್ನಿ ಸವಿತಾ ಹಾಗೂ ಪುತ್ರಿ ತನು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿ 2 ಗಂಟೆ ಸುಮಾರಿಗೆ ಈರಪ್ಪ ಹಾಗೂ ಗೌರವ್ವ ಮನೆಯ ಮುಂದಿನ ಕೋಣೆಯಲ್ಲಿ ಮಲಗಿದ್ದು, ಮಳೆಗೆ ಮಣ್ಣಿನ ಮೇಲ್ಛಾವಣಿ ನೆನೆದು ಒಳಗೆ ನೀರು ಸೋರ ತೊಡಗಿದೆ. ಆಗ ಎಚ್ಚರಗೊಂಡ ನಿಂಗಪ್ಪ, ಅಪ್ಪ-ಅಮ್ಮನ ಕೋಣೆಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನು ಹೊರಗೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಪಕ್ಕದ ಮನೆಯ ಮೇಲಿನ ಗೋಡೆ ಕುಸಿದು ಇವರ ಮನೆಯ ಮೇಲೆ ಬಿದ್ದ ಪರಿಣಾಮ ಛಾವಣಿ ಸಮೇತ ಕುಸಿದಿದೆ. ಕೆಳಗೆ ಸಿಲುಕಿದ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರಗೆ ತೆಗೆದರು. ಮೃತ ದೇಹಗಳ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 

15 ಲಕ್ಷ ರೂ. ಪರಿಹಾರ

ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ರೂ.ನಂತೆ 15 ಲಕ್ಷ ರೂ. ಪರಿಹಾರವನ್ನು ಶಾಸಕ ಚರಂತಿಮಠ ಘೋಷಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಅವರು, ಕುಟುಂಬದವರಿಗೆ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರಕ್ಕೆ 15 ಸಾವಿರ ರೂ. ನೆರವು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News