ಕಾಶ್ಮೀರದಲ್ಲಿ ಬಾಲಕರ ವಿರುದ್ಧ ಸಾರ್ವಜನಿಕ ಸುರಕ್ಷೆ ಕಾಯ್ದೆ: ಬಂಧಿತ ಅಪ್ರಾಪ್ತರು ಉ.ಪ್ರದೇಶ ಜೈಲಿಗೆ?

Update: 2019-10-06 08:08 GMT
ಫೈಲ್ ಚಿತ್ರ

ಕಾಶ್ಮೀರ, ಅ.6: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿ ಬಳಿಕ 14ರಿಂದ 16 ವರ್ಷ ವಯೋಮಿತಿಯ ಬಾಲಕರನ್ನು ಸಾರ್ವಜನಿಕ ಸುರಕ್ಷೆ ಕಾಯ್ದೆಯಡಿ ಬಂಧಿಸಿ ಉತ್ತರ ಪ್ರದೇಶದ ಜೈಲುಗಳಿಗೆ ಕಳುಹಿಸಲಾಗುತ್ತದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ ಎಂದು scroll.in ವರದಿ ಮಾಡಿದೆ.

ಕಾಶ್ಮೀರಿ ಕುಲ್ಚಾ ವಿತರಿಸುವ ಮೂಲಕ ಜೀವನ ಸಾಗಿಸುತ್ತಿದ್ದ ಮುಹಮ್ಮದ್ ಅಲ್ತಾಫ್ ಎಂಬ ಬಾಲಕನ ಮನೆಗೆ ಆಗಸ್ಟ್ 8ರಂದು ಮಧ್ಯರಾತ್ರಿ 2 ಗಂಟೆಗೆ ನುಗ್ಗಿದ ಪೊಲೀಸರು ಅಲ್ತಾಫ್ ನನ್ನು ಕರೆದೊಯ್ದಿದ್ದಾರೆ ಎಂದು ಅಲ್ತಾಫ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಮರುದಿನ ಮುಂಜಾನೆ ಶೋಪಿಯಾನ್ ಠಾಣೆಗೆ ಕುಟುಂಬ ಸದಸ್ಯರು ಹೋಗಿ ಆತನ ಬಿಡುಗಡೆಗೆ ಕೋರಿದ್ದಾರೆ. ಪೊಲೀಸ್ ಲಾಕಪ್ ನಲ್ಲಿದ್ದ ಅಲ್ತಾಫ್ ನ ಹಲ್ಲು ಮುರಿದಿತ್ತು ಹಾಗೂ ಬಾವು- ಬಾಸುಂಡೆಗಳು ಎಡ ಭುಜದಲ್ಲಿ ಕಂಡಿದ್ದು, ಆತನಿಗೆ ಕಸ್ಟಡಿಯಲ್ಲಿ ಥಳಿಸಲಾಗಿದೆ ಎಂದು ಮನೆಯವರು ಆರೋಪಿಸಿದ್ದಾರೆ.

ಆದರೆ ಪೊಲೀಸರು ಆತನನ್ನು ಬಿಡುಗಡೆ ಮಾಡಲಿಲ್ಲ. ಬದಲಾಗಿ ಆತನನ್ನು ಭೇಟಿ ಮಾಡಲು ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದ್ದು, ಹೊಸ ಬಟ್ಟೆ ಕೊಡಲು ಅನುಮತಿ ನೀಡಿದ್ದರು. ಆತನನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಿ ಶ್ರೀನಗರ ಕೇಂದ್ರೀಯ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಈ ಕಾಯ್ದೆಯಡಿ ಅಮಾಯಕ ಯುವಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗುತ್ತಿದೆ. ಯಾವುದೇ ವಿಚಾರಣೆ ಇಲ್ಲದೇ ಒಂದರಿಂದ ಎರಡು ವರ್ಷ ಬಂಧನದಲ್ಲಿಟ್ಟುಕೊಳ್ಳಲು ಅವಕಾಶವಿದೆ. ಬಂಧನದ 10 ದಿನಗಳ ವರೆಗೆ ಪೊಲೀಸರು ಬಂಧನಕ್ಕೆ ಕಾರಣವನ್ನೂ ನೀಡಬೇಕಿಲ್ಲ.

ಈ ಕಾಯ್ದೆಯಡಿ ಬಂಧಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೈಕೋರ್ಟ್‍ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News