ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು;

Update: 2019-10-08 11:32 GMT
ಮುರುಳಿ, ಜೀವಿತ್, ಚಿರಾಗ್

ಚಿಕ್ಕಮಗಳೂರು, ಅ.8: ಆಯುಧಪೂಜೆ ಸಂಭ್ರಮದಲ್ಲಿ ಕೆರೆಯೊಂದರಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ವೇಳೆ ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕರನ್ನು ಬಿಳೇಕಲ್ಲಳ್ಳಿ ಗ್ರಾಮದ ಮುರುಳಿ(15), ಜೀವಿತ್(14) ಹಾಗೂ ಚಿರಾಗ್(15) ಎಂದು ಗುರುತಿಸಲಾಗಿದ್ದು, ಮೂವರು ಬಾಲಕರ ಪೈಕಿ ಮುರುಳಿ ಹಾಗೂ ಜೀವಿತ್ ಮೃತದೇಹಗಳು ಸೋಮವಾರ ರಾತ್ರಿ ವೇಳೆ ಸಿಕ್ಕಿದ್ದು, ಚಿರಾಗ್ನ ಮೃತದೇಹ ಪತ್ತೆಯಾಗಿರಲಿಲ್ಲ. ಪೊಲೀಸರು ಹಾಗೂ ಮುಳುಗುತಜ್ಞರು ಸೋಮವಾರ ಚಿರಾಗ್ ಮೃತದೇಹಕ್ಕಾಗಿ ಹುಡುಕಾಡಿದರೂ ಪ್ರಯೋಜವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮೃತದೇಹಕ್ಕಾಗಿ ಪೊಲೀಸ್ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದರು. ಹುಡುಕಾಟದ ವೇಳೆ ಮಂಗಳವಾರ ಮಧ್ಯಾಹ್ನದ ವೇಳೆ ಚಿರಾಗ್ನ ಮೃತದೇಹ ಪತ್ತೆಯಾಗಿದೆ.

ಬಿಳೇಕಲ್ಲಳ್ಳಿ ಗ್ರಾಮದ ಮುರುಳಿ, ಜೀವಿತ್ ಸೋಮವಾರ ಆಯುಧಪೂಜೆ ಸಂಭ್ರಮದಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆಯಲು ಗ್ರಾಮದ ಕಂಚಿಕಟ್ಟೆ ಎಂಬ ಕೆರೆಯ ಬಳಿ ಆಗಮಿಸಿದ್ದರು. ಈ ವೇಳೆ ಸ್ನೇಹಿತ ಚಿರಾಗ್ನನ್ನು ಜತೆಯಲ್ಲಿ ಕರೆತಂದಿದ್ದರೆಂದು ತಿಳಿದು ಬಂದಿದೆ.

ಸೈಕಲ್‍ಗಳನ್ನು ತೊಳೆದ ನಂತರ ಮೂವರು ಬಾಲಕರೂ ಕೆರೆಯ ನೀರಿನಲ್ಲಿ ಈಜಲು ಇಳಿದಿದ್ದಾರೆ. ನೀರಿನ ಆಳ ಅರಿಯದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆರೆಯ ಬದಿಯಲ್ಲಿ ಮೂವರು ಬಾಲಕರ ಸೈಕಲ್‍ಗಳು, ಬಟ್ಟೆಗಳು ಪತ್ತೆಯಾಗಿದ್ದು, ಬಾಲಕರು ಕಾಣದಿರುವುದರಿಂದ ಅನುಮಾನಗೊಂಡ ಗ್ರಾಮಸ್ಥರು ಕೆರೆಯ ದಡಕ್ಕೆ ತೆರಳಿ ನೋಡಿದಾಗ ಬಾಲಕರು ನೀರುಪಾಲಾದ ವಿಷಯ ಬೆಳಕಿಗೆ ಬಂದಿದೆ. 

ಎರಡು ದಿನಗಳಿಂದ ಗ್ರಾಮದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಕೆರೆಯ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿತ್ತು. ಇದರ ಅರಿವಿರದ ಬಾಲಕರು ನೀರಿಗಿಳಿದಿದ್ದರಿಂದ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News