ಮೋದಿ-ಬಿಎಸ್‌ವೈ ಹೊಂದಾಣಿಕೆ ಕೊರತೆಗೆ ರಾಜ್ಯದ ಜನತೆಗೆ ಶಿಕ್ಷೆ ಕೊಡಬೇಡಿ: ಕಾಂಗ್ರೆಸ್

Update: 2019-10-08 11:57 GMT

ಬೆಂಗಳೂರು, ಅ. 8: ‘ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವಿನ ಹೊಂದಾಣಿಕೆ ಕೊರತೆಗೆ ರಾಜ್ಯದ ಜನತೆಗೆ ಶಿಕ್ಷೆ ಕೊಡಬೇಡಿ’ ಎಂದು ಕೆಪಿಸಿಸಿ ಮನವಿ ಮಾಡಿದೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರಕಾರಕ್ಕೆ ಜನತೆಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ನೆರೆ ಪರಿಹಾರ ಕಾರ್ಯವನ್ನು ತೀವ್ರಗೊಳಿಸಿ, ಕೇಂದ್ರದಿಂದ ಪರಿಹಾರ ಹಣ ಬಿಡುಗಡೆಗೆ ಒತ್ತಾಯಿಸಿ, ಸರ್ವಪಕ್ಷಗಳ, ಸಂಸದರ ನಿಯೋಗವನ್ನು ಕೊಂಡೊಯ್ಯಿರಿ’ ಎಂದು ಆಗ್ರಹಿಸಿದೆ.

'ಪರಿಹಾರಕ್ಕಾಗಿ ಆರೆಸ್ಸೆಸ್ ಕಚೇರಿಗೆ ಬರಬೇಕೇ?': ‘ಮಾಧುಸ್ವಾಮಿಯವರೇ, ಪರಿಹಾರ ತೆಗೆದುಕೊಳ್ಳಲು ನೆರೆಸಂತ್ರಸ್ತರು ಬರುತ್ತಿಲ್ಲ ಎಂದಿರಲ್ಲ ನೆರೆ ಸಂತ್ರಸ್ತರು ನಿಮ್ಮ ಮನೆಗೆ ಬರಬೇಕಾ, ಬಿಜೆಪಿ/ಆರೆಸ್ಸೆಸ್ ಕಚೇರಿಗೆ ಬರಬೇಕಾ, ಇಲ್ಲ ವಿಧಾನಸೌಧಕ್ಕೆ ಬರಬೇಕಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ನೆರೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನೀವು ಸಂತ್ರಸ್ತರಿಗೆ ನೆರವು ಕೊಡ್ತೀರಾ? ಅಥವಾ ಅವರ ಸಮಾಧಿಗೆ ಕೊಡ್ತೀರಾ?’ ಎಂದು ಕಾಂಗ್ರೆಸ್ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದೆ.

‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮಾರಾಟಕ್ಕೆ ಪ್ರಧಾನಿ ಮೋದಿ ಸರಕಾರ ಮುಂದಾಗಿದ್ದು ಖಂಡನೀಯ. ಮೋದಿಗೆ ಹೊಸ ಸಂಸ್ಥೆಗಳನ್ನು, ಉದ್ಯಮಗಳನ್ನು ಆರಂಭಿಸುವ ಯೋಗ್ಯತೆಯೂ ಇಲ್ಲ, ಇರುವ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಕಾಳಜಿಯೂ ಇಲ್ಲ. ಖಾಸಗಿ ಹಿತಾಸಕ್ತಿಗಳಿಗೆ ಕೆಲಸ ಮಾಡುವ ಇಂಥವರು ಅಧಿಕಾರದಲ್ಲಿರುವುದು ದೇಶದ ದುರಂತ’ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News