ಮಡಿಕೇರಿ: ಹಣದ ವಿಚಾರದಲ್ಲಿ ಜಗಳ; ಯುವಕನ ಕೊಲೆ

Update: 2019-10-08 12:50 GMT

ಮಡಿಕೇರಿ,ಅ.8: ಹಣಕಾಸಿನ ವಿಚಾರಕ್ಕೆ ಅತ್ತಿಗೆ ಮತ್ತು ಮೈದುನನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಕಂಡ ಘಟನೆ ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ನಡೆದಿದೆ.

ಹಳೆ ಕೂಡಿಗೆ ನಿವಾಸಿ ಶಿವು ಎಂಬವರೇ ಕೊಲೆಯಾದವರು. ಆರೋಪಿಗಳಾದ ಯಶೋಧ ಹಾಗೂ ಹರಿಣಿ ಎಂಬವರುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅವಿವಾಹಿತನಾಗಿರುವ ಶಿವು ಕೂಡ್ಲೂರು ಕೈಗಾರಿಕಾ ಬಡಾವಣೆಯ ಕಾಫಿ ಘಟಕವೊಂದರಲ್ಲಿ ಕಾರ್ಮಿಕನಾಗಿದ್ದು, ತಾಯಿ ತೀರಿಹೋದ ನಂತರ ಆತನ ದೊಡ್ಡಮ್ಮ ಶಿವುನನ್ನು ಸಾಕುತ್ತಿದ್ದರು. ಶಿವುನ ದೊಡ್ಡಮ್ಮ ಲಕ್ಷ್ಮಮ್ಮ, ಅತ್ತಿಗೆ ಯಶೋಧ, ಆಕೆಯ ಮಗಳು ಹರಿಣಿ ಒಂದೇ ಮನೆಯಲ್ಲಿ ವಾಸವಿದ್ದರು.

ಶಿವು ಮತ್ತು ಆತನ ದೊಡ್ಡಮ್ಮ ಸೇರಿ ಹಳೆ ಕೂಡಿಗೆಯಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದಿದ್ದರು. ಇದೀಗ ಭೋಗ್ಯದ ಅವಧಿ ಮುಗಿಯುತ್ತಿದ್ದು, ಭೋಗ್ಯಕ್ಕೆ ಕೊಟ್ಟಿದ್ದ ಹಣವನ್ನು ಮನೆಯ ಮಾಲಕರು ವಾಪಸ್ ನೀಡಿದಾಗ ತನಗೆ  ಒಂದು ಲಕ್ಷ ರೂ. ನೀಡುವಂತೆ ಶಿವು ಮನೆಯ ಸದಸ್ಯರೊಂದಿಗೆ ಹೇಳಿದ್ದನೆನ್ನಲಾಗಿದೆ.

ಲಕ್ಷ್ಮಮ್ಮ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಶಿವು ಮತ್ತು ಯಶೋಧ ನಡುವೆ ಹಣದ ವಿಷಯಕ್ಕೆ ಕಲಹ ಏರ್ಪಟ್ಟಿದೆ. ಶಿವುಗೆ ಹಣ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಯಶೋಧ ಹಾಗೂ ಆಕೆಯ ಪುತ್ರಿ ಹರಿಣಿ ಸೇರಿ ಶಿವುವನ್ನು ಕಬ್ಬಿಣದ ಸಲಾಕೆಯಿಂದ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಶಿವು ಮಂಚದ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News