ವಿಶ್ವವಿಖ್ಯಾತ ಜಂಬೂ ಸವಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

Update: 2019-10-08 14:58 GMT

ಮೈಸೂರು,ಅ.8: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಕ್ಯಾಪ್ಟನ್ ಅರ್ಜುನ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಐತಿಹಾಸಿಕ ಮೆರವಣಿಗೆಗೆ ಮಂಗಳವಾರ ಸಂಜೆ 4.15 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಈ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್, ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ಪ್ರಥಮ ಪ್ರಜೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇದ್ದರು.

ಗಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ ಅರ್ಜುನ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಆಸ್ಪತ್ರೆ, ಬಂಬೂ ಬಜಾರ್, ಪಂಚಮುಖಿ ಗಣಪತಿ ದೇವಸ್ಥಾನದ ರಸ್ತೆ, ಹೈವೆ ಸರ್ಕಲ್ ಮೂಲಕ ಬನ್ನಿ ಮಂಟಪ ತಲುಪಿತು.

ಸ್ಥಬ್ದಚಿತ್ರಗಳ ಮೆರವಣಿಗೆ: ಇದಕ್ಕೂ ಮೊದಲು ರಾಜ್ಯದ 30 ಜಿಲ್ಲೆಗಳ ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯಿತು. ಪ್ರತಿ ಜಿಲ್ಲೆಯ ಆಯಾ ಭಾಗದ ಐತಿಹಾಸಿಕ ಮತ್ತು ವಿಶೇಷತೆಗಳನ್ನು ಸಾರುವ ಸ್ಥಬ್ದಚಿತ್ರಗಳು ಗಮನ ಸೆಳೆದವು. 

ಮೇಳೈಸಿದ ಕಲಾತಂಡಗಳು: ರಾಜ್ಯ ಮತ್ತು ಇತರೆ ದೇಶಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ್ದ ಕಲಾವಿದರು. ತಮ್ಮ ಆಚಾರ ವಿಚಾರ ಸಂಸ್ಕೃತಿಯನ್ನೊಳಗೊಂಡ ಕಲಾಪ್ರದರ್ಶನವನ್ನು ರಸ್ತೆಯುದ್ದಕ್ಕೂ ನೀಡಿ ಜನರ ಮೆಚ್ಚುಗೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News