ಜನಪರ ಆರ್ಥವ್ಯವಸ್ಥೆ ಹಾಳಾಗಿದೆ: ರಮೇಶ್‌ ಕುಮಾರ್

Update: 2019-10-08 15:57 GMT

ಬೆಂಗಳೂರು, ಅ.8: ದೇಶದ ಜನಪರ ಅರ್ಥ ವ್ಯವಸ್ಥೆ ಹಾಳಾಗಿರುವುದಕ್ಕೆ ಹಣದ ಬಗೆಗಿನ ಪಾವಿತ್ರತೆ ಕಳೆದುಕೊಂಡಿರುವುದೇ ಕಾರಣವಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಅಭಿಪ್ರಾಯಿಸಿದ್ದಾರೆ. ಪವಿತ್ರ ಆರ್ಥಿಕತೆಗಾಗಿ ರಂಗಕರ್ಮಿ ಪ್ರಸನ್ನ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಕ್ಷೇತ್ರದಲ್ಲಿ ಪಾವಿತ್ರತೆ ಬೇಕು. ಹಾಗಂತ ಅದು ಮತ್ತೆ ಮಡಿವಂತಿಕೆ ಆಗಬಾರದು. ಜನಪರ ಆರ್ಥಿಕತೆ ಆಗಬೇಕಾಗಿದೆ ಎಂದರು. ಉತ್ಪಾದಕರು ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆ ಆಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದ ಹಾಗೇ ಪವಿತ್ರ ಆರ್ಥಿಕತೆ ಬೆಳೆಯಬೇಕಿದೆ. ಕೈ ಉತ್ಪನ್ನಗಳು ಮುನ್ನಲೆಗೆ ಬರಬೇಕಿದೆ. ಪರಿಸರ ಸ್ನೇಹಿ ಉದ್ಯೋಗಗಳು ಹೆಚ್ಚಾಗಬೇಕು. ಹೀಗಾಗಿ ಪ್ರಸನ್ನ ನಡೆಸುತ್ತಿರುವ ಪವಿತ್ರ ಆರ್ಥಿಕತೆಗಾಗಿ ಚಳವಳಿಯಲ್ಲಿ ನಾನು ಕಾಯಾ ವಾಚಾ ಮನಸಾ ಜೊತೆಗಿದ್ದೇನೆ ಎಂದು ಬೆಂಬಲ ಸೂಚಿಸಿದರು.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾ.ಗೋಪಾಲಗೌಡ ಮಾತನಾಡಿ, ಮಾನವ ಹಕ್ಕುಗಳು ಮತ್ತು ಮನುಷ್ಯರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎರಡೂ ಸರಕಾರಗಳು ಸೋತಿವೆ. ಬಡತನ, ನಿರುದ್ಯೋಗ, ಅನಾರೋಗ್ಯ, ಪರಿಸರ ಹಾನಿ, ಸಂಪೂರ್ಣ ಕೆಳಗಿಳಿದ ದೇಶದ ಜಿಡಿಪಿ, ರೈತರ ಸರಣಿ ಆತ್ಮಹತ್ಯೆಗಳು, ಪ್ರಕೃತಿ ವಿಕೋಪಕ್ಕೊಳಗಾದ ಜಿಲ್ಲೆ ಹಾಗೂ ಜನರಿಗೆ ಇನ್ನೂ ತಲುಪದ ಪರಿಹಾರ ದಾರಿಗಳು ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಸರಕಾರಗಳು ಸರಿಯಾದ ನಿರ್ಣಯ ಕೈಕೊಳ್ಳಬೇಕಿದೆ ಎಂದರು.

ಗಾಂಧೀಜಿ ಮತ್ತು ಕಾರ್ಲ್‌ಮಾರ್ಕ್ಸ್‌ರ ತತ್ವಾದರ್ಶಗಳ ನೆಲೆಯಲ್ಲಿ ಸಾಮಾನ್ಯ ಪ್ರಜೆಗಳ ಕೇಂದ್ರಿತವಾದ ಪಾಲಿಸಿಗಳನ್ನು ಮಾಡಬೇಕಿದೆ. ಜವಾಬ್ದಾರಿಯುತ ಸರಕಾರಗಳು ರಂಗಕರ್ಮಿ ಪ್ರಸನ್ನ ನಡೆಸುತ್ತಿರುವ ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹಕ್ಕೆ ಸ್ಪಂದನ ನೀಡಬೇಕಿದೆ ಎಂದು ಅವರು ಹೇಳಿದರು.

ಇವತ್ತಿನ ದೇಶದಲ್ಲಿ ವ್ಯಾಪಿಸುತ್ತಿರುವ ರಾಕ್ಷಸ ಆರ್ಥಿಕತೆ ಸರಕಾರದ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದೆ. ಜನರೇ ನಮಗೆ ಫ್ಲೈ ಓವರ್ ಬೇಕು. ದೊಡ್ಡ ದೊಡ್ಡ ಕಂಪೆನಿಗಳು ಬೇಕು ಎಂದು ಒತ್ತಾಯಿಸುವ ಹಂತಕ್ಕೆ ಮುಟ್ಟಿದ್ದಾರೆ. ಹೀಗಾಗಿ ಮೊದಲು ನಾವು ಜನತೆಯ ಚಿಂತನೆಯನ್ನು ಪವಿತ್ರ ಆರ್ಥಿಕತೆಯಡೆಗೆ ಬರುವಂತೆ ಜಾಗೃತಿ ಮೂಡಿಸಬೇಕಿದೆ. ಇದಕ್ಕೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಪಾತ್ರ ದೊಡ್ಡದಿದೆ.
-ಪ್ರಸನ್ನ, ಹಿರಿಯ ರಂಗಕರ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News