ರಾಜ್ಯದ ಹಲವೆಡೆ ಬರದ ಛಾಯೆ!

Update: 2019-10-08 17:41 GMT

►55 ಕ್ಕೂ ಅಧಿಕ ತಾಲೂಕುಗಳು ಬರಪೀಡಿತವೆಂದು ಘೋಷಣೆ ಸಾಧ್ಯತೆ
ಬೆಂಗಳೂರು, ಅ.8: ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ರೀತಿಯಲ್ಲಿ ನೆರೆಯಿಂದಾಗಿ ಉತ್ತರ ಕರ್ನಾಟಕದ ಜನರು ಭಾಗಶಃ ತತ್ತರಿಸಿ ಹೋಗಿದ್ದಾರೆ. ಮತ್ತೊಂದು ಕಡೆ ಹಲವಾರು ಜಿಲ್ಲೆಗಳಲ್ಲಿ ಬರದ ಛಾಯೆ ಮನೆ ಮಾಡಿದೆ.

ರಾಜ್ಯದ 22 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಸುಮಾರು 100ಕ್ಕೂ ಅಧಿಕ ತಾಲೂಕುಗಳು ನೆರೆಯಿಂದ ತತ್ತರಿಸಿವೆ. ರಾಜ್ಯ ಸರಕಾರ ಪ್ರವಾಹದಿಂದಾಗಿ 38 ಸಾವಿರ ಕೋಟಿ ರೂ. ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಇದರ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿಕೊಂಡಿದೆ.

ಇದೀಗ ಮುಂಗಾರು ಹಂಗಾಮು ಮುಗಿದಿದ್ದು, ಮಳೆಯ ಕೊರತೆಯನ್ನು ಆಧರಿಸಿ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಬೇಕಿದೆ. ಆದರೆ, ರಾಜ್ಯ ಸರಕಾರಕ್ಕೆ ಈಗ ಬರ ಪೀಡಿತ ತಾಲೂಕುಗಳನ್ನು ಆಯ್ಕೆ ಮಾಡುವುದೇ ಸವಾಲಿನ ವಿಷಯವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಬರದಿಂದ ತತ್ತರಿಸುತ್ತಿರುವ ತಾಲೂಕುಗಳ ಸ್ಥಿತಿಗತಿ ಹಾಗೂ ಪರಿಸ್ಥಿತಿಯ ಅವಲೋಕನ ಸಂಬಂಧ ಅ.9ರಂದು ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇಲ್ಲಿಯೇ ಎಲ್ಲೆಲ್ಲಿ ಎಷ್ಟು ನಷ್ಟವಾಗಿದೆ ಎಂಬುದರ ಆಧಾರದ ಮೇಲೆ ಬರ ತಾಲೂಕುಗಳ ಪಟ್ಟಿ ತಯಾರಿಸಲಾಗುತ್ತದೆ ಎನ್ನಲಾಗುತ್ತಿದೆ.

ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿ, ಜಾನುವಾರುಗಳಿಗೆ ಮೇವಿನ ಕೊರತೆ, ಗೋಶಾಲೆಗಳ ಸ್ಥಾಪನೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕೇಂದ್ರ ಸರಕಾರಕ್ಕೆ ಬರದಿಂದ ಆಗಿರುವ ನಷ್ಟದ ಪಟ್ಟಿ ಮಾಡಿ ಅಕ್ಟೋಬರ್ ಅಂತ್ಯದೊಳಗೆ ಪರಿಹಾರ ನೀಡುವಂತೆ ಮನವಿ ಮಾಡಲು ಸರಕಾರ ಮುಂದಾಗಿದೆ.

ವಾಡಿಕೆಗಿಂತ ಅಧಿಕ ಮಳೆ: ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜೂನ್ 1 ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಸರಾಸರಿ 1032.1 ಸೆ.ಮೀ.ಮಳೆಯಾಗಿದೆ. ಇದೇ ವೇಳೆ ಹಿಂದಿನ ವರ್ಷ 840.7 ಸೆ.ಮೀ.ಮಳೆಯಾಗಿತ್ತು. ಇದರ ನಡುವೆಯೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಜರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಬರ ತಾಲ್ಲೂಕುಗಳ ಆಯ್ಕೆ ಗೊಂದಲ: ಈಗಾಗಲೇ ರಾಜ್ಯ ಸರಕಾರವು ಉತ್ತರ ಕರ್ನಾಟಕ ಹಾಗೂ ಕರಾವಳಿ ಸೇರಿ 103 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಹಾರಾಷ್ಟ್ರದಿಂದ ಅಧಿಕ ನೀರು ಹರಿು ಬಂದ ಪರಿಣಾಮ ನೆರೆಯುಂಟಾಗಿದೆ.ಇದೀಗ ನೆರೆ ಪೀಡಿತ ಪ್ರದೇಶದ ತಾಲೂಕು ಕೂಡ ಬರದಿಂದ ತತ್ತರಿಸಿದೆ. ಹೀಗಾಗಿ, ಈ ಪಟ್ಟಿಯಲ್ಲಿ ಅಂತಹ ತಾಲೂಕುಗಳನ್ನು ಸೇರ್ಪಡೆಗೆ ತಾಂತ್ರಿಕ ಕಾರಣ ಅಡ್ಡವಾಗಿದೆ.

ಎಲ್ಲೆಲ್ಲಿ ಬರ: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಪ್ರಕಾರ ಮಳೆ ಕಡಿಮೆಯಾಗಿರುವ ಉತ್ತರ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ ಜಿಲ್ಲೆಗಳ ಕೆಲವು ತಾಲೂಕುಗಳಿವೆ. ಇನ್ನುಳಿದಂತೆ ಸಾಮಾನ್ಯವಾಗಿ ಬರಕ್ಕೆ ನಲುಗುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಹಾಸನ ಜಿಲ್ಲೆಗಳಿವೆ.

ಕಂದಾಯ ಇಲಾಖೆಯು ಆಗಸ್ಟ್‌ನಲ್ಲಿಯೇ 30 ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳು ಎಂದು ಗುರುತಿಸಿವೆ ಎನ್ನಲಾಗಿದೆ. ಸುಮಾರು 55 ಕ್ಕೂ ಅಧಿಕ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರದ ಸ್ಪಂದನೆ?: ರಾಜ್ಯ ಸರಕಾರ ಈಗಾಗಲೇ ಪ್ರವಾಹದಿಂದಾಗಿ 38 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಆದರೆ, ಹಲವು ದಿನಗಳ ಬಳಿಕ ಮಧ್ಯಂತರ ಪರಿಹಾರವಾಗಿ 1200 ಕೋಟಿಯಷ್ಟೇ ನೀಡಿದೆ. ಇದರ ನಡುವೆ ಬರ ಪರಿಹಾರದ ವರದಿಗೆ ಕೇಂದ್ರ ಸ್ಪಂದಿಸುವುದಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News