ಅತ್ಯಾಚಾರ ಆರೋಪಿ ಚಿನ್ಮಯಾನಂದನ ಬೆಂಬಲಕ್ಕೆ ನಿಂತ ಸಂತರ ಮಂಡಳಿ

Update: 2019-10-08 17:51 GMT

ಪ್ರಯಾಗ್‌ರಾಜ್,ಅ.8: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದನನ್ನು ಬೆಂಬಲಿಸಲು ಹಿಂದು ಸಂತರ ಶ್ರೇಷ್ಟ ಮಂಡಳಿ ಅಖಿಲ ಭಾರತೀಯ ಅಖಾರ ಪರಿಷದ್ (ಎಬಿಎಪಿ) ನಿರ್ಧರಿಸಿದೆ. ಈ ಪ್ರಕರಣದಲ್ಲಿ ಚಿನ್ಮಯಾನಂದನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಪರಿಷದ್ ದೂರಿದೆ.

ಅಕ್ಟೋಬರ್ 10ರಂದು ಎಬಿಎಪಿ ಹರಿದ್ವಾರದಲ್ಲಿ ನಡೆಸುವ ಸಭೆಯಲ್ಲಿ ಚಿನ್ಮಯಾನಂದನನ್ನು ಸಂತ ಸಮುದಾಯದಿಂದ ಉಚ್ಛಾಟಿಸಲಾಗುವುದು ಎಂದು ಮಹಂತಾ ನರೇಂದ್ರ ಗಿರಿ ಈ ಹಿಂದೆ ತಿಳಿಸಿದ್ದರು. ಆದರೆ ಸೋಮವಾರದಂದು ತನ್ನ ಹೇಳಿಕೆ ಬದಲಿಸಿದ ಅವರು ನಾವು ಚಿನ್ಮಯಾನಂದರಿಗೆ ಬೆಂಬಲ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಚಿನ್ಮಯಾನಂದರಿಗೆ ಅನ್ಯಾಯ ಮಾಡಲಾಗಿದೆ. ಸಂತರ ಘನತೆಗೆ ಕುಂದು ತರಲು ಹುನ್ನಾರ ನಡೆಯುತ್ತಿದೆ ಮತ್ತು ಈ ಸಮಯದಲ್ಲಿ ನಾವು ಚಿನ್ಮಯಾನಂದರನ್ನು ಒಬ್ಬಂಟಿಯಾಗಿ ಬಿಡುವಂತಿಲ್ಲ. ಈ ವೀಡಿಯೊವನ್ನು ಚಿತ್ರೀಕರಿಸಿದ ಸಂದರ್ಭದಲ್ಲಿ ಚಿನ್ಮಯಾನಂದರಿಗೆ ಅಮಲು ಪದಾರ್ಥ ನೀಡಿದಂತೆ ಕಾಣುತ್ತದೆ. ಈ ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಪಾತ್ರ ಸಂಶಯಕ್ಕೆ ಹೊರತಲ್ಲ ಎಂದು ಗಿರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಮತ್ತು ಆಕೆಯ ಸಹಚರರು ಹಣ ಕೇಳುವ ವೀಡಿಯೊ ಬಹಿರಂಗಗೊಂಡ ನಂತರ ಈ ಪ್ರಕರಣದಲ್ಲಿ ಚಿನ್ಮಯಾನಂದ ವಿರುದ್ಧ ಪಿತೂರಿ ನಡೆದಿದೆ ಎಂದು ಸಂತರು ನಿರ್ಧರಿಸಿದ್ದಾರೆ ಎಂದು ಗಿರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News